ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿ ಇರಲು ಬಿಡುವುದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ಸೋಮವಾರ ಬೆಂಗಳೂರು ಮೆಟ್ರೊ ಚಿಕ್ಸ್ ಎಂಬ ಇನ್‌ಸ್ಟಾಗ್ರಾಂ ಪುಟ ಹೊಂದಿರುವ ವ್ಯಕ್ತಿಯ ವಿರುದ್ಧದ ಹಿಂಬಾಲಿಕೆ (ಸ್ಟಾಲ್ಕಿಂಗ್) ಮತ್ತು ಸಾಕ್ಷ್ಯ ನಾಶ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಬಿ ಕೆ ದಿಗಂತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಮೆಟ್ರೊದಲ್ಲಿ ಮಹಿಳೆಯರ ಹಿಂಬದಿ ಫೋಟೊ ತೆಗೆದುಕೊಂಡು ಮೆಟ್ರೊ ಚಿಕ್ಸ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುತ್ತೀರಾ? ಏನಿದು ಅಸಹ್ಯ. ಇದನ್ನು ಹೇಗೆ ಮಾಡುತ್ತೀರಿ? ಮೆಟ್ರೊನೂ ಸುರಕ್ಷಿತವಾಗಿ ಬಿಡುವುದಿಲ್ಲ. ಯಾವ ರೀತಿಯ ಮನುಷ್ಯರು ನೀವು?” ಎಂದು ಕಿಡಿಕಾರಿತು.
ಮುಂದುವರಿದು, “ಮಹಿಳೆಯರ ಹಿಂದಿನ ಭಾಗ ಫೋಟೊ ತೆಗೆದು ಅದನ್ನು ಮೆಟ್ರೊ ಚಿಕ್ಸ್‌ನಲ್ಲಿ ಹಾಕುವುದೇ? ಯಾಕೆ ಆ ಫೋಟೊಗಳನ್ನು ತೆಗೆದಿರಿ. ಎಲ್ಲೋದರೂ ಮಹಿಳೆಯರನ್ನು ಬಿಡುವುದಿಲ್ಲ. ಎಲ್ಲೂ ಮಹಿಳೆಯರನ್ನು ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲ” ಎಂದಿತು.
ಅರ್ಜಿದಾರರ ಪರ ವಕೀಲರು ಎಸ್ ಆರ್ ಶ್ರೀಪ್ರಸಾದ್ ಅವರು “ಸಿಸಿಟಿವಿ ಕ್ಯಾಮೆರಾಗಳು ಇವೆ. ಇಲ್ಲಿ ಪೊಲೀಸರೇ ದೂರುದಾರರಾಗಿದ್ದಾರೆ. ಯಾವುದೇ ಅಪರಾಧವಾಗಿಲ್ಲ” ಎಂದರು.
ಇದಕ್ಕೆ ಪೀಠವು “ಇನ್‌ಸ್ಟಾಗ್ರಾಂ ಪೇಜ್ ಬೇರೆ, ಅದರಲ್ಲಿ ಮೆಟ್ರೊ ಚಿಕ್ಸ್ ರೀಲ್ಸ್… ತಾಂತ್ರಿಕ ವಿಚಾರಗಳನ್ನು ಮುಂದು ಮಾಡಿ ಇಂಥ ಪ್ರಕರಣದಲ್ಲಿ ಪಾರಾಗಲು ಬಿಡುವುದಿಲ್ಲ. ಕೆಲವು ವಿಚಾರಗಳಲ್ಲಿ ತಾಂತ್ರಿಕ ವಿಚಾರಗಳನ್ನು ನಿಲ್ಲಿಸಲು ಸಮಯ ಬಂದಿದೆ” ಎಂದಿತು. ಅಲ್ಲದೇ, “ಮಹಿಳೆಯರ ಹಿಂಬದಿಯ ಚಿತ್ರ ತೆಗೆದು ವೆಬ್‌ಸೈಟ್‌ಗೆ ಹಾಕುವುದು ಅಪರಾಧವಲ್ಲವೇ?” ಎಂದು ಹೇಳಿ, ಅರ್ಜಿ ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ: ಮೆಟ್ರೊ ಚಿಕ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆಂಗಳೂರಿನ ಮೆಟ್ರೊದಲ್ಲಿ ಸಂಚರಿಸುವ ಮಹಿಳೆಯರು ಮತ್ತು ಮೆಟ್ರೊ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಮಹಿಳೆಯರ ಮುಂಭಾಗ ಮತ್ತು ಹಿಂಭಾಗದ ವಿಡಿಯೊಗಳನ್ನು ಚಿತ್ರೀಕರಿಸಿ ಅಪ್‌ಲೋಡ್ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಬನಶಂಕರಿ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67, ಬಿಎನ್‌ಎಸ್ ಸೆಕ್ಷನ್ 78(2)ರ ಅಡಿ ಪ್ರಕರಣ ದಾಖಲಿಸಿದ್ದರು. ಆರೋಪ ಪಟ್ಟಿಯಲ್ಲಿ ಬಿಎನ್‌ಎಸ್ ಸೆಕ್ಷನ್ 238(C) ಅಡಿ ಆರೋಪವನ್ನು ಸೇರಿಸಲಾಗಿದೆ.