Greenpeace logo, Karnataka HC 
ಸುದ್ದಿಗಳು

ವಿದೇಶಿ ದೇಣಿಗೆ: ಗ್ರೀನ್‌ಪೀಸ್‌ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ದೂರು ರದ್ದುಪಡಿಸಿದ ಹೈಕೋರ್ಟ್‌

ಗ್ರೀನ್‌ಪೀಸ್‌ ಕಾರ್ಯಕಾರಿ ನಿರ್ದೇಶಕ ಕ್ಷಿತಿಜಾ ಅರಸ್‌ ಅರ್ಜಿಯನ್ನು ಹೈಕೋರ್ಟ್‌ ಸಮನ್ವಯ ಪೀಠವು ಪುರಸ್ಕರಿಸಿದೆ. ಹೀಗಾಗಿ, ಇದು ಆ ತೀರ್ಪಿನ ವ್ಯಾಪ್ತಿಗೆ ಬರಲಿದೆ ಎಂದು ಗ್ರೀನ್‌ಪೀಸ್‌ ವಾದಿಸಿತ್ತು.

Bar & Bench

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೇಮಾ) ನಿಬಂದನೆಗಳನ್ನು ಉಲ್ಲಂಘಿಸಿದ್ದ ಆರೋಪದ ಮೇಲೆ ಗ್ರೀನ್‌ಪೀಸ್‌ ಎನ್ವೈರನ್‌ಮೆಂಟ್‌ ಟ್ರಸ್ಟ್‌ ಮತ್ತು ಅದರ ಸಂಬಂಧಿತ ಸಂಸ್ಥೆ ಗ್ರೀನ್‌ಪೀಸ್‌ ಇಂಡಿಯಾ ಸೊಸೈಟಿ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ದೂರನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ದಾಖಲಿಸಿರುವ ದೂರು ರದ್ದತಿ ಕೋರಿ ಗ್ರೀನ್‌ಪೀಸ್‌ ಎನ್ವೈರನ್‌ಮೆಂಟ್‌ ಟ್ರಸ್ಟ್‌ ಮತ್ತು ಗ್ರೀನ್‌ಪೀಸ್‌ ಇಂಡಿಯಾ ಸೊಸೈಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಪ್ರಕರಣದ ಸಂಬಂದ ಇ ಡಿಯು ಜಾರಿ ಮಾಡಿದ್ದ ಷೋಕಾಸ್‌ ನೋಟಿಸ್‌ ಅನ್ನೂ ನ್ಯಾಯಾಲಯ ವಜಾಗೊಳಿಸಿದೆ.

“ಫೇಮಾ ಕಾಯಿದೆಯ ಸೆಕ್ಷನ್‌ 6(3)(b) ಕೈಬಿಟ್ಟ ಬಳಿಕ ಪ್ರಕ್ರಿಯೆ ಆರಂಭಿಸಲಾಗಿದೆ ಎನ್ನುವುದರಲ್ಲಿ ಯಾವುದೇ ವಿವಾದವಿಲ್ಲ. ಇದೇ ಆರೋಪ ಸಂಬಂಧಿತ ಪ್ರಕರಣದಲ್ಲಿ ಸಮನ್ವಯ ಪೀಠವು ಮಾಡಿರುವ ಆದೇಶ ಪರಿಗಣಿಸಿ ಈ ಅರ್ಜಿ ಪುರಸ್ಕರಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ಡೈರೆಕ್ಟ್‌ ಡೈಲಾಗ್‌ ಇನಿಶಿಯೇಟಿವ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಜೊತೆಗೂಡಿ ಹಣ ಸಂಗ್ರಹಿಸಿ, ಅದನ್ನು ಗ್ರೀನ್‌ಪೀಸ್‌ ಇಂಡಿಯಾದ ನಿರ್ವಹಣೆಗೆ ಬಳಕೆ ಮಾಡಲಾಗುತ್ತಿತ್ತು. ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿ ಗ್ರೀನ್‌ಪೀಸ್‌ ಪರವಾನಗಿ ರದ್ದುಪಡಿಸಿದ ಬಳಿಕ ಹೀಗೆ ಮಾಡಲಾಗಿದೆ ಎಂದು ಇ ಡಿ ಆರೋಪಿಸಿತ್ತು.

ಇದನ್ನು ನಿರಾಕರಿಸಿದ್ದ ಗ್ರೀನ್‌ಪೀಸ್‌, ದೇಣಿಗೆ ನೀಡುವವರ ಜೊತೆ ಸಂಪರ್ಕದಲ್ಲಿರಲು ಡಿಡಿಐಪಿಎಲ್‌ ಜೊತೆ ಪಾಲುದಾರಿಕೆ ಹೊಂದಿದ್ದು, ದೇಣಿಗೆ ಹಣವನ್ನು ನೇರವಾಗಿ ಗ್ರೀನ್‌ಪೀಸ್‌ ಪಡೆದಿದೆ ಎಂದಿತ್ತು.

ಗ್ರೀನ್‌ಪೀಸ್‌ ಪರವಾಗಿ ವಕೀಲೆ ಮೋನಿಕಾ ಪಾಟೀಲ್‌, ಕೇಂದ್ರ ಸರ್ಕಾರವನ್ನು ವಕೀಲ ಎಂ ಉನ್ನಿಕೃಷ್ಣನ್‌ ಪ್ರತಿನಿಧಿಸಿದ್ದರು.

ಗ್ರೀನ್‌ಪೀಸ್‌ ಸಂಸ್ಥೆಯು ಅಭಿವೃದ್ಧಿ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ ಎಂದು ಕೇಂದ್ರ ಗೃಹ ಇಲಾಖೆ ಆರೋಪಿಸಿತ್ತು. ಇದರ ಆಧಾರದಲ್ಲಿ ಎಫ್‌ಸಿಆರ್‌ಎ ಪರವಾನಗಿ ರದ್ದುಪಡಿಸಲಾಗಿತ್ತು. ಇದರ ಬೆನ್ನಿಗೇ ಗ್ರೀನ್‌ಪೀಸ್‌ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು.