Karnataka High Court 
ಸುದ್ದಿಗಳು

ಮದುವೆಯನ್ನು ಪ್ರಸ್ತದಿಂದ ಸಂಪೂರ್ಣಗೊಳಿಸದ ಆರೋಪ: ಪತಿ ವಿರುದ್ದದ ಕ್ರೌರ್ಯ ಪ್ರಕರಣ ವಜಾ ಮಾಡಿದ ಹೈಕೋರ್ಟ್‌

ಕಾನೂನು ಪ್ರಕ್ರಿಯೆ ಮುಂದುವರಿಯಲು ಅನುಮತಿಸುವುದು ಕಿರುಕುಳಕ್ಕೆ ಆಸ್ಪದ ನೀಡಿದಂತಾಗಲಿದ್ದು, ಇದು ಕಾನೂನು ದುರ್ಬಳಕೆಯಾಗಲಿದೆ. ಅಲ್ಲದೇ ನ್ಯಾಯದಾನ ವಿರೋಧಿ ಕ್ರಮವಾಗಲಿದೆ ಎಂದಿರುವ ನ್ಯಾಯಾಲಯ.

Bar & Bench

ಪತಿಯು ಬ್ರಹ್ಮಕುಮಾರಿ ಸಮಾಜದ ಸಹೋದರಿಯರ ಅನುಯಾಯಿಯಾಗಿದ್ದು, ಮದುವೆಯನ್ನು ಪ್ರಸ್ತಕಾರ್ಯದಿಂದ ಸಂಪೂರ್ಣಗೊಳಿಸಿಲ್ಲ ಎಂದು ಆರೋಪಿಸಿ ಪತ್ನಿಯು ದಾಖಲಿಸಿದ್ದ ದೌರ್ಜನ್ಯ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ [ಅಯ್ಯಪ್ಪ ಎಂ ಬಿ ವರ್ಸಸ್‌ ಕರ್ನಾಟಕ ರಾಜ್ಯ].

ಪತ್ನಿಯ ದೂರಿನ ಮೇರೆಗೆ ದಾಖಲಾಗಿದ್ದ ಐಪಿಸಿ ಸೆಕ್ಷನ್‌ 498ಎ ಪ್ರಕರಣದ ರದ್ದತಿ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಪ್ರಕರಣದಲ್ಲಿನ ಅಂಶಗಳು ದೌರ್ಜನ್ಯಕ್ಕೆ ಸಮನಾಗಿದ್ದು, ವಿಚ್ಛೇದನಕ್ಕೆ ಆಧಾರವಿದೆ. ಹೀಗಾಗಿ, ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಲು ಅವಕಾಶ ಮಾಡಿಕೊಡಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಪತಿಯ ವಿರುದ್ಧದ ಆರೋಪದಲ್ಲಿ ಯಾವುದೇ ಅಂಶಗಳು ಕಂಡುಬರುತ್ತಿಲ್ಲ. ಪ್ರಕ್ರಿಯೆ ಮುಂದುವರಿಯಲು ಅವಕಾಶ ಮಾಡಿಕೊಟ್ಟರೆ ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದ್ದು, ಅಂತಿಮವಾಗಿ ನ್ಯಾಯದಾನಕ್ಕೆ ವಿರುದ್ಧವಾಗಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅತ್ತೆ-ಮಾವ ವಿರುದ್ಧವೂ ಯಾವುದೇ ಪ್ರಕರಣವಿಲ್ಲ. ಅವರು ದಂಪತಿಯ ಜೊತೆ ನೆಲೆಸಿಯೇ ಇಲ್ಲ” ಎಂದು ಆದೇಶದಲ್ಲಿ ನ್ಯಾಯಾಲಯ ದಾಖಲಿಸಿದೆ.

