Justice M Nagaprasanna and Karnataka HC

 
ಸುದ್ದಿಗಳು

ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯವೂ ಅತ್ಯಾಚಾರ: ಕರ್ನಾಟಕ ಹೈಕೋರ್ಟ್‌

ಹೆಂಡತಿಯ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಪತಿಗೆ ಅಧಿಕಾರವಿದೆ ಎಂಬ ಈ ಹಳೆಯ ಕಾಲದ ಯೋಚನೆ ಮತ್ತು ಸಂಪ್ರದಾಯವನ್ನು ಮುರಿಯಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ವೈವಾಹಿಕ ಸಂಬಂಧದಲ್ಲಿ ಸಮ್ಮತಿಗೆ ಸಂಬಂಧಿಸಿದ ನ್ಯಾಯಶಾಸ್ತ್ರದ ದೃಷ್ಟಿಯಿಂದ ಮಹತ್ವದ ಬೆಳವಣಿಗೆ ಎನ್ನಬಹುದಾದ ಪ್ರಕರಣವೊಂದರಲ್ಲಿ ಪತ್ನಿಯ ಮೇಲಿನ ಅತ್ಯಾಚಾರ ಮತ್ತು ಆಕೆಯನ್ನು ಲೈಂಗಿಕ ಕ್ರಿಯೆಗೆ ಗುಲಾಮಳನ್ನಾಗಿಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 376ರ ಅಡಿ ದಾಖಲಾಗಿದ್ದ ದೂರನ್ನು ವಜಾ ಮಾಡಲು ಬುಧವಾರ ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ (ಹೃಷಿಕೇಶ್‌ ಸಾಹೂ ವರ್ಸಸ್‌ ಕರ್ನಾಟಕ ರಾಜ್ಯ).

ತಮ್ಮ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ರದ್ದು ಕೋರಿ ಒಡಿಶಾ ಮೂಲದ ಹೃಷಿಕೇಶ್‌ ಸಾಹೂ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

“ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯದ ಕ್ರೂರ ಕೃತ್ಯವನ್ನು ಅತ್ಯಾಚಾರ ಎಂದೇ ಕರೆಯಲಾಗುತ್ತದೆ. ಪತ್ನಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯವು ಆಕೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಂಡಂದಿರ ಇಂತಹ ಕೃತ್ಯಗಳು ಪತ್ನಿಯರ ಆತ್ಮದಲ್ಲಿ ಮಾಸದ ನೋವುಗಳನ್ನು ಉಳಿಸುತ್ತವೆ” ಎಂದು ಪೀಠ ಹೇಳಿದೆ.

ಯುಗಯುಗಗಳಿಂದ ಪತಿಯ ವೇಷಧಾರಿಯಾದ ಪುರುಷ ಪತ್ನಿಯನ್ನು ತನ್ನ ಚರಾಸ್ತಿಯನ್ನಾಗಿ ಬಳಸಿದ್ದಾನೆ. ತನ್ನ ಹೆಂಡತಿ, ಆಕೆಯ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಆತನಿಗೆ ಅಧಿಕಾರವಿದೆ ಎಂಬ ಈ ಹಳೆಯ ಕಾಲದ ಯೋಚನೆ ಮತ್ತು ಸಂಪ್ರದಾಯವನ್ನು ಮುರಿಯಬೇಕಿದೆ ಎಂದು ಪೀಠ ಹೇಳಿದೆ.

