High Court of Karnataka
High Court of Karnataka 
ಸುದ್ದಿಗಳು

ವಿವಿ ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆ ಪರಿಷ್ಕರಣೆ, ಹಾಜರಾತಿ ನಿಯಮದಲ್ಲಿ ಸಡಿಲಿಕೆ ಕೋರಿಕೆ: ಪಿಐಎಲ್‌ ವಿಚಾರಣೆಗೆ ನಕಾರ

Bar & Bench

ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವು ಪ್ರಕರಣಗಳಲ್ಲಿ ಮರುಮೌಲ್ಯಮಾಪನ ಶುಲ್ಕ ವಾಪಸ್‌ ನೀಡಿಕೆ ಮತ್ತು ಅಗತ್ಯ ಹಾಜರಾತಿ ವಿಚಾರಗಳಲ್ಲಿ ಸಡಿಲಿಕೆ ಸೇರಿದಂತೆ ಹಲವು ಕೋರಿಕೆಗಳನ್ನು ಒಳಗೊಂಡಿದ್ದ ಅರ್ಜಿಯನ್ನು ಪುರಸ್ಕರಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.

ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಏನು ಹೇಳಲು ಸಾಧ್ಯ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಈ ವಿಚಾರಗಳು ತಜ್ಞರು ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ವಿಚಾರವಾಗಿದೆ. “ನನ್ನ ಮನೆಯಲ್ಲಿ ಚಂದಿರನನ್ನು ಕಾಣಲು ನಾವು ಬಯಸಬಹುದು. ನನ್ನ ಆಸೆಯಷ್ಟೇ ಸಾಲುವುದಿಲ್ಲ. ಇವೆಲ್ಲಾ ಸಂಪೂರ್ಣವಾಗಿ ಶೈಕ್ಷಣಿಕ ವಿಚಾರಗಳು. ವಿಶ್ವವಿದ್ಯಾಲಯವೇ ಇವುಗಳ ಬಗ್ಗೆ ಗಮನಹರಿಸಬೇಕು. ಒಂದು ವಿಷಯಕ್ಕೆ ಮರುಮೌಲ್ಯಮಾಪನ ಶುಲ್ಕ ರೂ.100 ಅಥವಾ ರೂ. 200 ಇರಬೇಕು ಎಂದು ಹೇಳಲು ನಾವು ಯಾರು” ಎಂದು ಸಿಜೆ ವರಾಳೆ ಪ್ರಶ್ನಿಸಿದರು.

ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ವಿಚಾರಕ್ಕೆ ಬಂದಾಗ ಅದನ್ನು ತಜ್ಞರು ಮಾಡಬೇಕಾಗುತ್ತದೆ. ಇದಕ್ಕೆ ಅವರಿಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅರ್ಜಿ ಸಲ್ಲಿಸುವುದಕ್ಕೂ ಮುನ್ನ ತಜ್ಞರ ಸಂಪರ್ಕ ಮಾಡಲಾಗಿತ್ತೇ ಎಂದು ನ್ಯಾಯಾಲಯವು ಅರ್ಜಿದಾರರನ್ನು ಕೇಳಿದೆ.

“ನಿಮ್ಮ ಭಾವನೆ ವಿಶ್ವಾಸಾರ್ಹವಾಗಿರಬಹುದು. ಒಂದು ಕ್ಷಣಕ್ಕೂ ನಿಮ್ಮ ಭಾವನೆಯಲ್ಲಿ ದೋಷವಿದೆ ಎಂದು ನಾವು ಹೇಳುತ್ತಿಲ್ಲ. ಶಿಕ್ಷಣ ತಜ್ಞರಿಗೆ ಬಿಟ್ಟಿರುವ ಈ ವಿಚಾರಕ್ಕೆ ನಾವು ಹೇಗೆ ಪ್ರವೇಶಿಸುವುದು? ವಿದ್ಯಾರ್ಥಿಗಳು ತಮ್ಮದೇ ಆದ ಅನಿಸಿಕೆ ಹೊಂದಬಹುದು. ಅದು ಪಿಐಎಲ್‌ ಪುರಸ್ಕರಿಸಲು ಆಧಾರವಾಗದು” ಎಂದು ನ್ಯಾಯಾಲಯ ಹೇಳಿದೆ.

ಸಾಕಷ್ಟು ಸಂಶೋಧನೆ ನಡೆಸಿದ, ತಜ್ಞರ ಅಭಿಪ್ರಾಯಗಳನ್ನು ಒಳಗೊಂಡ ಪಿಐಎಲ್‌ ಸಲ್ಲಿಸಲು ಅವಕಾಶ ಮಾಡಿ, ಹಾಲಿ ಪಿಐಎಲ್‌ ಹಿಂಪಡೆಯಲು ಅನುಮತಿಸಿತು. ಅಲ್ಲದೇ, ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿತು.

ಮರು-ಮೌಲ್ಯಮಾಪನದ ಅಂಕಗಳು ಗಣನೀಯವಾಗಿ ಭಿನ್ನವಾಗಿರುವುದು ಕಂಡುಬಂದಾಗ ಪರೀಕ್ಷೆಯ ಮರುಮೌಲ್ಯಮಾಪನ ಶುಲ್ಕದ ಮರುಪಾವತಿಗಾಗಿ ನಿಯಮಾವಳಿಗಳನ್ನು ರೂಪಿಸಲು ನಿರ್ದೇಶಿಸಬೇಕು; ಹೊಣೆಗಾರಿಕೆ ಹೆಚ್ಚಿಸಲು ಮತ್ತು ಅನಿಯಂತ್ರಿತ ನಿರ್ಧಾರಗಳನ್ನು ಕಡಿಮೆ ಮಾಡಲು ಹೊಸ ಮರು-ಮೌಲ್ಯಮಾಪನ ಕಾರ್ಯವಿಧಾನ ರಚಿಸುವುದು; ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಾಗಿ ಹಾಜರಾತಿ ಮಾನದಂಡವನ್ನು 51% ಅಥವಾ ಅದಕ್ಕಿಂತ ಕಡಿಮೆಗೆ ಸಡಿಲಗೊಳಿಸಿ ಮತ್ತು ಎಲ್ಲಾ ಕಾಲೇಜುಗಳಲ್ಲಿ ಒಂದೇ ಹಾಜರಾತಿ ಮಾನದಂಡವನ್ನು ನಿಗದಿಪಡಿಸುವುದು; ವಿದ್ಯಾರ್ಥಿಗಳ 10ನೇ ಮತ್ತು 12ನೇ ಅಂಕಪಟ್ಟಿಗಳನ್ನು ತಡೆಹಿಡಿಯದಂತೆ ಕಾಲೇಜು ಪ್ರವೇಶ ವಿಭಾಗಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡುವುದು; ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿಗಳಲ್ಲಿ ವಿದ್ಯಾರ್ಥಿಗಳ ಸಂಯೋಜನೆ ಹೆಚ್ಚಿಸುವುದು ಸೇರಿದಂತೆ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ವಿಶ್ವವಿದ್ಯಾಲಯದ ಪ್ರಭಾವದಿಂದ ಮುಕ್ತವಾದ ಸಮಿತಿಗಳನ್ನು ಸ್ಥಾಪಿಸಬೇಕು ಎಂದು ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಒಕ್ಕೂಟ ಅರ್ಜಿ ಸಲ್ಲಿಸಿತ್ತು.