Karnataka High Court
Karnataka High Court 
ಸುದ್ದಿಗಳು

ಮಗು ಭೇಟಿ ಮಾಡಲು ಕಸದ ವಾಹನದ ಕಾವಲುಗಾರ ಎಂದು ನಟಿಸಿದ ತಂದೆಯ ವಿರುದ್ಧದ ಅತಿಕ್ರಮಣ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Bar & Bench

ಕಸದ ವಾಹನದ ಕಾವಲುಗಾರನಂತೆ ನಟಿಸಿ ತಮ್ಮ ಎಂಟು ವರ್ಷದ ಮಗಳನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಮಹಿಳೆಯೊಬ್ಬಳು ತನ್ನ ಮಾಜಿ ಪತಿಯ ವಿರುದ್ಧ ಮನೆ ಅತಿಕ್ರಮಣ ಪ್ರವೇಶ ಮಾಡಿದ್ದ ಮತ್ತು ಕ್ರಿಮಿನಲ್ ಬೆದರಿಕೆ ಹಾಕಿದ ಆರೋಪವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.

ಪತಿಗೆ ತನ್ನ ಮಗಳನ್ನು ಭೇಟಿ ಮಾಡಲು ಕಾನೂನಿನಲ್ಲಿ ಹಕ್ಕಿದೆ ಮತ್ತು ಅವರ ಮಾಜಿ ಪತ್ನಿ ಕ್ಷುಲ್ಲಕ ಕಾರಣಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

"ಮಗಳನ್ನು ಭೇಟಿ ಮಾಡಲು ಬಯಸಿದ ದಿನವೇ ಪತಿಗೆ ಭೇಟಿಯ ಮಾನ್ಯತೆ ಇತ್ತು. ಆದ್ದರಿಂದ, ಸಕ್ಷಮ ನ್ಯಾಯಾಲಯದ ಆದೇಶದ ಪ್ರಕಾರ, ಮಗಳನ್ನು ಭೇಟಿ ಮಾಡಲು ಅವರಿಗೆ ಕಾನೂನಿನಲ್ಲಿ ಹಕ್ಕಿದೆ" ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 448 (ಮನೆ ಅತಿಕ್ರಮಣ), 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ತನ್ನ ಮಾಜಿ ಪತ್ನಿ ತನ್ನ ವಿರುದ್ಧ ದಾಖಲಿಸಿರುವ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ತಂದೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ದಂಪತಿಯು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನದ ನಂತರ ಬೇರ್ಪಟ್ಟಿದ್ದರು, ನಂತರ ತಾಯಿಗೆ ತಮ್ಮ ಮಗಳ ಸುಪರ್ದು ನೀಡಲಾಯಿತು ಮತ್ತು ತಂದೆಗೆ ಪ್ರತಿ ಶನಿವಾರ ಮಗುವನ್ನು ಭೇಟಿ ಮಾಡುವ ಹಕ್ಕನ್ನು ನೀಡಲಾಗಿತ್ತು. ಆದಾಗ್ಯೂ, ಕಳೆದ ವರ್ಷ ಒಂದು ನಿರ್ದಿಷ್ಟ ಶನಿವಾರದಂದು, ತಾಯಿ ಇಮೇಲ್ ಮೂಲಕ ತಂದೆಯ ಭೇಟಿಯನ್ನು ಮರು ನಿಗದಿಪಡಿಸಿದ್ದರು, ಇದನ್ನು ತಂದೆ ಒಪ್ಪಿಕೊಂಡಿದ್ದರು.

ಆದಾಗ್ಯೂ, ಆ ವ್ಯಕ್ತಿ ತಮ್ಮ ಮಗಳನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆಕ್ಷೇಪಿಸಿದ್ದಾರೆ. ಮೈಗೇಟ್ ಅಪ್ಲಿಕೇಶನ್ ಮೂಲಕ ವಿನಂತಿಯನ್ನು ಕಳುಹಿಸುವ ಮೂಲಕ ತಂದೆ ಮೊದಲು ಅಪಾರ್ಟ್‌ಮೆಂಟ್‌ ಸಂಕೀರ್ಣ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅನುಮತಿ ನಿರಾಕರಿಸಿದ ನಂತರ, ತಂದೆ ಕಸದ ವ್ಯಾನ್ ಹತ್ತಿ ಅಪಾರ್ಟ್‌ಮೆಂಟ್‌ ಸಂಕೀರ್ಣಕ್ಕೆ ಪ್ರವೇಶಿಸಲು ಕಾವಲುಗಾರನಂತೆ ನಟಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಯಾವುದೇ ಮುನ್ಸೂಚನೆಯಿಲ್ಲದೆ ಫ್ಲ್ಯಾಟ್‌ಗೆ ನುಗ್ಗಿದರು, ಈ ವೇಳೆ ಭೀತಿಗೊಂಡ ಮಗಳು ಸ್ನಾನಗೃಹದಲ್ಲಿ ಚಿಲಕ ಹಾಕಿಕೊಂಡು ಎರಡು ಗಂಟೆಗಳ ಕಾಲ ಕಳೆದಳು. ಈ ಘಟನೆ ಅವಳ ಮೇಲೆ ಆಘಾತ ಬೀರಿದೆ ಎಂದು ಮಹಿಳೆ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ತನ್ನ ವಿಚ್ಛೇದಿತ ಮಾಜಿ ಪತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ನಂತರ, ಅವರು (ಅರ್ಜಿದಾರರು) ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು.

