ಅಕ್ರಮ ಸಾಗುವಳಿ ಆರೋಪದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ವೆಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಮೀನಿನಲ್ಲಿ ಬೆಳೆದಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಕಡಿದು ಹಾಕಿದ ತಹಶೀಲ್ದಾರ್ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿವಾದಿತ ಜಮೀನಿನ ವಿಚಾರದಲ್ಲಿ ಸದ್ಯ ಯಾವುದೇ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಿದೆ.
ಅಲ್ಲದೆ, ನ್ಯಾಯಾಲಯದ ಮುಂದಿನ ಆದೇಶದವರೆಗೆ ವಿವಾದಿತ ಆಸ್ತಿಗೆ ಅಧಿಕಾರಿಗಳು ಪ್ರವೇಶಿಸಬಾರದು ಎಂದು ನಿರ್ದೇಶಿಸಿದೆ.
ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಜಮೀನು ಸಾಗುವಳಿದಾರರಾದ ಕುಮಾರಿ ಟಿ ಎನ್ ಮೋನಿಕಾ ಸಲ್ಲಿಸಿದ್ದ ಅರ್ಜಿಯನ್ನು ದೀಪಾವಳಿ ರಜಾದಿನದಂದು ತುರ್ತಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಶೇಷ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಕೋಲಾರ ತಹಶೀಲ್ದಾರ್ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸತತ ಸರ್ಕಾರಿ ರಜೆಗಳಿರುವುದು ತಿಳಿದಿದ್ದರೂ, ಅರ್ಜಿದಾರರಿಗೆ ಕಾನೂನು ಪರಿಹಾರ ಪಡೆಯಲು ಅವಕಾಶ ನೀಡದೆ ಏಕಾಏಕಿ ಕ್ರಮ ಕೈಗೊಂಡಿದ್ದೇಕೆ ಎಂದು ಪ್ರಶ್ನಿಸಿದರು.
“ನಿಮ್ಮ ಈ ಆತುರದ ಕ್ರಮದಿಂದ ರಜಾದಿನವಾದ ಇಂದು ಹೈಕೋರ್ಟ್ನಲ್ಲಿ ನೂರು ಜನ ಕೆಲಸ ಮಾಡುವಂತಾಗಿದೆ. ನವೆಂಬರ್ 7ರಂದು ನೀವು ಕ್ರಮ ಕೈಗೊಳ್ಳದಿದ್ದರೆ ಸ್ವರ್ಗವೇನು ಧರೆಗೆ ಇಳಿದು ಬರುತ್ತಿರಲಿಲ್ಲ” ಎಂದು ಪೀಠ ತಹಶೀಲ್ದಾರ್ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿವಾದಿತ ಜಮೀನಿನ ಸಂಬಂಧ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಿತು. ಪ್ರಕರಣದಲ್ಲಿ ಸರ್ಕಾರದ ನಿಲುವು ತಿಳಿಸುವಂತೆ ಹೆಚ್ಚುವರಿ ಸರ್ಕಾರಿ ವಕೀಲ ಶಮಂತ್ ನಾಯಕ್ ಅವರಿಗೆ ಸೂಚಿಸಿತು.
ರಾಜ್ಯ ಸರ್ಕಾರ, ಕೋಲಾರ ಜಿಲ್ಲಾಡಳಿತ, ತಹಶೀಲ್ದಾರ್ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಪೀಠ, ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು, ಅರ್ಜಿದಾರರ ಅಜ್ಜ ಹಲವು ದಶಕಗಳಿಂದ ವಿವಾದಿತ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, 2023ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಜಮೀನು ಸಕ್ರಮಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಇನ್ನೂ ಪರಿಶೀಲನೆಯಲ್ಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಮಧ್ಯೆ, ಯಾವುದೇ ಮುಂಚಿತ ನೋಟಿಸ್ ನೀಡದೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲು-ಸಾಲು ಸರ್ಕಾರಿ ರಜೆಗಳಿರುವ ಸಂದರ್ಭವನ್ನು ಬಳಸಿಕೊಂಡು ನವೆಂಬರ್ 7ರಂದು ಮಧ್ಯಾಹ್ನ 3 ಗಂಟೆಗೆ ತಹಶೀಲ್ದಾರ್ ಪೊಲೀಸರ ಹಾಗೂ ಇತರ ಆಡಳಿತ ಸಿಬ್ಬಂದಿಯೊಂದಿಗೆ ಜಮೀನಿಗೆ ಪ್ರವೇಶಿಸಿ, ಎರಡು ವರ್ಷಗಳಿಂದ ಬೆಳೆಸಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಕಡಿದು ಹಾಕಿದ್ದಾರೆ ಎಂದು ಆರೋಪಿಸಿದರು.
ನವೆಂಬರ್ 15 ಮತ್ತು 16ರಂದು ಅರ್ಜಿದಾರರ ವಿವಾಹ ನಿಗದಿಯಾಗಿದ್ದು, ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದರೂ ತಹಶೀಲ್ದಾರ್ ಅದಕ್ಕೆ ಸ್ಪಂದಿಸಿಲ್ಲ ಎಂದು ವಕೀಲರು ವಾದಿಸಿದರು.
ಅಲ್ಲದೆ, ಸಾಗುವಳಿ ಜಮೀನನ್ನು ಸಕ್ರಮಗೊಳಿಸಲು ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಸಮಿತಿಯೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.