Snehamayi Krishna & HC 
ಸುದ್ದಿಗಳು

ಸರ್ಕಾರಿ ಅಧಿಕಾರಿಗೆ ಬೆದರಿಕೆ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದ ಹೈಕೋರ್ಟ್

‘ಪಾಠ ಕಲಿಸುತ್ತೇನೆ’ ಎಂದು ಜೋರಾಗಿ ಹೇಳುವುದು ಮಾತ್ರ ಹಲ್ಲೆ ಅಥವಾ ಅಪರಾಧಾತ್ಮಕ ಬಲಪ್ರಯೋಗವಾಗುವುದಿಲ್ಲ; ಪ್ರಕರಣದ ಮುಂದುವರಿಕೆ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕರ್ತವ್ಯದಲ್ಲಿದ್ದ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಡಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಮತ್ತು ಮುಂದಿನ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ರಾಜೇಶ್‌ ರೈ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice K Rajesh Rai

ದೂರುದಾರರ ಮೇಲೆ ಹಲ್ಲೆ ನಡೆಸಲಾಗಿದೆ ಅಥವಾ ಅಪರಾಧಾತ್ಮಕ ಬಲಪ್ರಯೋಗ ಮಾಡಲಾಗಿದೆ ಎಂಬುದನ್ನು ದೂರು ಬಹಿರಂಗಪಡಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ದೂರಿನಲ್ಲಿರುವ ಏಕೈಕ ಆರೋಪವೆಂದರೆ, ಕೃಷ್ಣ ಜೋರಾಗಿ ಮಾತನಾಡಿ ‘ಪಾಠ ಕಲಿಸುತ್ತೇನೆ ಎಂದು ಹೇಳಿರುವುದು ಮಾತ್ರ,” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸರ್ಕಾರಿ ಸಿಬ್ಬಂದಿಯ ವಿರುದ್ಧ ಕೂಗುವುದು ಅಥವಾ ಬೆದರಿಕೆ ಹಾಕುವುದು ಮಾತ್ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 353ರ ಅಡಿಯಲ್ಲಿ ಹಲ್ಲೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಯಾವುದೇ ಅಪರಾಧಾತ್ಮಕ ಬಲಪ್ರಯೋಗ ಅಥವಾ ಹಲ್ಲೆ ನಡೆಸಿರುವುದು ಕಂಡುಬರುವುದಿಲ್ಲ. ಹೀಗಾಗಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್‌ 132 ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಅರ್ಜಿದಾರರು ದೂರುದಾರರ ವಿರುದ್ಧ ಯಾವುದೇ ನಿಂದನಾತ್ಮಕ ಪದಗಳನ್ನು ಬಳಸಿಲ್ಲ. ದೂರು ಮತ್ತು ಆರೋಪಪಟ್ಟಿಯಲ್ಲಿರುವ ಆರೋಪಗಳನ್ನು ಅವುಗಳ ಮೂಲ ರೂಪದಲ್ಲೇ ಪರಿಗಣಿಸಿದರೂ ಯಾವುದೇ ಅಪರಾಧವಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಪ್ರಕರಣದ ಮುಂದುವರಿಕೆ ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ,” ಎಂದು ಹೇಳಿದ ಹೈಕೋರ್ಟ್‌, ಸ್ನೇಹಮಯಿ ಕೃಷ್ಣ ವಿರುದ್ಧದ ಎಫ್‌ಐಆರ್‌ ಹಾಗೂ ಮುಂದಿನ ಎಲ್ಲ ವಿಚಾರಣೆಗಳನ್ನು ರದ್ದುಪಡಿಸಿದೆ.

ಸ್ನೇಹಮಯಿ ಕೃಷ್ಣ ಪರ ವಾದಿಸಿದ ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಅವರು “ದೂರಿನಲ್ಲಿರುವ ಆರೋಪಗಳನ್ನು ಗಮನಿಸಿದರೆ ಅರ್ಜಿದಾರರ ವಿರುದ್ಧ ಯಾವುದೇ ಅಪರಾಧವಾಗುವುದಿಲ್ಲ” ಎಂದು ವಾದಿಸಿದರು.

ಘಟನೆ ನಡೆದ ಎರಡು ದಿನಗಳ ಬಳಿಕ ದೂರು ದಾಖಲಿಸಲಾಗಿದ್ದು, ವಿಳಂಬಕ್ಕೆ ಯಾವುದೇ ಸಮರ್ಪಕ ಕಾರಣ ನೀಡಲಾಗಿಲ್ಲ. ಅಲ್ಲದೆ, ಕೃಷ್ಣ ಅವರು ರೂಪಾ ವಿರುದ್ಧ ನೀಡಿದ್ದ ದೂರಿಗೆ ಪ್ರತೀಕಾರವಾಗಿ ಪ್ರತಿದೂರಿನ ರೂಪದಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರು ವಾದಿಸಿದರು.

ಸರ್ಕಾರದ ಪರ ವಕೀಲರು, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ದೂರಿನಲ್ಲಿರುವ ಅಂಶಗಳು ಅರ್ಜಿದಾರರು ದೂರುದಾರರಿಗೆ ಬೆದರಿಕೆ ಹಾಕಿರುವುದನ್ನು ತೋರಿಸುತ್ತವೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳೂ ಲಭ್ಯವಿವೆ. ಹೀಗಾಗಿ ಈ ಹಂತದಲ್ಲಿ ಅರ್ಜಿ ಪುರಸ್ಕರಿಸಬಾರದು ಎಂದು ವಾದಿಸಿದರು.

ಮೈಸೂರು ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ ಜೆ ರೂಪಾ ಅವರು 2024ರ ಡಿಸೆಂಬರ್‌ 14ರಂದು ಮೈಸೂರಿನ ಕೃಷ್ಣರಾಜ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ತಾವು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸ್ನೇಹಮಯಿ ಕೃಷ್ಣ ಪೊಲೀಸರೊಂದಿಗೆ ಕಚೇರಿಗೆ ಬಂದಿದ್ದರು. ಚಾಮುಂಡೇಶ್ವರಿ ದೇವಿಗೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕೃಷ್ಣ ದೂರು ನೀಡಿದ್ದರು.

ಈ ಸಂದರ್ಭದಲ್ಲಿ ಕೃಷ್ಣ ಜೋರಾಗಿ ಮಾತನಾಡಿ, “ನಿಮಗೆ ಒಂದು ಪಾಠ ಕಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ರೂಪಾ ಆರೋಪಿಸಿದ್ದರು.

ಈ ದೂರಿನ ಆಧಾರದ ಮೇಲೆ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧಾತ್ಮಕ ಬಲಪ್ರಯೋಗ ಮಾಡಿದ ಆರೋಪದಡಿ ಬಿಎನ್‌ಎಸ್‌ ಸೆಕ್ಷನ್‌ 132 ಮತ್ತು ಕ್ರಿಮಿನಲ್‌ ಬೆದರಿಕೆ ಆರೋಪದಡಿ ಸೆಕ್ಷನ್‌ 351ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.