Karnataka High Court 
ಸುದ್ದಿಗಳು

ಭೂಗತ ಪಾತಕಿ ಬನ್ನೆಂಜೆ ರಾಜನ ಸಹಚರ ಶಶಿ ಪೂಜಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್‌

ಶಶಿ ಪೂಜಾರಿಯನ್ನು 2019ರ ಮಾರ್ಚ್ 21ರಂದು ಬಂಧಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಅರ್ಜಿದಾರರರನ್ನು ಎರಡನೇ ಆರೋಪಿ & ಬನ್ನಂಜೆ ರಾಜನನ್ನು ಮೊದಲನೇ ಆರೋಪಿಯನ್ನಾಗಿ ಮಾಡಲಾಗಿತ್ತು.

Bar & Bench

 ಶಶಿ ಪೂಜಾರಿಯನ್ನು 2019ರ ಮಾರ್ಚ್‌ 21ರಂದು ಬಂಧಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಅರ್ಜಿದಾರರರನ್ನು ಎರಡನೇ ಆರೋಪಿ ಮತ್ತು ಬನ್ನಂಜೆ ರಾಜನನ್ನು ಮೊದಲನೇ ಆರೋಪಿಯನ್ನಾಗಿ ಮಾಡಲಾಗಿತ್ತು. 

ಉಡುಪಿ ಮೂಲದ ಉದ್ಯಮಿ ಹಾಗೂ ಆತನ ಪುತ್ರನಿಗೆ ಒತ್ತೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ 2019ರಲ್ಲಿ ಬೆದರಿಕೆ ಹಾಕಿದ್ದ ಪ್ರಕರಣದ ಸಂಬಂಧ ಭೂಗತ ಪಾತಕಿ ಬನ್ನೆಂಜೆ ರಾಜನ ಸಹಚರ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಬೆಂಗಳೂರಿನ ಶಶಿ ಪೂಜಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅಪರಾಧ ಸಿಂಡಿಕೇಟ್‌ಗಾಗಿ ವೈಯಕ್ತಿಕವಾಗಿ ಕಾರ್ಯನಿರ್ವಹಿಸುವ ಆರೋಪಿಯ ವಿರುದ್ಧವೂ ಸಹ ಕರ್ನಾಟಕ ಅಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) ಅನ್ವಯವಾಗುತ್ತದೆ ಎಂದಿದೆ.

ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಾನದಂಡದ ಪ್ರಕಾರವೇ, ಆರೋಪಿಯನ್ನು ಬಿಡುಗಡೆ ಮಾಡಿದರೆ ಆತನಿಂದ ಸಮಾಜಕ್ಕೆ ಅಪಾಯವಿದೆ. ಇಂಥ ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಜಾಮೀನು ತಿರಸ್ಕರಿಸಿರುವುದಕ್ಕೆ ಕಾರಣವನ್ನೂ ನೀಡಿರುವ ಪೀಠವು ಆರೋಪಿಯು ತನಗೂ ಕೃತ್ಯಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾನೆ. ಆದರೆ, ಅರ್ಜಿದಾರರ ಸಹೋದರ ಮತ್ತು ಈ ಪ್ರಕರಣದ ಪ್ರಮುಖ ಆರೋಪಿ ರವಿಚಂದ್ರ ಪೂಜಾರಿ ಜೈಲಿನಲ್ಲಿದ್ದುಕೊಂಡೇ ಅರ್ಜಿದಾರರ ಹೆಸರಿನಲ್ಲಿ ಸಿಮ್‌ಕಾರ್ಡ್ ಪಡೆದಿದ್ದಾರೆ ಎಂದು ಹೇಳಿದೆ.

ಆರೋಪಪಟ್ಟಿಯಲ್ಲಿನ ಹಲವು ಅಂಶಗಳನ್ನು ಉಲ್ಲೇಖಿಸಿರುವ ಪೀಠವು ಅರ್ಜಿದಾರರು ಹಲವು ಬಾರಿ ಬನ್ನಂಜೆ ರಾಜನನ್ನು ಭೇಟಿಯಾಗಿದ್ದಾನೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಹೀಗಾಗಿ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಿದೆ.

ಕೋಕಾ ಕಾಯಿದೆಯಡಿ ಸಂಘಟಿತ ಅಪರಾಧ ಸಿಂಡಿಕೇಟ್ ಎಂಬುದರ ವ್ಯಾಖ್ಯಾನ ಎಲ್ಲರೂ ಒಗ್ಗೂಡಿ ಅಪರಾಧ ಕೃತ್ಯ ನಡೆಸುವುದು ಮತ್ತು ವೈಯಕ್ತಿಕವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುವುದು ಎರಡೂ ಸೇರಿದೆ. ಆದ್ದರಿಂದ, ಅಪರಾಧ ಸಿಂಡಿಕೇಟ್ ಭಾಗವಾಗಿ ಆರೋಪಿ ಕೆಲವು ಕೃತ್ಯಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕೋಕಾ ಕಾಯಿದೆ ಅನ್ವಯವಾಗಲಿದೆ. ಹೀಗಾಗಿ, ವಿಚಾರಣೆ ಎದುರಿಸಲೇಬೇಕು ಎಂದು ಆದೇಶ ನೀಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಪರಾಧ ಸಿಂಡಿಕೇಟ್‌ನಲ್ಲಿ ಭಾಗಿಯಾಗಿಲ್ಲ. ಹೀಗಾಗಿ, ಜಾಮೀನು ನೀಡಬೇಕು” ಎಂದು ಕೋರಿದ್ದರು.

ಪ್ರಾಸಿಕ್ಯೂಷನ್ ಪರ ವಕೀಲರಾದ ವಿಜಯಕುಮಾರ್‌ ಮಜಗೆ ಅವರು “ಅರ್ಜಿದಾರರೂ ಕೂಡ ಹಲವು ಬೆದರಿಕೆ ಮತ್ತು ಒತ್ತೆ ಹಣ ಸಂಗ್ರಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ದೂರವಾಣಿ ಕರೆ ದಾಖಲೆಗಳ ಪ್ರಕಾರ ಆತ ಪ್ರಕರಣದ ಪ್ರಮುಖ ಆರೋಪಿ ಬನ್ನಂಜೆ ರಾಜನ ಜೊತೆ ಸಂಪರ್ಕ ಹೊಂದಿದ್ದಾನೆ. ಜಾಮೀನು ನೀಡಿದರೆ ಸಮಾಜಕ್ಕೆ ಅಪಾಯವಿದೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 2019ರ ಮಾರ್ಚ್‌ನಲ್ಲಿ ಉದ್ಯಮಿಯೊಬ್ಬರ ಪುತ್ರನ ಅಪಹರಣ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು. ಹಣ ನೀಡದಿದ್ದರೆ ಹತ್ಯೆ ಮಾಡುವುದಾಗಿ ಅಪಹರಣಕಾರರು ತುಳು ಭಾಷೆಯಲ್ಲಿ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಪ್ರಕರಣವನ್ನು ಉಡುಪಿ ಠಾಣೆಗೆ ವರ್ಗಾಯಿಸಲಾಗಿತ್ತು. ಶಶಿ ಪೂಜಾರಿಯನ್ನು 2019ರ ಮಾರ್ಚ್‌ 21ರಂದು ಬಂಧಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಅರ್ಜಿದಾರರರನ್ನು ಎರಡನೇ ಆರೋಪಿ ಮತ್ತು ಬನ್ನಂಜೆ ರಾಜನನ್ನು ಮೊದಲನೇ ಆರೋಪಿಯನ್ನಾಗಿ ಮಾಡಲಾಗಿತ್ತು.