Justices Alok Aradhe and Vijaykumar A. Patil
Justices Alok Aradhe and Vijaykumar A. Patil 
ಸುದ್ದಿಗಳು

ವಿಚ್ಛೇದನದ ನಂತರ ಮರುಮದುವೆ: ತಂದೆಯಿಂದ ಮಗಳ ಭೇಟಿ ಹಕ್ಕು ಕಸಿದುಕೊಳ್ಳಲು ಕರ್ನಾಟಕ ಹೈಕೋರ್ಟ್ ನಿರಾಕರಣೆ

Bar & Bench

ಗಂಡ ತನ್ನನ್ನು ತ್ಯಜಿಸಿದ ನಂತರ ಎರಡು ಮದುವೆಯಾಗಿದ್ದು, ಅಪ್ರಾಪ್ತ ಮಗಳನ್ನು ನೋಡಲು ಒಮ್ಮೆಯೂ ಬರಲಿಲ್ಲ. ಅಂತಹವರಿಗೆ ಮಗಳನ್ನು ಭೇಟಿ ಮಾಡುವ ಹಕ್ಕು ನೀಡಬಾರದು ಎಂಬ ಮಹಿಳೆಯ ವಾದವನ್ನು ಒಪ್ಪದ ಕರ್ನಾಟಕ ಹೈಕೋರ್ಟ್, ಮಗಳನ್ನು ಭೇಟಿ ಮಾಡಲು ತಂದೆಗೆ ಅನುಮತಿ ನೀಡಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಮೇಲ್ಮನವಿದಾರೆಯ ಪತಿ ಆಕೆಯಿಂದ ವಿಚ್ಛೇದನ ಪಡೆದ ನಂತರ ಎರಡು ಮದುವೆಯಾಗಿದ್ದಾರೆ. ವಿಚ್ಛೇದಿತ ಪತಿಯ ಎರಡನೇ ಪತ್ನಿಯು ತನ್ನ ಮೊದಲನೇ ಪತಿಯಿಂದ ಒಂದು ಮಗುವನ್ನು ಹೊಂದಿದ್ದಾರೆ. ಆಕೆಯ ಮಗು ಸಹ ವಿಚ್ಛೇದಿತ ಪತಿಯ ಸುಪರ್ದಿಯಲ್ಲಿದೆ. ಅಲ್ಲದೆ ವಿಚ್ಛೇದಿತ ಪತಿ ಮತ್ತು ಮೇಲ್ಮನವಿದಾರೆಯ ಮೊದಲ ಗಂಡು ಮಗು ಸಹ ವಿಚ್ಛೇದಿತ ಪತಿಯ ಸುಪರ್ದಿನಲ್ಲಿದೆ. ಮೇಲ್ಮನವಿದಾರೆಯ ಅಪ್ರಾಪ್ತ ಮಗಳ ಭೇಟಿಯ ಹಕ್ಕನ್ನು ವಿಚ್ಛೇದಿತ ಪತಿಗೆ ನೀಡಿದರೆ, ಕ್ಷೇಮವಾಗಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಆತಂಕವನ್ನು ಪರಿಗಣಿಸಿಯೇ ಕೌಟುಂಬಿಕ ನ್ಯಾಯಾಲಯವು ಅಪ್ರಾಪ್ತ ಮಗಳ ಶಾಶ್ವತ ಸುಪರ್ದನ್ನು ತಾಯಿಗೆ ನೀಡಿ, ಕೇವಲ ಭೇಟಿಯ ಹಕ್ಕನ್ನು ತಂದೆಗೆ ನೀಡಿದೆ ಎಂದು ಅಭಿಪ್ರಾಯಟ್ಟಿರುವ ಹೈಕೋರ್ಟ್, ಅಪ್ರಾಪ್ತ ಮಗಳ ಭೇಟಿಯ ಹಕ್ಕನ್ನು ಮೇಲ್ಮನವಿದಾರಳ ವಿಚ್ಛೇದಿತ ಪತಿಗೆ ನೀಡಿದೆ.

ಮೇಲ್ಮನವಿದಾರೆಯ ಕೋರಿಕೆಯನ್ನು ತಿರಸ್ಕರಿರುವ ಹೈಕೋರ್ಟ್, ವಿಚ್ಛೇದಿತ ಪತಿಯು ಮೇಲ್ಮನವಿದಾರೆಯಿಂದ ವಿಚ್ಛೇದನ ಪಡೆದ ನಂತರ ಎರಡು ಮದುವೆಯಾಗಿದ್ದಾರೆ. ಮೇಲ್ಮನವಿಯ ಅಪ್ರಾಪ್ತೆ ಪುತ್ರಿ ಪೋಷಣೆಗೆ ಮತ್ತು ಶಿಕ್ಷಣಕ್ಕೆ ಹಣ ಖರ್ಚು ಮಾಡಿಲ್ಲ. ಮಗಳನ್ನು ನೋಡಲು ಸಹ ಬಂದಿಲ್ಲ. ಮಗಳ ಶಿಕ್ಷಣದ ಖರ್ಚು-ವೆಚ್ಚವನ್ನು ಮೆಲ್ಮನವಿದಾರೆಯೇ ಭರಿಸಿದ್ದಾರೆ ಎನ್ನುವುದನ್ನು ಗಮನಿಸಿತು.

ಮಗಳು ಶಾಲೆಗೆ ಹೋಗುತ್ತಿದ್ದು, ತಂದೆಯನ್ನು ನೋಡುವ ಸಮಯ ಇಲ್ಲವಾಗಿದೆ. ಹೀಗಾಗಿ, ಭೇಟಿ ಮಾಡುವ ಹಕ್ಕು ನೀಡುವುದು ಮಗಳ ಆಶಯಕ್ಕೆ ವಿರುದ್ಧವಾಗಿರುತ್ತದೆ ಎಂದು ಮೇಲ್ಮನವಿದಾರೆ ಕೋರಿದ್ದರು. ಆದರೆ, ಅಪ್ರಾಪ್ತೆ ಮಗಳು ತಂದೆಯ ಆರೈಕೆ, ಪ್ರೀತಿ ಮತ್ತು ವಾತ್ಸಲವ್ಯನ್ನು ಕಾಣಬೇಕಿದೆ. ಅದಕ್ಕಾಗಿ ಶಾಲೆಗೆ ರಜೆಯಿದ್ದ ಸಂದರ್ಭದಲ್ಲಿ ಮಗಳನ್ನು ಭೇಟಿ ಮಾಡುವ ಮತ್ತು ತನ್ನ ಮನೆಗೆ ಕರೆದುಕೊಂಡು ಹೋಗಲು ತಂದೆಗೆ ಅನುಮತಿ ನೀಡಿ ಕೌಟುಂಬಿಕ ನ್ಯಾಯಾಲಯ ಆದೇಶ ಮಾಡಿದೆ. ಆ ಆದೇಶವು ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.