Karnataka HC
Karnataka HC 
ಸುದ್ದಿಗಳು

ಚೀನಾದ ಕಂಪೆನಿಯ ಜೊತೆ ಒಪ್ಪಂದ ಹೊಂದಿರುವ ಕಂಪೆನಿಗೆ ದೊರೆತಿದ್ದ ಬಿಎಚ್‌ಇಎಲ್‌ ಟೆಂಡರ್‌ ವಜಾ ಮಾಡಿದ ಹೈಕೋರ್ಟ್‌

Bar & Bench

ಹಣಕಾಸು ಇಲಾಖೆಯ ಆದೇಶಕ್ಕೆ ವಿರುದ್ಧವಾಗಿ ಚೀನಾದ ಕಂಪೆನಿಯ ಜೊತೆಗೆ ಒಕ್ಕೂಟದ ಒಪ್ಪಂದ ಹೊಂದಿರುವ ಕಂಪೆನಿಗೆ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್‌ಇಎಲ್‌) ಟೆಂಡರ್‌ ಮಂಜೂರು ಮಾಡಿದ್ದನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ [ಮಕ್ವಬೆರ್‌ ಬೀಕೆ ಪ್ರೈ ಲಿ ವರ್ಸಸ್‌ ಬಿಎಚ್‌ಇಎಲ್‌ ಮತ್ತು ಇತರರು].

ತೆಲಂಗಾಣದಲ್ಲಿ ಥರ್ಮಲ್‌ ಪವರ್‌ ಸ್ಟೇಷನ್‌ಗೆ ಬೂದಿ ನಿರ್ವಹಣಾ ಕೇಂದ್ರ ಆರಂಭಿಸಲು ಬಿಟಿಎಲ್‌ ಇಪಿಸಿ ಲಿಮಿಟೆಡ್‌ಗೆ ಬಿಎಚ್‌ಇಎಲ್‌ ಟೆಂಡರ್‌ ನೀಡಿರುವುದನ್ನು ಪ್ರಶ್ನಿಸಿ ಮಕ್ವಾಬರ್‌ ಬೀಕೆ ಪ್ರೈ. ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಭಾರತದ ಜೊತೆ ಗಡಿ ಹಂಚಿಕೊಳ್ಳುವ ದೇಶಗಳ ಬಿಡ್ಡುದಾರರು (ಹರಾಜುದಾರರು) ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವುದನ್ನು 2020ರ ಜುಲೈ 23ರಂದು ಕೇಂದ್ರದ ಹಣಕಾಸು ಇಲಾಖೆಯು ಕಡ್ಡಾಯಗೊಳಿಸಿದೆ. ರಾಷ್ಟ್ರೀಯ ಭದ್ರತೆ, ವಿಶೇಷವಾಗಿ ರಕ್ಷಣಾ ದೃಷ್ಟಿಯಿಂದ ಹಣಕಾಸು ಇಲಾಖೆ ಆದೇಶ ಮಾಡಿದ್ದು, ಅದನ್ನು ಸಂಪೂರ್ಣವಾಗಿ ಪಾಲಿಸುವುದನ್ನು ಬಿಎಚ್‌ಇಎಲ್‌ ಖಾತರಿಪಡಿಸಬೇಕಿತ್ತು ಎಂದು ಪೀಠ ಹೇಳಿದೆ.

“ರಾಷ್ಟ್ರೀಯ ಭದ್ರತೆಯ ಭಾಗವಾಗಿ ರಕ್ಷಣಾ ದೃಷ್ಟಿಯಿಂದ ಹಣಕಾಸು ಇಲಾಖೆಯು ಆದೇಶ ಮಾಡಿದ್ದು, ಅದಕ್ಕೆ ಪ್ರತಿವಾದಿಗಳು ವಾದಿಸಿರುವಂತೆ ಸಾರ್ವಜನಿಕ ಹಿತಾಸಕ್ತಿಗಿಂತ ರಾಷ್ಟ್ರೀಯ ಮಹತ್ವವಿದೆ. ಹೀಗಾಗಿ, ಹಣಕಾಸು ಇಲಾಖೆಯ ಆದೇಶವನ್ನು ಸಂಪೂರ್ಣವಾಗಿ ಪಾಲನೆ ಮಾಡಿರುವುದನ್ನು ಬಿಎಚ್‌ಇಎಲ್‌ ಖಾತರಿಪಡಿಸಬೇಕಿತ್ತು” ಎಂದು ನ್ಯಾಯಾಲಯ ಹೇಳಿದೆ.