ವಿವಾಹವು ಪುರುಷನಿಗೆ ಯಾವುದೇ ವಿಶೇಷ ಸವಲತ್ತು ಅಥವಾ ಹೆಂಡತಿಯ ಮೇಲೆ "ಕ್ರೂರ" ದಾಳಿ ನಡೆಸಲು ಪರವಾನಗಿ ನೀಡುವುದಿಲ್ಲ. ಅತ್ಯಾಚಾರದ ಕಾರಣಕ್ಕೆ ಪುರುಷನಿಗೆ ಶಿಕ್ಷೆ ವಿಧಿಸುವುದಾದರೆ ಆತ ಪತಿಯಾದರೂ ಶಿಕ್ಷೆ ವಿಧಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ವಿವಾಹದ ನಂತರ ಕೆಲವು ವರ್ಷ ಒಟ್ಟಾಗಿ ಜೀವನ ನಡೆಸಿದ್ದ‌ ದಂಪತಿಯ ಬದುಕಿನಲ್ಲಿ ಬಿರುಕು ಮೂಡಿತ್ತು. ತನಗೆ ಮತ್ತು ಮಗುವಿಗೆ ಪತಿಯು ಹಲವು ಬಾರಿ ಮಾನಸಿಕ ಮತ್ತು ದೈಹಿಕ ತೊಂದರೆ ನೀಡಿದ್ದಾರೆ ಎಂದು ಪತ್ನಿಯು ಪತಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 506 (ಕ್ರಿಮಿನಲ್‌ ಬೆದರಿಕೆ) 498ಎ (ಪತ್ನಿಗೆ ಹಿಂಸೆ) 323 (ಸ್ವಯಂಪ್ರೇರಿತವಾಗಿ ನೋವು ನೀಡುವುದು) 377 (ಅಸ್ವಾಭಾವಿಕ ಅಪರಾಧಗಳು) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್‌ 10 (ಲೈಂಗಿಕ ದೌರ್ಜನ್ಯ) ಪ್ರಕರಣ ದಾಖಲಿಸಿದ್ದರು. ವಿಶೇಷ ನ್ಯಾಯಾಲಯವು ಪತಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 (ಅತ್ಯಾಚಾರ), 498ಎ ಮತ್ತು 506 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್‌ 5(ಎಂ) ಮತ್ತು (ಐ) ಜೊತೆಗೆ ಸೆಕ್ಷನ್‌ 6 ಅಡಿ ಆರೋಪ ನಿಗದಿ ಮಾಡಿತ್ತು.

ಪತ್ನಿಯ ದೂರು

“ಮದುವೆಯದ ಮೊದಲ ದಿನದಿಂದಲೂ ಪತಿಗೆ ನಾನು ಲೈಂಗಿಕ ಗುಲಾಮಗಳಾಗಿದ್ದೇನೆ. ಲೈಂಗಿಕ ಸಂಬಂಧಿತ ಸಿನಿಮಾಗಳನ್ನು ವೀಕ್ಷಿಸುವಂತೆ ಮಾಡಿ ಅಸಹಜವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಪತಿ ಒತ್ತಾಯ ಮಾಡಿದ್ದಾನೆ. ಗರ್ಭಿಣಿಯಾಗಿದ್ದಾಗ ಮತ್ತು ಗರ್ಭಪಾತವಾದ ಸಂದರ್ಭದಲ್ಲೂ ಪತಿ ಸಂಭೋಗ ನಡೆಸುವುದನ್ನು ನಿಲ್ಲಿಸಿರಲಿಲ್ಲ” ಎಂದು ಪತ್ನಿ ದೂರಿದ್ದರು.

“ಪತಿ ಅಮಾನುಷನಾಗಿ ನಡೆದುಕೊಂಡಿದ್ದು, ಪುತ್ರಿಯ ಮುಂದೆಯೇ ಅನೈಸರ್ಗಿಕ ಸಂಭೋಗದಲ್ಲಿ ತೊಡಗುವಂತೆ ಮಾಡುತ್ತಿದ್ದ. ಪುತ್ರಿಯ ಮೇಲೂ ಲೈಂಗಿಕ ದೌರ್ಜನ್ಯವೆಸಗಿ ಆಕೆಯ ಎದುರೇ ನನ್ನ‌ ಜೊತೆ ಸಂಭೋಗ ನಡೆಸುತ್ತಿದ್ದ. ಜಗತ್ತಿನಲ್ಲಿ ಯಾವುದೇ ಮಹಿಳೆ ವಿವರಿಸಲಾಗದ ರೀತಿಯಲ್ಲಿ ಪತಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಪುತ್ರಿಯನ್ನು ಮುಂಚಿತವಾಗಿ ಶಾಲೆಯಿಂದ ಕರೆತಂದು ಆಕೆಯ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ರೀತಿಯ ಚಿತ್ರ ಹಿಂಸೆ ಯಾವುದೇ ತಾಯಿ ಮತ್ತು ಮಗಳಿಗೆ ಬೇಡ” ಎಂದು ದೂರಿನಲ್ಲಿ ನೊಂದ ಪತ್ನಿ ಉಲ್ಲೇಖಿಸಿದ್ದರು.