ತಂದೆ/ಅರ್ಜಿದಾರರ ಪರವಾಗಿ ವಕೀಲ ಆರ್ ಪಲ್ಲವ ವಾದಿಸಿದ್ದು, ಘಟನೆ ನಡೆದ ದಿನದಂದು ಅವರಿಗೆ ಭೇಟಿಯ ಹಕ್ಕು ಇತ್ತು. ಮರುಹಂಚಿಕೆ ಬಗ್ಗೆ ಅರ್ಜಿದಾರರಿಗೆ ತಿಳಿದಿದೆ ಎಂದು ಅವರು ಒಪ್ಪಿಕೊಂಡರೂ, ಅರ್ಜಿದಾರರು ಬದಲಾವಣೆಗೆ ಒಪ್ಪಲಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

ಪರಿಣಾಮವಾಗಿ, ಅರ್ಜಿದಾರರು ಅಪಾರ್ಟ್‌ಮೆಂಟ್‌ ಸಂಕೀರ್ಣವನ್ನು ಬಲವಂತವಾಗಿ ಪ್ರವೇಶಿಸಬೇಕಾಯಿತು. ಈ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಅವರು ವಾದಿಸಿದ್ದರು.

ತಾಯಿಯ ಪರ ವಕೀಲರಾದ ಕೆ ಪಿ ಯಶೋದಾ ಅವರು, ನೋಟಿಸ್ ನೀಡದೆ ಅರ್ಜಿದಾರರು ಭೇಟಿ ನೀಡಿರುವುದು ಮಗುವಿಗೆ ಆಘಾತವನ್ನುಂಟು ಮಾಡಿದೆ. ಆದ್ದರಿಂದ, ಇದು ಅತಿಕ್ರಮಣ, ಬೆದರಿಕೆಗೆ ಕಾರಣವಾಗಿದ್ದು, ಶಾಂತಿ ಉಲ್ಲಂಘನೆ ಮಾಡಿದೆ ಎಂದರು.

ದಂಪತಿ ವಿಚ್ಛೇದನ ಆದೇಶದ ಪ್ರಕಾರ, ಪತಿಯು ಪ್ರತಿ ಶನಿವಾರ ಮಧ್ಯಾಹ್ನ 3 ರಿಂದ 5 ರವರೆಗೆ ತನ್ನ ಮಗಳನ್ನು ಪತ್ನಿಯ ನಿವಾಸದಲ್ಲಿ ಅಥವಾ ತಟಸ್ಥ ಸ್ಥಳದಲ್ಲಿ ಭೇಟಿ ಮಾಡುವ ಹಕ್ಕನ್ನು ಹೊಂದಿದ್ದಾರೆ ಎನ್ನುವುದನ್ನು ನ್ಯಾಯಾಲಯ ಗಮನಿಸಿತು.

ಅರ್ಜಿದಾರರು ತಮ್ಮ ಮಗಳನ್ನು ಹೇಗೆ ಬೆದರಿಸಿದ್ದಾರೆಂದು ಅರ್ಥವಾಗುತ್ತಿಲ್ಲ ಮತ್ತು ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ತೀರ್ಮಾನಿಸಿತು.

"ಇದು ಕ್ರಿಮಿನಲ್ ಬೆದರಿಕೆ ಹೇಗಾಗುತ್ತದೆ ಎಂದು ತಿಳಿಯುವುದಿಲ್ಲ... ಯಾವುದೇ ಹೆಚ್ಚಿನ ತನಿಖೆಯನ್ನು ಮುಂದುವರಿಸಲು ಅನುಮತಿಸಿದರೆ, ಅದು ಮೇಲ್ನೋಟಕ್ಕೆ, ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಪ್ರಕರಣದಲ್ಲಿ ಹೆಂಡತಿಯು ಗಂಡನ ವಿರುದ್ಧ ಕಾನೂನಿನ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರತೀಕಾರಕ್ಕೆ ಮುಂದಾಗಿದ್ದಾರೆ" ಎಂದು ನ್ಯಾಯಾಲಯ ಹೇಳಿತು.

[ಆದೇಶ ಓದಿ]

XYZ vs ABC.pdf
Preview