ಒಕ್ಕೂಟದ ಭಾಗವಾಗಿರುವ ಚೀನಾ ಸಂಸ್ಥೆ ಹಾಕಿರುವ ಬಿಡ್‌ ಅನ್ನು ಒಪ್ಪಿಕೊಳ್ಳುವ ಮೂಲಕ ಬಿಎಚ್‌ಇಎಲ್‌ ಟೆಂಡರ್‌ ಷರತ್ತು ಉಲ್ಲಂಘಿಸಿರುವುದಲ್ಲದೇ ಹಣಕಾಸು ಇಲಾಖೆಯ ಆದೇಶವನ್ನು ಉಲ್ಲಂಘಿಸಿದೆ ಎಂದು ಮೇಲ್ಮನವಿದಾರ ಕಂಪೆನಿ ವಾದಿಸಿತ್ತು.

ಟೆಂಡರ್‌ ಭಾಗವಾಗಿ ಪೂರ್ವ ಅರ್ಹತಾ ಅಗತ್ಯದ (ಪಿಕ್ಯುಆರ್‌) ಅಡಿಯಲ್ಲಿ ಬಿಟಿಎಲ್‌ ಇಪಿಸಿ ಲಿಮಿಟೆಡ್‌ ಅರ್ಹವಾಗಿಲ್ಲ. ಅದಾಗ್ಯೂ, ಚೀನಾದ ಕಂಪೆನಿಯ ಜೊತೆಗೆ ಒಕ್ಕೂಟ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅದು ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕಿತ್ತು. ಈ ಕಡ್ಡಾಯ ಷರತ್ತನ್ನು ಪಾಲಿಸದಿರುವುದರಿಂದ ಬಿಡ್‌ ಅಮಾನ್ಯವಾಗಿದೆ ಎಂದು ಮೇಲ್ಮನವಿದಾರರು ವಾದಿಸಿದ್ದರು.

ಇದಕ್ಕೆ ಪ್ರತಿವಾದಿಗಳು “ಎರಡು ಸಂಸ್ಥೆಗಳ ನಡುವಿನ ಒಪ್ಪಂದವು ವಾಸ್ತವಿಕವಾಗಿ ಒಕ್ಕೂಟ ಒಪ್ಪಂದವಲ್ಲ. ಆದರೆ, ಅದು ಎರಡು ಸಂಸ್ಥೆಗಳ ಸಹಯೋಗಕ್ಕೆ (ಟೈ-ಅಪ್‌) ಸಂಬಂಧಿಸಿದ ಒಪ್ಪಂದ ಮಾತ್ರ. ಬಿಟಿಎಲ್‌ ಇಪಿಸಿ ಲಿಮಿಟೆಡ್‌ ಏಕೈಕ ಬಿಡ್ಡರ್‌ ಆಗಿದ್ದು, ಅದು ಪುಜಿಯಾನ್‌ ಲಾಂಗ್‌ಕಿಂಗ್‌ ಕೊ ಲಿಮಿಟೆಡ್‌ ಜೊತೆ ಜಂಟಿ ಬಿಡ್ಡಿಂಗ್‌ ಮಾಡಿಲ್ಲ. ಟೆಂಡರ್‌ ನೀಡಿದ ಬಳಿಕ ಸಾಕಷ್ಟು ಬೆಳವಣಿಗೆಯಾಗಿದ್ದು, ಹೊಸದಾಗಿ ಟೆಂಡರ್‌ ಪ್ರಕ್ರಿಯೆ ನಡೆಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ. ಏಕೆಂದರೆ ಅದು ಸಾಕಷ್ಟು ವಿಳಂಬವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುತ್ತದೆ” ಎಂದು ವಾದಿಸಿದ್ದರು.

