ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಬಂದ ವಿಡಿಯೋ ನೋಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ ಆರೋಪದಡಿ ಬೆಳಗಾವಿ ಜಿಲ್ಲೆ ಅಥಣಿಯ ಅಂಗಡಿ ಮಾಲೀಕರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಿಕ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ರದ್ದುಪಡಿಸಿದೆ.
ತನ್ನ ವಿರುದ್ಧದ ಎಫ್‌ಐಆರ್ ಮತ್ತು ಅಥಣಿ ಕಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಇಮ್ತಿಯಾಜ್ ನೂರುದ್ದೀನ್ ಚಿಂಚಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯಕ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಶಾಂತಿ ಸುವ್ಯವಸ್ಥೆ ಹದಗಡಿಸುವ ರೀತಿಯಲ್ಲಿ ಅರ್ಜಿದಾರನು ದೂರುದಾರರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ ಅಥವಾ ನಿಂದಿಸಿದ ನಿರ್ದಿಷ್ಟ ಆರೋಪಗಳಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
“ನಾಲ್ಕು ದಿನ ವಿಳಂಬಿಸಿ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ಯಾವುದೇ ಅಪರಾಧ ಇಲ್ಲದಿರುವುದರಿಂದ ಕಾನೂನು ಪ್ರಕ್ರಿಯೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ಘಟನೆ ನಡೆದಿರುವುದು 2026ರ ಜನವರಿ 7ರಂದು. ಆದರೆ, ಜನವರಿ 11ರಂದು ದೂರು ದಾಖಲಿಸಲಾಗಿದೆ. ನಾಲ್ಕು ದಿನಗಳ ವಿಳಂಬಕ್ಕೆ ಯಾವುದೇ ಸೂಕ್ತ ಮತ್ತು ಸಮಂಜಸ ಕಾರಣ ನೀಡಿಲ್ಲ ಮತ್ತು ಅರ್ಜಿದಾರರು ದೂರುದಾರರನ್ನು ಉದ್ದೇಶಪೂರ್ವಕವಾಗಿ ನಿಂದಿಸಿದ್ದಾರೆ ಶಾಂತಿ ಭಂಗ ಉಂಟುಮಾಡಲು ಪ್ರಚೋದಿಸಿದ್ದಾರೆ ಎಂಬುದಕ್ಕೆ ಯಾವುದೇ ಸೂಕ್ತ ಆಧಾರಗಳಿಲ್ಲ” ಎಂಬ ಅಭಿಪ್ರಾಯದೊಂದಿಗೆ ಪೀಠ ಪ್ರಕರಣ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ: ಇಮ್ತಿಯಾಜ್ ನೂರುದ್ದೀನ್ ಚಿಂಚಲಿ 2026ರ ಜನವರಿ 7ರಂದು ತಮ್ಮ ಅಂಗಡಿಯ ಮುಂದೆ ಬ್ಯಾರಿಕೇಡ್‌ಗಳನ್ನು ಇರಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದರು. ಬ್ಯಾರಿಕೇಡ್ ತೆಗೆಯುವಂತೆ ವ್ಯಕ್ತಿಯೊಬ್ಬರು ಪ್ರಶ್ನಿಸಿದಾಗ ಅವರು ಪ್ರಧಾನಿಯನ್ನು ನಿಂದಿಸಿದ್ದರು. ಇದನ್ನು ಸ್ಥಳದಲ್ಲಿದ್ದ ಮತ್ತೊಬ್ಬರು ಮೊಬೈಲ್ ಮೂಲಕ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡು ತಮ್ಮ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ವೀಕ್ಷಿಸಿದ್ದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಕೇದಾರಿ ಬುಟಾಲಿ ಅಥಣಿ ಪೊಲೀಸ್ ಠಾಣೆಗೆ ಜನವರಿ 11ರಂದು ದೂರು ನೀಡಿದ್ದರು.
ಪೊಲೀಸರು ಬಿಎನ್‌ಎಸ್ 2023ರ ಸೆಕ್ಷನ್ 285 (ಸಾರ್ವಜನಿಕ ರಸ್ತೆಯಲ್ಲಿ ಅಡಚಣೆ) ಮತ್ತು 352 (ಶಾಂತಿಭಂಗ ಉಂಟುಮಾಡಲು ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.