ಸಾರ್ವಜನಿಕ ಅಧಿಕಾರವನ್ನು ಜನರ ಸೇವೆಗಾಗಿ ನೀಡಲಾಗಿದೆಯೇ ಹೊರತು, ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಆಶ್ರಯ ಕಲ್ಪಿಸಲು ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಖಾರವಾಗಿ ಹೇಳಿದೆ.
ಅಧಿಕಾರವನ್ನು ಬಿಟ್ಟುಕೊಡಲು ಇಷ್ಟಪಡದ ವ್ಯಕ್ತಿಯೊಬ್ಬರ ಬಯಕೆಯು ಸಾರ್ವಜನಿಕ ಆಡಳಿತದ ಗತಿಯನ್ನು ನಿರ್ಧರಿಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ತೀಕ್ಷ್ಣವಾಗಿ ಅಭಿಪ್ರಾಯಪಟ್ಟಿದೆ.
2023ರ ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಶಾಸಕ ಗುರುರಾಜ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಭೂ ಮಂಜೂರಾತಿ ಸಮಿತಿಯನ್ನು ರಚಿಸಿತ್ತು. ಆದರೆ, ಚುನಾವಣೆಯಲ್ಲಿ ಗಂಟಿಹೊಳೆ ಅವರ ವಿರುದ್ಧ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ ಗೋಪಾಲ್ ಪೂಜಾರಿ ಅವರ ಕೋರಿಕೆ ಮೇರೆಗೆ ಅವರ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಸಮಿತಿಯನ್ನು ರಚಿಸಿ, 2023ರ ಡಿಸೆಂಬರ್ 4ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಈ ಅಧಿಸೂಚನೆಯನ್ನು ಪ್ರಶ್ನಿಸಿ ಗುರುರಾಜ ಗಂಟಿಹೊಳೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಡಿ ಕೆ ಸಿಂಗ್ ಮತ್ತು ನ್ಯಾಯಮೂರ್ತಿ ಎಚ್ ಶಾಂತಿಭೂಷಣ್ ಅವರ ವಿಭಾಗೀಯ ಪೀಠವು, ಬೈಂದೂರು ಕ್ಷೇತ್ರದ ಸಾಗುವಳಿ ಭೂಮಿ ಮಂಜೂರಾತಿಗಾಗಿ ಕೆ ಗೋಪಾಲ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಸಮಿತಿ ರಚಿಸಿದ್ದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿದೆ.
ಕರ್ನಾಟಕ ಭೂ ಕಂದಾಯ ನಿಯಮ 108-ಇಇ(1)(ಎ) ಅಡಿಯಲ್ಲಿ ಹೆಚ್ಚುವರಿ ಸಮಿತಿಯ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ವಸ್ತುನಿಷ್ಠ ಮಾನದಂಡಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಮಾರ್ಗಸೂಚಿಗಳಲ್ಲಿ ಸೂಕ್ತ ಕಾನೂನು ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ, ಸಂಬಂಧಿತ ಅನುಭವ, ಪ್ರಾಮಾಣಿಕತೆ, ಗೌಪ್ಯತೆ ಕಾಪಾಡುವ ಗುಣ ಮತ್ತು ದೋಷರಹಿತ ನಡವಳಿಕೆ ಸೇರಿದಂತೆ ಅಗತ್ಯ ಅರ್ಹತೆಗಳನ್ನು ಪರಿಗಣಿಸಬೇಕು ಎಂದು ಪೀಠ ಸೂಚಿಸಿದೆ.