ಪಿಕ್ಯುಆರ್‌ ಪರಿಶೀಲಿಸಿದ ನ್ಯಾಯಾಲಯವು ಬಿಟಿಎಲ್‌ ಇಪಿಸಿ ಲಿಮಿಟೆಡ್‌ ಅರ್ಹವಾಗಿಲ್ಲ. ಅದು ಚೀನಾದ ಸಂಸ್ಥೆಯ ಜೊತೆಗೆ ಒಕ್ಕೂಟ ಒಪ್ಪಂದ ಮಾಡಿಕೊಂಡಿದೆ ಎಂದಿದೆ. ಚೀನಾ ಕಂಪೆನಿಯ ಜೊತೆಗೆ ತನ್ನ ಸಹಯೋಗವು ಯೋಜನೆಗೆ ವಿನ್ಯಾಸ ಮತ್ತು ಎಂಜಿನಿಯರಿಂಗ್‌ ಸಹಾಯ ಮಾತ್ರವಾಗಿದೆ. ಹೀಗಾಗಿ, ಚೀನಾ ಕಂಪೆನಿಯು ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಅನಗತ್ಯ ಎಂಬ ಬಿಟಿಎಲ್‌ ಇಪಿಸಿ ಲಿಮಿಟೆಡ್‌ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಟೆಂಡರ್‌ ದಾಖಲೆಯನ್ನು ಉಲ್ಲೇಖಿಸಿರುವ ನ್ಯಾಯಾಲಯವು ವಿನ್ಯಾಸ ಮತ್ತು ಎಂಜಿನಿಯರಿಂಗ್‌ ಚಟುವಟಿಕೆಯನ್ನು ಬೇರೆ ಸಂಸ್ಥೆಯನ್ನು ಒಳಗೊಳ್ಳದೇ ಬಿಡ್ಡರ್‌ ಸ್ವಯಂ ಆಗಿ ನಡೆಸಬೇಕು ಎಂದು ಸ್ಪಷ್ಟಪಡಿಸಿರುವುದರತ್ತ ಬೆರಳು ಮಾಡಿದೆ. ಒಪ್ಪಂದದಲ್ಲಿನ ಮಾಹಿತಿಯಿಂದ ತಿಳಿಯುವುದೇನೆಂದರೆ ಬಿಟಿಎಲ್‌ ಇಪಿಸಿ ಲಿಮಿಟೆಡ್‌ ಕೆಲವು ವಿಚಾರದಲ್ಲಿ ತಾಂತ್ರಿಕ ಅರ್ಹತೆ ಹೊಂದಿಲ್ಲ. ಹೀಗಾಗಿ, ಚೀನಾ ಕಂಪೆನಿಯ ಜೊತೆಗೆ ಸಹಯೋಗ ಹೊಂದಲಾಗಿದೆ ಎಂಬುದನ್ನು ಪೀಠ ಪತ್ತೆ ಮಾಡಿದೆ.

ಮಧ್ಯಪ್ರವೇಶ ಮಾಡುವುದರಿಂದ ಯೋಜನೆ ವಿಳಂಬವಾಗಲಿದ್ದು, ಅದು ಆರ್ಥಿಕ ಹೊರೆಗೆ ನಾಂದಿ ಹಾಡುತ್ತದೆ ಎಂಬ ಬಿಎಚ್‌ಇಎಲ್‌ ಮತ್ತು ಬಿಟಿಎಲ್‌ ಇಪಿಸಿ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ. “ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವುದನ್ನು ಪಾಲಿಸದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಅಡ್ಡಿಯಾಗುತ್ತದೆ ಎಂಬುದನ್ನು ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧ ತೇಲಿ ಬಿಡಲಾಗದು” ಎಂದು ನ್ಯಾಯಾಲಯವು ಹೇಳಿದೆ.

ಮೇಲ್ಮನವಿದಾರ ಕಂಪೆನಿಗಿಂತ ಬಿಟಿಎಲ್‌ ಇಪಿಸಿ ಲಿಮಿಟೆಡ್‌ ಕಡಿಮೆ ಮೊತ್ತ ಬಿಡ್‌ ಮಾಡಿದೆ ಎಂಬುದಕ್ಕಾಗಿ ಬಿಎಚ್‌ಇಎಲ್‌ ಗುತ್ತಿಗೆ ನೀಡಬಾರದಿತ್ತು ಎಂದಿರುವ ನ್ಯಾಯಾಲಯವು ಮೇಲ್ಮನವಿದಾರರ ಬಿಡ್‌ ಅನ್ನು ಪುನರ್‌ ಪರಿಗಣಿಸುವಂತೆ ಬಿಎಚ್‌ಇಎಲ್‌ಗೆ ಆದೇಶಿಸಿದೆ. ಅಲ್ಲದೇ, ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಆದೇಶ ಪ್ರಶ್ನಿಸಲು ಅನುವು ಮಾಡಿಕೊಟ್ಟಿರುವ ನ್ಯಾಯಾಲಯವು ಆದೇಶವನ್ನು ನಾಲ್ಕು ವಾರಗಳ ಕಾಲ ತಡೆ ಹಿಡಿದಿದೆ.

Macawber Beekay Pvt Ltd Vs BHEL.pdf
Preview