ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುವುದಾಗಿ ಹೇಳಿಕೆ ನೀಡಿದ್ದಾರೆ ಎಂಬ ತಲೆಬರಹದ ಟಿವಿ9 ಸುದ್ದಿಯ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡಿದ್ದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಕೋಮು ದ್ವೇಷ ಪ್ರಚೋದನೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಕೇವಲ ಸುದ್ದಿಯೊಂದನ್ನು ಮರುಹಂಚಿಕೊಂಡು ಅದಕ್ಕೆ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ರಾಜೇಶ್ ರೈ ಕೆ ಅವರ ಏಕಸದಸ್ಯ ಪೀಠ ಆದೇಶಿಸಿದೆ.
“ಎರಡು ಪ್ರತ್ಯೇಕ ಗುಂಪುಗಳು ಅಥವಾ ಸಮುದಾಯಗಳ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖವಿಲ್ಲದಿದ್ದರೆ, ಅಂತಹ ಕೃತ್ಯವೊಂದರಿಂದಲೇ ಐಪಿಸಿ ಸೆಕ್ಷನ್ 153ಎ ಅಡಿಯ ಅಪರಾಧದ ಅಂಶಗಳು ಪೂರ್ಣಗೊಳ್ಳುವುದಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಟಿವಿ9 ಸುದ್ದಿಯ ಶೀರ್ಷಿಕೆಯಲ್ಲಿ “ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂದು ಉಲ್ಲೇಖಿಸಲಾಗಿದೆ. ಆದರೆ, ಆ ಸುದ್ದಿ ನೈಜವಾಗಿದೆಯೇ ಅಥವಾ ಅದರಲ್ಲಿನ ಹೇಳಿಕೆಗಳ ಸತ್ಯಾಸತ್ಯತೆ ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ ಎಂದು ನ್ಯಾಯಾಲಯ ದಾಖಲಿಸಿತು.
ಐಪಿಸಿ ಸೆಕ್ಷನ್ 153ಎ ಅಡಿ ಅಪರಾಧ ಸಾಬೀತಾಗಲು ಕನಿಷ್ಠ ಎರಡು ಪ್ರತ್ಯೇಕ ಗುಂಪುಗಳು ಅಥವಾ ಸಮುದಾಯಗಳ ನಡುವೆ ದ್ವೇಷ, ವೈಷಮ್ಯ ಅಥವಾ ಅಸಹನೆ ಬೆಳೆಸುವ ಉದ್ದೇಶ ಅಥವಾ ಪರಿಣಾಮ ಇರಬೇಕು ಎಂದು ನ್ಯಾಯಾಲಯ ಹೇಳಿದೆ.
“ಬೇರೆ ಯಾವುದೇ ಸಮುದಾಯ ಅಥವಾ ಗುಂಪಿನ ಉಲ್ಲೇಖವಿಲ್ಲದೆ ಕೇವಲ ಒಂದು ಸಮುದಾಯ ಅಥವಾ ಗುಂಪಿನ ಭಾವನೆಗಳನ್ನು ಕೆರಳಿಸುವುದರಿಂದ ಮಾತ್ರ ಸೆಕ್ಷನ್ 153ಎ ಅನ್ವಯಿಸುವುದಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
ಸಾಮುದಾಯಿಕ ಸಾಮರಸ್ಯಕ್ಕೆ ಧಕ್ಕೆ ತರುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆಯಿರುವ ಕೃತ್ಯಗಳಿಗೆ ಮಾತ್ರ ಈ ಸೆಕ್ಷನ್ ಅನ್ವಯಿಸುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಅಲ್ಲದೆ, ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟು ಕಾನೂನುಬದ್ಧವಾಗಿ ಅಸಮ್ಮತಿ ವ್ಯಕ್ತಪಡಿಸುವ ಹಕ್ಕು ಸಂವಿಧಾನದ ಮೂಲಭೂತ ಹಕ್ಕುಗಳ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕ್ಷುಲ್ಲಕ ಅಥವಾ ದುರುದ್ದೇಶಪೂರಿತ ದೂರುಗಳ ಆಧಾರದ ಮೇಲೆ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸುವುದರಿಂದ ಆರೋಪಿಯ ವ್ಯಕ್ತಿತ್ವ ಮತ್ತು ಘನತೆಗೆ ಗಂಭೀರ ಧಕ್ಕೆಯಾಗಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ದೂರಿನಲ್ಲಿನ ಆರೋಪಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡರೂ ಅರ್ಜಿದಾರರ ವಿರುದ್ಧ ಯಾವುದೇ ಅಪರಾಧ ಕೃತ್ಯ ಸಾಬೀತಾಗುವುದಿಲ್ಲ ಎಂದು ತೀರ್ಮಾನಿಸಿದ ನ್ಯಾಯಾಲಯ, “ಎಫ್‌ಐಆರ್ ಮತ್ತು ಮುಂದಿನ ವಿಚಾರಣಾ ಪ್ರಕ್ರಿಯೆಗಳನ್ನು ಮುಂದುವರಿಸುವುದು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂದು ಅಭಿಪ್ರಾಯಪಟ್ಟಿತು.
