ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಎಂದು ಹೇಳಿಕೊಂಡು ರಿಯಲ್ ಎಷ್ಟೇಟ್ ಉದ್ಯಮಿಯಿಂದ ₹25 ಲಕ್ಷ ಹಣ ವಸೂಲಿಗೆ ಯತ್ನಿಸಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ "ಮೊಬೈಲ್‌ನಲ್ಲಿ ಸದಾ ಲೊಕೇಷನ್ ಆನ್ ಮಾಡಿರಬೇಕು ಹಾಗೂ ಲೈವ್ ಲೊಕೇಷನ್ ಅನ್ನು ತನಿಖಾಧಿಕಾರಿಗೆ ಹಂಚಿಕೆ ಮಾಡಬೇಕು" ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಮಂಗಳೂರಿನ ಕೊಲ್ನಾಡು ಮುಲ್ಕಿಯ ಕೆ ಎಸ್ ರಾವ್ ನಗರ ನಿವಾಸಿ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿಯು ಪ್ರಕರಣ ಸಂಬಂಧ ಉಡುಪಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಷರತ್ತು ಸಡಿಲಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರು ಪರ ವಕೀಲರು ಹಾಜರಾಗಿರಲಿಲ್ಲ. ಆಗ ಪೀಠವು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದ ಯಾವ ಷರತ್ತನ್ನು ಸಡಲಿಸಬೇಕು ಎಂಬುದನ್ನು ಅರ್ಜಿದಾರರ ಮನವಿ ಸ್ಪಷ್ಟವಾಗಿ ತಿಳಿಸುವುದಿಲ್ಲ. ಅರ್ಜಿ ಪರಿಶೀಲಿಸಿದ ನಂತರ ಎಲ್ಲಾ ಷರತ್ತುಗಳನ್ನು ಸಡಿಲಗೊಳಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ ಎಂದು ತಿಳಿಯಬಹುದಾಗಿದೆ. ಆದರೆ, ಎಲ್ಲಾ ಷರತ್ತುಗಳನ್ನು ಸಡಲಿಸಲು ಆಗುವುದಿಲ್ಲ. "ಆರೋಪಿಯು ತಮ್ಮ ಮೊಬೈಲ್‌ನಲ್ಲಿ ಸದಾ ಲೊಕೇಷನ್ ಆನ್ ಮಾಡಿರಬೇಕು ಹಾಗೂ ಲೈವ್ ಲೊಕೇಷನ್ ಅನ್ನು ತನಿಖಾಧಿಕಾರಿಗೆ ಶೇರ್ ಮಾಡಬೇಕು" ಎಂಬುದಾಗಿ ವಿಧಿಸಲಾಗಿರುವ ಏಳನೇ ಷರತ್ತನ್ನು ರದ್ದುಪಡಿಸಬಹುದು. ಇಂತಹ ಷರತ್ತು ವಿಧಿಸಲಾಗದು ಎಂದು ಹೇಳಿ, ಆ ಷರತ್ತನ್ನು ರದ್ದುಪಡಿಸಿತು.
ಉಡುಪಿಯ ಅಂಬಾಗಿಲು ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ 2018ರ ಆಗಸ್ಟ್ 6ರಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಬನ್ನಂಜೆ ರಾಜನ ಸಹಚರ. ₹25 ಲಕ್ಷ ನೀಡಬೇಕು. ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಉದ್ಯಮಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದರು. ಅರ್ಜಿದಾರರು ನಾಲ್ಕನೇ ಆರೋಪಿಯಾಗಿದ್ದ. ಆತನಿಗೆ ಉಡುಪಿಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 2025ರ ಫೆಬ್ರವರಿ 12ರಂದು ಏಳು ಷರತ್ತುಗಳನ್ನು ವಿಧಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.