ವರದಕ್ಷಿಣೆ ನಿಷೇಧ ಕಾಯಿದೆ ಮತ್ತು ಕ್ರೌರ್ಯ ಪ್ರಕರಣ ರದ್ದುಪಡಿಸುವಂತೆ ಅರ್ಜಿದಾರ ಪತಿ ಕೋರಿದ್ದರು. ಪತಿಯ ಮನೆಯಲ್ಲಿ ಪತ್ನಿಯು ಕೇವಲ 28 ದಿನ ಮಾತ್ರ ನೆಲೆಸಿದ್ದು, ಅರ್ಜಿದಾರರು ಮತ್ತು ದೂರುದಾರೆಯ ನಡುವಿನ ವಿವಾಹವು ಬೇಗ ಮುರಿದು ಬಿದ್ದಿತ್ತು.

ಇದರ ಬೆನ್ನಿಗೇ ಪತ್ನಿಯು ಪತಿಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದು, ಕ್ರೌರ್ಯದ ಆಧಾರದ ಮೇಲೆ ಹಿಂದೂ ವಿವಾಹ ಕಾಯಿದೆ ಅಡಿ ಮದುವೆ ರದ್ದತಿ ಕೋರಿದ್ದರು. 2022ರ ನವೆಂಬರ್‌ನಲ್ಲಿ ವಿಚಾರಣಾಧೀನ ನ್ಯಾಯಾಲಯವು ವಿಚ್ಛೇದಕ್ಕೆ ಅನುಮತಿಸಿತ್ತು.

ತಾನು ಪತಿಯನ್ನು ಸಂಪರ್ಕ ಮಾಡಲು ಯತ್ನಿಸಿದಾಗಲೆಲ್ಲಾ ಅವರು ಬ್ರಹ್ಮಕುಮಾರಿ ಸಹೋದರಿಯರ ವಿಡಿಯೊ ವೀಕ್ಷಣೆಯಲ್ಲಿ ತೊಡಗಿರುತ್ತಿದ್ದರು. ದೈಹಿಕ ಸಂಬಂಧದಲ್ಲಿ ತನಗೆ ಆಸಕ್ತಿ ಇಲ್ಲ ಎಂದು ಪತಿ ಹಲವು ಬಾರಿ ಹೇಳಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು.

ಆದರೆ, ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪ ಮಾಡಲಾಗಿರಲಿಲ್ಲ. ಪತಿಯ ವಿರುದ್ಧ ಪತ್ನಿ ಮಾಡಿರುವ ಆರೋಪಗಳು ಕ್ಷುಲ್ಲಕವಾಗಿವೆ ಎಂಬುದನ್ನು ಪರಿಗಣಿಸಿದ ನ್ಯಾಯಾಲಯವು “ಸುಪ್ರೀಂ ಕೋರ್ಟ್‌ ಹೇಳಿರುವ ಪ್ರಕಾರ ವೈವಾಹಿಕ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಪರಾಧ ಕಂಡುಬರದಿದ್ದರೆ ಅದನ್ನು ಮುಂದುವರಿಸಬಾರದು ಎಂದಿದೆ” ಎಂದು ಹೇಳಿದೆ.

ಈ ನೆಲೆಯಲ್ಲಿ ಪತಿಯ ಅರ್ಜಿ ಪುರಸ್ಕರಿಸಿ, ಕ್ರಿಮಿನಲ್‌ ಪ್ರಕರಣವನ್ನು ವಜಾ ಮಾಡಲಾಗಿದೆ. ಅರ್ಜಿದಾರ ಪತಿಯನ್ನು ವಕೀಲ ಎಂಆರ್‌ಸಿ ಮನೋಹರ್‌ ಪ್ರತಿನಿಧಿಸಿದ್ದರು. ಪ್ರತಿವಾದಿಗಳನ್ನು ಸರ್ಕಾರದ ವಕೀಲೆ ಕೆ ಪಿ ಯಶೋಧಾ ಮತ್ತು ಕೆ ಎಸ್‌ ಕಾರ್ತಿಕ್‌ ಕಿರಣ್‌ ಪ್ರತಿನಿಧಿಸಿದ್ದರು.