ನೇಮಕಾತಿಗಳು ಬಾಹ್ಯ ಅಥವಾ ವೈಯಕ್ತಿಕ ಪರಿಗಣನೆಗಳಿಂದ ಪ್ರಭಾವಿತವಾಗದೆ, ಕಾನೂನುಬದ್ಧ ಹಾಗೂ ಸೂಕ್ತ ಉದ್ದೇಶಗಳ ಆಧಾರದ ಮೇಲೆ ನಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚುವರಿ ಸಮಿತಿಗೆ ವಹಿಸಿರುವ ಕಾರ್ಯಗಳ ಸ್ವರೂಪ ಮತ್ತು ಅಧ್ಯಕ್ಷರ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆಯು ನ್ಯಾಯಯುತ, ಪಾರದರ್ಶಕ ಮತ್ತು ನಿರಂಕುಶವಲ್ಲದ ರೀತಿಯಲ್ಲಿ ಇರಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ, ಕೇವಲ ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಹೆಚ್ಚುವರಿ ಸಮಿತಿಗಳನ್ನು ರಚಿಸುವ ರಾಜ್ಯ ಸರ್ಕಾರದ ಧೋರಣೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ಸಾರ್ವಜನಿಕರ ನಿಜವಾದ ಅಗತ್ಯಗಳನ್ನು ಪೂರೈಸುವ ಬದಲು, ರಾಜಕೀಯ ಪ್ರಭಾವ ಅಥವಾ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ನಾಯಕರೊಬ್ಬರು ಪರೋಕ್ಷ ಮಾರ್ಗದ ಮೂಲಕ ಅಧಿಕಾರ ಪಡೆಯಲು ಮತ್ತು ಹಿಂಬಾಗಿಲಿನಿಂದ ಕಳೆದುಕೊಂಡ ಪ್ರಭಾವವನ್ನು ಮರಳಿ ಗಳಿಸಲು ನಡೆಸಿದ ಪ್ರಯತ್ನವನ್ನು ಈ ಪ್ರಕರಣ ಸೂಚಿಸುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ವ್ಯಕ್ತಿಯೊಬ್ಬರಿಗೆ ಪುನರ್ವಸತಿ ಕಲ್ಪಿಸಲು ಅಥವಾ ಕಳೆದುಕೊಂಡ ಪ್ರಭಾವವನ್ನು ಮರಳಿ ಪಡೆಯಲು ಪರೋಕ್ಷ ಅವಕಾಶ ಒದಗಿಸುವ ಉದ್ದೇಶದಿಂದ ಮಾತ್ರ ಹೆಚ್ಚುವರಿ ಹುದ್ದೆ ಅಥವಾ ವ್ಯವಸ್ಥೆಯನ್ನು ಸೃಷ್ಟಿಸುವುದನ್ನು ಸಮರ್ಥಿಸಿಕೊಳ್ಳಲಾಗದು” ಎಂದು ನ್ಯಾಯಾಲಯ ಚಾಟಿ ಬೀಸಿದೆ.
“ಅಧಿಕಾರವನ್ನು ಬಿಟ್ಟುಕೊಡಲು ಇಷ್ಟಪಡದ ವ್ಯಕ್ತಿಯೊಬ್ಬರ ಬಯಕೆಯು ಸಾರ್ವಜನಿಕ ಆಡಳಿತದ ಗತಿಯನ್ನು ನಿರ್ಧರಿಸಲು ಅವಕಾಶ ನೀಡಬಾರದು. ಸಾರ್ವಜನಿಕ ಅಧಿಕಾರವನ್ನು ಜನರಿಗೆ ಸೇವೆ ಸಲ್ಲಿಸಲು ನೀಡಲಾಗಿರುತ್ತದೆ ಹೊರತು ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಆಶ್ರಯ ನೀಡಲು ಅಲ್ಲ. ಸಾರ್ವಜನಿಕ ಹುದ್ದೆಯನ್ನು ಸೋತ ರಾಜಕಾರಣಿಗೆ ನೀಡುವ ‘ಸಮಾಧಾನಕರ ಬಹುಮಾನ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದನ್ನು ರಾಜಕೀಯ ನಿಷ್ಠೆಗೆ ನೀಡುವ ಪ್ರತಿಫಲವಾಗಿಯೂ ಪರಿವರ್ತಿಸಬಾರದು” ಎಂದು ಪೀಠ ಖಡಕ್ ಆಗಿ ಹೇಳಿದೆ.
ಸಾರ್ವಜನಿಕ ಹುದ್ದೆಯು ಸಾರ್ವಜನಿಕ ಹಿತಾಸಕ್ತಿಗಾಗಿ ವಹಿಸಿಕೊಟ್ಟ ಜವಾಬ್ದಾರಿಯೇ ಹೊರತು, ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಬೇಕಾದ ಅಥವಾ ರಾಜಕೀಯ ತಂತ್ರಗಾರಿಕೆಗಳ ಮೂಲಕ ಮರಳಿ ಪಡೆಯಬೇಕಾದ ಸವಲತ್ತಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇಂತಹ ಅವಕಾಶಗಳಿಗೆ ಅವಕಾಶ ನೀಡಿದರೆ, ಸಾರ್ವಜನಿಕ ಆಡಳಿತವು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಸಾಧನವಾಗಿ ಕುಗ್ಗಿಹೋಗುತ್ತದೆ. ಇದು ಸರ್ಕಾರಿ ಅಧಿಕಾರವನ್ನು ನಿರ್ವಹಿಸುವವರಿಗೆ ಆ ಅಧಿಕಾರವನ್ನು ವಹಿಸಿಕೊಟ್ಟ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ ಎಂದು ಪೀಠ ಎಚ್ಚರಿಸಿದೆ.
ಆದ್ದರಿಂದ, ವೈಯಕ್ತಿಕ ರಾಜಕೀಯ ಏಳಿಗೆಯ ಲೆಕ್ಕಾಚಾರಗಳಿಂದ ದೂರವಿದ್ದು, ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಲು ಬಯಸುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವ ಬದಲು ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಅಗತ್ಯಗಳ ಆಧಾರದ ಮೇಲೆಯೇ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಿವಿಮಾತು ಹೇಳಿದೆ.
ಅರ್ಜಿದಾರ ಗುರುರಾಜ ಗಂಟಿಹೊಳೆ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್ ವಾದ ಮಂಡಿಸಿದ್ದರು.