Justice Hanchate Sanjeevkumar 
ಸುದ್ದಿಗಳು

ನ್ಯಾಯಾಲಯಕ್ಕೆ ಬೆದರಿಕೆ, ನಿರ್ದೇಶನ ನೀಡುವ ನಡವಳಿಕೆ: ವಕೀಲ ಅರುಣ್‌ಗೆ ಹೈಕೋರ್ಟ್‌ ಛೀಮಾರಿ

ಆದೇಶ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ತನ್ನ ಇಚ್ಛೆಗೆ ಅನುಸಾರವಾಗಿ ಆದೇಶ ಪಡೆಯಲು ವಕೀಲ ಬಿ ಎಂ ಅರುಣ್‌ ನ್ಯಾಯಾಲಯಕ್ಕೆ ನಿರ್ದೇಶನ ನೀಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಸಂಜೀವ್‌ಕುಮಾರ್‌.

Bar & Bench

ಅನುಕೂಲಕರ ಆದೇಶ ಪಡೆಯಲು ನ್ಯಾಯಾಲಯಕ್ಕೆ ನಿರ್ದೇಶನ ನೀಡುವ ಅಥವಾ ಬೆದರಿಸುವ ರೀತಿಯಲ್ಲಿ ನಡೆದುಕೊಂಡಿರುವ ವಕೀಲ ಬಿ ಎಂ ಅರುಣ್‌ ವಿರುದ್ಧ ಕರ್ನಾಟಕ ಹೈಕೋರ್ಟ್‌ ಈಚೆಗೆ ಕಠಿಣ ಪದಗಳನ್ನು ಬಳಕೆ ಮಾಡಿದೆ.

ಆದೇಶ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ತನ್ನ ಇಚ್ಛೆಗೆ ಅನುಸಾರವಾಗಿ ಆದೇಶ ಪಡೆಯಲು ವಕೀಲ ಬಿ ಎಂ ಅರುಣ್‌ ಅವರು ನ್ಯಾಯಾಲಯಕ್ಕೆ ನಿರ್ದೇಶನ ನೀಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್‌ ಅವರ ಏಕಸದಸ್ಯ ಪೀಠ ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

“ತನ್ನ ಇಚ್ಛೆಗನುಸಾರವಾದ ಆದೇಶ ಪಡೆಯಲು ನ್ಯಾಯಾಲಯಕ್ಕೆ ಬೆದರಿಕೆ ಹಾಕುವ ರೀತಿಯಲ್ಲಿ ವಕೀಲ ಬಿ ಎಂ ಅರುಣ್‌ ಅವರು ಆದೇಶ ಮರುಪರಿಶೀಲನಾ ಅರ್ಜಿಯ ವಿಚಾರಣೆಯ ವೇಳೆ ವಾದಿಸಿದ್ದಾರೆ. ತನಗೆ ಅನುಕೂಲಕರವಾದ ಆದೇಶ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಕೆಲ ಆಕ್ಷೇಪಾರ್ಹವಾದ ಹೇಳಿಕೆ ನೀಡಿ ವೈಯಕ್ತಿಕವಾಗಿ ತನ್ನ ಬೇಸರ ವ್ಯಕ್ತಪಡಿಸಿದ್ದಾರೆ” ಎಂದು ಆದೇಶದಲ್ಲಿ ಪೀಠ ದಾಖಲಿಸಿದೆ.

ಅದಾಗ್ಯೂ, ರಾಜ್ಯ ವಕೀಲರ ಪರಿಷತ್‌ ವಕೀಲ ಅರುಣ್‌ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿಲ್ಲ. “ತಾನೇ ಕಕ್ಷಿದಾರ ಎನ್ನುವ ರೀತಿಯಲ್ಲಿ ವಕೀಲರು ವರ್ತಿಸಬಾರದು. ಉಭಯ ಕಕ್ಷಿದಾರರನ್ನೂ ನ್ಯಾಯಾಲಯ ಸಂತುಷ್ಟಗೊಳಿಸಲಾಗದು. ಒಂದು ಕಡೆಯ ಪಕ್ಷಕಾರ ಸಹಜವಾಗಿ ಅಸಂತುಷ್ಟರಾಗಲಿದ್ದು, ವಕೀಲ ಬಿ ಎಂ ಅರುಣ್‌ ಅವರು ತಾವೇ ಕಕ್ಷಿದಾರರು ಎಂದು ಭಾವಿಸಬಾರದಿತ್ತು ಮತ್ತು ತಮ್ಮದೇ ವೈಯಕ್ತಿಕ ಪ್ರಕರಣ ಎಂದು ತಿಳಿದು ನ್ಯಾಯಾಲಯಕ್ಕೆ ಅಗೌರವ ತೋರುವ ಮತ್ತು ಪೀಠದ ಘನತೆಗೆ ಚ್ಯುತಿಯಾಗುವ ರೀತಿಯಲ್ಲಿ ನಡೆದುಕೊಳ್ಳಬಾರದಿತ್ತು” ಎಂದು ನ್ಯಾಯಾಲಯ ಹೇಳಿದೆ.

“ನ್ಯಾಯದಾನ ಮಾಡಲು ನೆರವಾಗುವುದು ವಕೀಲರ ಪ್ರಮುಖ ಕರ್ತವ್ಯವಾಗಿದ್ದು, ನ್ಯಾಯಾಲಯಕ್ಕೆ ಅಗೌರವ ತೋರುವ ರೀತಿಯಲ್ಲಿ ಅವರು ನಡೆದುಕೊಳ್ಳಬಾರದು. ಆದರೆ, ಹಾಲಿ ಪ್ರಕರಣದಲ್ಲಿ ವಕೀಲ ಬಿ ಎಂ ಅರುಣ್‌ ಅವರು ನ್ಯಾಯಾಲದಲ್ಲಿ ಏರುಧ್ವನಿಯಲ್ಲಿ ಮಾತನಾಡಿರುವುದು ನ್ಯಾಯಾಲಯದ ಘನತೆ ಮತ್ತು ಶಿಷ್ಟಾಚಾರಕ್ಕೆ ಅವಹೇಳನ ಮಾಡುವುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಹಾಲಿ ಪ್ರಕರಣವು ಸುಳ್ಳು, ಕ್ಷುಲ್ಲಕ ಪ್ರಕರಣ ಎಂಬುದರಾಚೆಗೆ ದುರ್ಬಲ ವರ್ಗದ ಜನರನ್ನು ಪ್ರಬಲರು ಹೇಗೆ ನಿಯಂತ್ರಿಸಿ, ಅವರ ಮೇಲೆ ಹಿಡಿತ ಸಾಧಿಸುವ ಮೂಲಕ ಅವರಿಗೆ ಶಾಸನಬದ್ಧವಾಗಿ ಆಸ್ತಿಯಲ್ಲಿ ಸಿಗಬೇಕಾದ ಪಾಲನ್ನು ನಿರಾಕರಿಸುತ್ತಾರೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದಿರುವ ಹೈಕೋರ್ಟ್‌, ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ, ಅರ್ಜಿದಾರರಿಗೆ ₹25,000 ದಂಡ ವಿಧಿಸಿದೆ.

Ganesh & others Vs Govind Reddy.pdf
Preview