ಸುದ್ದಿಗಳು

ಕಾನೂನು ವಿದ್ಯಾರ್ಥಿಯೊಬ್ಬರನ್ನು ಉತ್ತೀರ್ಣಗೊಳಿಸುವ ಕರ್ನಾಟಕ ಹೈಕೋರ್ಟ್ ಆದೇಶ ಇತರರಿಗೆ ಅನ್ವಯವಾಗದು: ಸುಪ್ರೀಂಕೋರ್ಟ್‌

ಹೈಕೋರ್ಟ್ ಆದೇಶ ಪ್ರತಿವಾದಿ ವಿದ್ಯಾರ್ಥಿಗೆ ಮಾತ್ರ ಅನ್ವಯವಾಗಲಿದ್ದು ಈ ಆದೇಶವನ್ನು ಬೇರೆ ವಿದ್ಯಾರ್ಥಿಗಳಿಗೆ ಅನ್ವಯಿಸುವಂತಿಲ್ಲ ಎಂದು ಪೀಠ ಮಧ್ಯಂತರ ಆದೇಶ ನೀಡಿದೆ.

Bar & Bench

ನಾಲ್ಕನೇ ವರ್ಷದ ವಿದ್ಯಾರ್ಥಿಯನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಉತ್ತೀರ್ಣಗೊಳಿಸುವ ಸಂಬಂಧ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಯುಐ) ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಹೈಕೋರ್ಟ್‌ ಆದೇಶ ಪ್ರತಿವಾದಿ ವಿದ್ಯಾರ್ಥಿ ಹೃದಯ್‌ಗೆ ಮಾತ್ರ ಅನ್ವಯವಾಗಲಿದ್ದು ಈ ಆದೇಶವನ್ನು ಬೇರೆ ವಿದ್ಯಾರ್ಥಿಗಳಿಗೆ ಅನ್ವಯಿಸುವಂತಿಲ್ಲ ಎಂದು ನ್ಯಾಯಾಲಯ ಮಧ್ಯಂತರ ಆದೇಶವನ್ನು ಕೂಡ ನೀಡಿದೆ.

ವಿಷಯವೊಂದರಲ್ಲಿ ಅನುತ್ತೀರ್ಣರಾಗಿದ್ದ ಕಾರಣ ಮುಂದಿನ ವರ್ಷಕ್ಕೆ ಪ್ರವೇಶ ನೀಡಲು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರ ಮಗನಾದ ಪ್ರತಿವಾದಿ ವಿದ್ಯಾರ್ಥಿಗೆ ಎನ್‌ಎಲ್‌ಎಸ್‌ಐಯು ದಾಖಲಾತಿ ನಿರಾಕರಿಸಿತ್ತು. ಆದರೆ ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೃಷ್ಣ ಎಸ್‌ ದೀಕ್ಷಿತ್‌ ಅವರಿದ್ದ ಪೀಠ 2020 ರ ನವೆಂಬರ್‌ನಲ್ಲಿ ಎನ್‌ಎಲ್‌ಎಸ್‌ಐಯು ನಿರ್ಧಾರವನ್ನು ತಳ್ಳಿಹಾಕಿತ್ತು.

ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದು ವಿಶ್ವವಿದ್ಯಾಲಯವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಹಿರಿಯ ನ್ಯಾಯವಾದಿ ಸಜ್ಜನ್‌ ಪೂವಯ್ಯ ಎನ್‌ಎಲ್‌ಎಸ್‌ಯುಐ ಪರವಾಗಿ ವಾದ ಮಂಡಿಸಿದ್ದರು. ಅವರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು.

ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ಪಿ ಬಿ ಭಜಂತ್ರಿ ಅವರ ಪುತ್ರರಾಗಿರುವ ಪ್ರತಿವಾದಿ ಮಾರ್ಚ್ 13 ರಂದು ಮಕ್ಕಳ ಹಕ್ಕುಗಳ ಕಾನೂನು ಕುರಿತ ವಿಷಯದಲ್ಲಿ ಪರೀಕ್ಷೆ ಬರೆದಿದ್ದರು. ಪ್ರಾಜೆಕ್ಟ್‌ ವರ್ಕ್‌ನಲ್ಲಿ ಕೃತಿಚೌರ್ಯ ಮಾಡಿದ್ದರೆನ್ನಲಾದ ಕಾರಣಕ್ಕೆ ಪರೀಕ್ಷೆಯಲ್ಲಿ ಅವರಿಗೆ "ಎಫ್ ಗ್ರೇಡ್" ನೀಡಲಾಗಿತ್ತು. ಇದಲ್ಲದೆ ನಾಲ್ಕನೇ ವರ್ಷಕ್ಕೆ ಉತ್ತೀರ್ಣರಾಗಲು ಮೂರನೇ ತ್ರೈಮಾಸಿಕದ ವಿಶೇಷ ಪುನರಾವರ್ತನೆ ಪರೀಕ್ಷೆಗೆ ಕೂಡ ಅವರಿಗೆ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.