Dr. Ambedkar, Priyank Kharge & Karnataka HC 
ಸುದ್ದಿಗಳು

ಡಾ. ಅಂಬೇಡ್ಕರ್, ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್: ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಆರೋಪ ಪಟ್ಟಿ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿ ‘ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ’ ಎಂದ ಹೈಕೋರ್ಟ್; ಆರೋಪಿಗೆ ₹25,000 ದಂಡ ವಿಧಿಸಿ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ಆದೇಶ.

Bar & Bench

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಜಾತಿಯನ್ನು ಉಲ್ಲೇಖಿಸಿ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ಮಂಡ್ಯದ ಮಹೇಶ್ ಕೆ ಸಿ ಅಲಿಯಾಸ್ ಮಹೇಶ್ ಗೌಡ ಅವರು ಆರೋಪ ಪಟ್ಟಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ್‌ ರಾಮನಾಥ್‌ ಹೆಗಡೆ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

Justice Anant Ramanath Hegde

ಪ್ರಕರಣದ ಆರೋಪಗಳು ವಿಚಾರಣೆಗೆ ಅರ್ಹವಾಗಿವೆ ಮತ್ತು ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರಗಳಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಪ್ರಕರಣದ ವಿಚಾರಣೆ ರದ್ದುಪಡಿಸಲು ಒಂದೇ ಒಂದು ಆಧಾರವೂ ಕಂಡುಬಂದಿಲ್ಲ. ಬದಲಾಗಿ, ಆರೋಪ ಪಟ್ಟಿಯಲ್ಲಿರುವ ಅಂಶಗಳು ಪ್ರಕರಣದ ವಿಚಾರಣೆ ನಡೆಯಬೇಕೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ” ಎಂದು ನ್ಯಾಯಾಲಯ ಹೇಳಿದೆ.

ಆರೋಪ ಪಟ್ಟಿ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಅದನ್ನು “ನ್ಯಾಯಾಲಯದ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ”  ಎಂದಿದೆ. ಅಲ್ಲದೆ, ಅರ್ಜಿದಾರ-ಆರೋಪಿಗೆ ₹25,000 ದಂಡ ವಿಧಿಸಿ, ಆ ಮೊತ್ತವನ್ನು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪದಾಧಿಕಾರಿಯಾದ ಎಸ್ ವಿಜಯಕುಮಾರ್ ನೀಡಿದ್ದ ದೂರಿನ ಆಧಾರದ ಮೇಲೆ ಮಹೇಶ್ ವಿರುದ್ಧ ಮೈಸೂರು ದಕ್ಷಿಣ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಫೇಸ್‌ಬುಕ್‌ನಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ದೂರಿನ ಪ್ರಕಾರ, ಮಹೇಶ್ ಅವರು ಪ್ರಿಯಾಂಗ್‌ ಅವರ ಜಾತಿಯನ್ನು ಉಲ್ಲೇಖಿಸಿದ್ದಲ್ಲದೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಪ್ರಿಯಾಂಕ್‌ಗೆ ಇರುವ ಗೌರವವನ್ನು ಪ್ರಶ್ನಿಸಿದ್ದರು. ಅಂಬೇಡ್ಕರ್ ಅವರು ಸಚಿವರು ಸೇರಿದ ಅದೇ ಜಾತಿಯಲ್ಲಿ ಜನಿಸಿದ್ದರು ಎಂಬ ರೀತಿಯಲ್ಲಿ ಪೋಸ್ಟ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದಲ್ಲಿ ಮೈಸೂರು ದಕ್ಷಿಣ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಬಿಎನ್‌ಎಸ್‌ ಸೆಕ್ಷನ್ 352 (ಶಾಂತಿಭಂಗಕ್ಕೆ ಪ್ರಚೋದಿಸುವ ಉದ್ದೇಶದೊಂದಿಗೆ ಉದ್ದೇಶಪೂರ್ವಕ ಅವಮಾನ), 338 (ಮೌಲ್ಯಯುತ ಭದ್ರತಾ ಪತ್ರ, ವಿಲ್ ಸೇರಿದಂತೆ ನಿರ್ದಿಷ್ಟ ದಾಖಲೆಗಳ ನಕಲು) ಮತ್ತು 241 (ಸಾಕ್ಷ್ಯ ನಾಶ ಅಥವಾ ಮರೆಮಾಚುವಿಕೆ) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ನಿಬಂಧನೆಗಳನ್ನೂ ಅನ್ವಯಿಸಲಾಗಿತ್ತು.

ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ, ಫೇಸ್‌ಬುಕ್ ಪೋಸ್ಟ್‌ನಿಂದ ನೇರವಾಗಿ ಬಾಧಿತರಾದ ವ್ಯಕ್ತಿಯಲ್ಲದವರು ದೂರು ದಾಖಲಿಸಿದ್ದಾರೆ. ಹೀಗಾಗಿ, ದೂರುದಾರರು ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲು ಅರ್ಹರಲ್ಲ. ಫೇಸ್‌ಬುಕ್ ಪೋಸ್ಟ್ ಯಾವುದೇ ಕ್ರಿಮಿನಲ್ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ವಾದಿಸಿದ್ದರು.

MV Anoo Kumar, ASPP

ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಎಂ ವಿ ಅನೂಪ್ ಕುಮಾರ್ ಅವರು, ಆರೋಪಗಳ ಕುರಿತು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸುವಲ್ಲಿ ಪೊಲೀಸರು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ವಾದಿಸಿದ್ದರು.

ಉಭಯ ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.