ಅದರಂತೆ, ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ವಿನೀತ್ ನಾರಾಯಣ್ ನಾಯಕ್ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಮುಂದಿನ ಪ್ರಕ್ರಿಯೆಗಳನ್ನು ರದ್ದುಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಅರುಣಾ ಶ್ಯಾಮ್ ಅವರು, ಅರ್ಜಿದಾರರು ಟಿವಿ9 ಪ್ರಸಾರ ಮಾಡಿದ್ದ ಸುದ್ದಿಯ ತುಣುಕನ್ನು ಮಾತ್ರ ಮರುಹಂಚಿಕೊಂಡಿದ್ದಾರೆ. ಯಾವುದೇ ನಿರ್ದಿಷ್ಟ ಸಮುದಾಯವನ್ನು ಅವಮಾನಿಸುವ ಅಥವಾ ದ್ವೇಷ ಹಾಗೂ ಹಿಂಸಾಚಾರಕ್ಕೆ ಪ್ರಚೋದಿಸುವ ಹೇಳಿಕೆ ನೀಡಿಲ್ಲ ಎಂದು ವಾದಿಸಿದರು.
ಅಲ್ಲದೆ, ಎಫ್‌ಐಆರ್ ದಾಖಲಿಸುವ ಮುನ್ನ ಸುದ್ದಿಯ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸಿಲ್ಲ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ವಾದಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು, ಹಿಂದೂಗಳಿಗೆ ಸೇರಿದ ಸಂಪತ್ತನ್ನು ಕಸಿದುಕೊಂಡು ಮುಸ್ಲಿಮರಿಗೆ ಮಾತ್ರ ಹಂಚುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕಿದೆ ಎಂಬರ್ಥದಲ್ಲಿ ಸುದ್ದಿ ತುಣುಕನ್ನು ಹಂಚಿಕೊಳ್ಳುವ ಮೂಲಕ ಅರ್ಜಿದಾರರು ಕೋಮು ದ್ವೇಷ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರತಿಪಾದಿಸಿದರು.
ಅಲ್ಲದೆ, ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಆರೋಪಗಳ ಕುರಿತು ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: 2024ರ ಏಪ್ರಿಲ್ 29ರಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ವಿನೀತ್ ನಾರಾಯಣ್ ನಾಯಕ್ ವಿರುದ್ಧ ಐಪಿಸಿ ಸೆಕ್ಷನ್ 153ಎ (ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವುದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಸಿ (ಇತರರ ಎಲೆಕ್ಟ್ರಾನಿಕ್ ಸಹಿ, ಪಾಸ್‌ವರ್ಡ್ ಅಥವಾ ವಿಶಿಷ್ಟ ಗುರುತಿನ ಮಾಹಿತಿಯನ್ನು ವಂಚನೆಯಿಂದ ಬಳಸುವುದು) ಅಡಿ ಎಫ್‌ಐಆರ್ ದಾಖಲಿಸಿದ್ದರು.
ಏಪ್ರಿಲ್ 22ರಂದು ಕೆಲವು ವ್ಯಕ್ತಿಗಳು 'BhikuMhatre (Modi's Family) @MumbaichaDon' ಎಂಬ ಸಾಮಾಜಿಕ ಜಾಲತಾಣದ ಖಾತೆಯಿಂದ ಟ್ವೀಟ್‌ಗಳನ್ನು ಮಾಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಪೈಕಿ ಒಂದು ಪೋಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಛಾಯಾಚಿತ್ರದೊಂದಿಗೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮರಿಗೆ ಸಂಪತ್ತನ್ನು ಹಂಚುವ ಉಲ್ಲೇಖವಿದೆ ಎಂಬರ್ಥದ ಟಿವಿ9 ಸುದ್ದಿಯ ತಲೆಬರಹವನ್ನು ಹಂಚಿಕೊಳ್ಳಲಾಗಿತ್ತು.
ಈ ಪೋಸ್ಟ್ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತುವ, ಸಾರ್ವಜನಿಕ ಶಾಂತಿಗೆ ಭಂಗ ತರುವ ಹಾಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಹೊಂದಿದೆ ಎಂದು ದೂರುದಾರ ಆರೋಪಿಸಿದ್ದರು.
ವಕೀಲ ಸುಯೋಗ್ ಹೇರಳೆ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದರು.