Lawyers 
ಸುದ್ದಿಗಳು

ಮದುವೆ ಭರವಸೆ ನೀಡಿ ಅತ್ಯಾಚಾರ: ವಕೀಲರೊಬ್ಬರ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಮದುವೆ ಭರವಸೆ ನೀಡಿ 2 ವರ್ಷಗಳಲ್ಲಿ ಅರ್ಜಿದಾರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ನಂತರ ಅರ್ಜಿದಾರರ ವರ್ತನೆ ಇದ್ದಕ್ಕಿದ್ದಂತೆ ಬದಲಾಯಿತು. ತಮ್ಮ ಕರೆ ನಿರ್ಲಕ್ಷಿಸಲು ಪ್ರಾರಂಭಿಸಿದರು ಎಂದು ದೂರುದಾರೆ ಆರೋಪಿಸಿದ್ದರು.

Bar & Bench

ಮದುವೆ ಭರವಸೆ ನೀಡಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಂಬಂಧ ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

Justice M Nagaprasanna

ಪ್ರಕರಣವೊಂದರ ಸಂಬಂಧ ಕಾನೂನು ನೆರವು ಕೋರಿ ಅರ್ಜಿದಾರರನ್ನು ದೂರುದಾರರು ಸಂಪರ್ಕಿಸಿದ್ದರು. 2022ರಲ್ಲಿ ದೂರುದಾರರಿಗೆ ಅರ್ಜಿದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಕೋರಿಕೆ ಕಳಿಸಿದ್ದರು. ಕರೆ ಮಾಡಿ ತಮ್ಮ ಕೋರಿಕೆ ಒಪ್ಪಿಕೊಳ್ಳಲು ಕೋರಿದ್ದರು. ನಂತರ ಇಬ್ಬರು ಸ್ನೇಹಿತರಾಗಿದ್ದಾರೆ. ಅರ್ಜಿದಾರನಿಗೆ ಮದುವೆ ಮಾಡಲು ಪೋಷಕರು ಹುಡುಗಿಯನ್ನು ಹುಡುಕುತ್ತಿರುವ ವಿಚಾರ ತಿಳಿದ ನಂತರ ದೂರುದಾರೆ ದೂರು ಸಲ್ಲಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮದುವೆ ಭರವಸೆ ನೀಡಿ ಎರಡು ವರ್ಷಗಳಲ್ಲಿ ಅರ್ಜಿದಾರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ನಂತರ ಅರ್ಜಿದಾರರ ವರ್ತನೆ ಇದ್ದಕ್ಕಿದ್ದಂತೆ ಬದಲಾಯಿತು. ತಮ್ಮ ಕರೆಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ದೂರುದಾರೆ ಆರೋಪಿಸಿದ್ದಾರೆ. ಮದುವೆ ನೆಪದಲ್ಲಿ ಅಥವಾ ಮತ್ಯಾವುದೋ ಕಾರಣಕ್ಕಾಗಿ ಅರ್ಜಿದಾರರು ಮತ್ತು ದೂರುದಾರರು ಎರಡು ವರ್ಷಗಳ ಕಾಲ ಪರಸ್ಪರ ಸಮ್ಮತಿಯ ದೈಹಿಕ ಸಂಪರ್ಕ ಹೊಂದಿರುವುದು ದೂರಿನ ಅಂಶಗಳಲ್ಲಿ ಮೇಲ್ನೋಟಕ್ಕೆ ತಿಳಿಯುತ್ತದೆ. ಮದುವೆ ಭರವಸೆ ಮೇರೆಗೆ ಒಪ್ಪಿಗೆಯ ಲೈಂಗಿಕತೆಯು ಅತ್ಯಾಚಾರಕ್ಕೆ ಸಮನಾಗುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿ ಕಾಲ ಕಾಲಕ್ಕೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ ಎಂದು ಆದೇಶದಲ್ಲಿ ಪೀಠ ವಿವರಿಸಿದೆ.

ಅಲ್ಲದೆ, ಪ್ರಕರಣದಲ್ಲಿ ದೂರುದಾರರು ಮತ್ತು ಅರ್ಜಿದಾರರ ನಡುವಿನ ಸಂಬಂಧವು ಆರಂಭದಲ್ಲಿ ಸ್ಪಷ್ಟವಾಗಿ ಕಕ್ಷಿದಾರ ಮತ್ತು ವಕೀಲರದ್ದಾಗಿತ್ತು. ಸ್ವತಃ ದೂರುದಾರೆಯು ತೋರಿಸಿದ ಮತ್ತು ಒಪ್ಪಿಕೊಂಡ ದಾಖಲೆಗಳ ಪ್ರಕಾರ ಅವರು ವೈವಾಹಿಕ ಸಂಬಂಧ ಹೊಂದಿದ್ದಾರೆ ಮತ್ತು ಮಕ್ಕಳನ್ನು ಪಡೆದಿದ್ದಾರೆ. ದೂರುದಾರೆಯು ಜಾರಿಯಲ್ಲಿದ್ದ ವೈವಾಹಿಕ ಸಂಬಂಧದಲ್ಲಿದ್ದಾಗಲೇ ಅಥವಾ ಕನಿಷ್ಠ ಪಕ್ಷ ಗೃಹಿಣಿಯ ಸ್ವರೂಪದಲ್ಲಿದ್ದಾಗಲೇ "ಮದುವೆಯ ಭರವಸೆಯ" ಹಿನ್ನೆಲೆಯಲ್ಲಿ ದೈಹಿಕ ಸಂಬಂಧಕ್ಕೆ ಸಹಮತಿಸಿದ್ದಾಗಿ ಹೇಳಿರುವುದನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಇದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ. ಅತ್ಯಾಚಾರ ಅಪರಾಧದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ. ಇದರಿಂದ ಅರ್ಜಿದಾರನ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

xxx Vs State of Karnataka.pdf
Preview