ಸರ್ಕಾರಿ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳು ಎಂಬ ಕಾರಣಕ್ಕೆ ಕಾನೂನಿನ ಕಾಲಮಿತಿಯಿಂದ ವಿಶೇಷ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ನುಡಿದಿದೆ.
ಸೇವಾ ಸಕ್ರಮೀಕರಣ ಮತ್ತು ಇತರ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನೌಕರರ ಪರವಾಗಿ ಹೊರಡಿಸಲಾಗಿದ್ದ ಆದೇಶಗಳನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ಸಲ್ಲಿಸಿದ್ದ ನಾಲ್ಕು ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಹೇಮಾ ಕುಲಕರ್ಣಿ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
“ರಾಜ್ಯವು ಮಾದರಿ ದಾವೆದಾರನಾಗಿರಬೇಕೇ ಹೊರತು, ವಿಶೇಷ ಸವಲತ್ತು ಬಯಸುವ ವಿಳಂಬಕಾರಿಯಾಗಬಾರದು” ಎಂದು ಪೀಠ ಹೇಳಿದೆ.
2026ರ ಅಕ್ಟೋಬರ್ 16ರಂದು ತೀರ್ಪು ನೀಡಿದ ಪೀಠವು, ಮೇಲ್ಮನವಿಗಳನ್ನು ಸಲ್ಲಿಸುವಲ್ಲಿನ 466, 548, 626 ಮತ್ತು 1,099 ದಿನಗಳ ವಿಳಂಬವನ್ನು ಕ್ಷಮಿಸಲು ಅಗತ್ಯವಾದ ಸಮರ್ಪಕ ಕಾರಣಗಳನ್ನು ಅರ್ಜಿದಾರರು ನೀಡಿಲ್ಲ ಎಂದು ಅಭಿಪ್ರಾಯಪಟ್ಟಿತು. ವಿಳಂಬ ಕ್ಷಮಿಸುವಂತೆ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ ಪೀಠವು ನಾಲ್ಕೂ ಮೇಲ್ಮನವಿಗಳನ್ನು ಕಾಲಮಿತಿಯ ಆಧಾರದಲ್ಲಿ ವಜಾಗೊಳಿಸಿತು. ಈ ಮೂಲಕ ಪ್ರಕರಣಗಳ ಅರ್ಹತೆಯ ಕುರಿತಾದ ವಿವಾದವನ್ನು ಪೀಠ ಪರಿಶೀಲಿಸಲಿಲ್ಲ.
“ಉದಾಸೀನರಿಗೆ ಬಹುಮಾನ ನೀಡುವ ಮತ್ತು ಶ್ರದ್ಧೆಯಿಂದ ನಡೆದುಕೊಂಡವರಿಗೆ ಶಿಕ್ಷೆ ವಿಧಿಸುವ ಏಕಪಕ್ಷೀಯ ಸವಲತ್ತಾಗಿ ಉದಾರ ದೃಷ್ಟಿಕೋನ ಮಾರ್ಪಡಬಾರದು” ಎಂದು ನ್ಯಾಯಾಲಯ ಹೇಳಿದೆ.
2010ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕಗೊಂಡಿದ್ದ ನೌಕರರ ಸೇವೆ ಸಕ್ರಮಗೊಳಿಸುವುದು, ವೇತನ ಅನುದಾನ ಬಿಡುಗಡೆ ಮಾಡುವುದು, ಬಾಕಿ ವೇತನ ಪಾವತಿಸುವುದು ಮತ್ತು ಇತರ ಸಂಬಂಧಿತ ಸೇವಾ ಸೌಲಭ್ಯಗಳನ್ನು ನೀಡುವ ವಿಚಾರವಾಗಿ ಈ ಮೇಲ್ಮನವಿಗಳು ಉದ್ಭವಿಸಿದ್ದವು. ಏಕಸದಸ್ಯ ಪೀಠವು ವಿವಿಧ ಅರ್ಜಿಗಳಲ್ಲಿ ನೌಕರರ ಹಕ್ಕುಗಳಿಗೆ ಸಂಬಂಧಿಸಿದಂತೆ ಆದೇಶಗಳನ್ನು ಹೊರಡಿಸಿದ್ದವು.
ಆದರೆ, ಆ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯವು ದೀರ್ಘ ಕಾಲಾವಕಾಶ ತೆಗೆದುಕೊಂಡಿದ್ದವು. ವಿಳಂಬವನ್ನು ಕ್ಷಮಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳಲ್ಲಿ ಕಡತಗಳ ಚಲಾವಣೆ, ವಿವಿಧ ಅಧಿಕಾರಿಗಳ ನಡುವಿನ ಪತ್ರ ವ್ಯವಹಾರ, ಕಾನೂನು ಅಭಿಪ್ರಾಯ ಪಡೆಯುವುದು ಮತ್ತು ದಾಖಲೆಗಳನ್ನು ಸಂಗ್ರಹಿಸುವುದನ್ನು ಕಾರಣಗಳಾಗಿ ನೀಡಲಾಗಿತ್ತು.
ಈ ಸಮರ್ಥನೆಗಳನ್ನು ತಿರಸ್ಕರಿಸಿದ ಹೈಕೋರ್ಟ್, ಇವು ಆಡಳಿತಾತ್ಮಕ ಚಟುವಟಿಕೆಗಳ ವಿವರಣೆಯಷ್ಟೇ ಹೊರತು, ಕಾನೂನುಬದ್ಧವಾಗಿ ವಿಳಂಬಕ್ಕೆ ಸಮರ್ಪಕ ಕಾರಣಗಳಲ್ಲ ಎಂದು ಹೇಳಿತು.
ನೌಕರರು ತಮ್ಮ ಪರವಾಗಿ ಹೊರಡಿಸಲಾದ ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಆರಂಭಿಸಿದ ಬಳಿಕವೇ ಸರ್ಕಾರ ಮತ್ತು ವಿಶ್ವವಿದ್ಯಾಲಯ ಮೇಲ್ಮನವಿ ಸಲ್ಲಿಸುವ ನಿಟ್ಟಿನಲ್ಲಿ ಚುರುಕುಗೊಂಡಿದ್ದನ್ನು ಪೀಠ ಗಮನಿಸಿದೆ.
“ನ್ಯಾಯಾಲಯದ ಆದೇಶದ ಫಲವನ್ನು ಪಡೆಯಲು ಯಶಸ್ವಿಯಾದ ದಾವೆದಾರರು ಅನಿರ್ದಿಷ್ಟಾವಧಿಯವರೆಗೆ ಕಾಯುವಂತೆ ಮಾಡಲಾಗದು. ಅದೇ ವೇಳೆ, ತನ್ನದೇ ಆಡಳಿತಾತ್ಮಕ ಅಸಮರ್ಥತೆಯನ್ನು ಹಿಂದಿನ ವ್ಯಾಜ್ಯವನ್ನು ಮತ್ತೆ ತೆರೆಯಲು ಸಮರ್ಥನೆಯಾಗಿ ರಾಜ್ಯ ಬಳಸಬಾರದು” ಎಂದು ನ್ಯಾಯಾಲಯ ಸ್ಪಷ್ಟವಾಗಿ ನುಡಿದಿದೆ.
ವಿಳಂಬ ಕ್ಷಮಿಸುವ ಅಧಿಕಾರವನ್ನು ನ್ಯಾಯಸಮ್ಮತತೆಯನ್ನು ಸಾಧಿಸುವ ಉದ್ದೇಶದಿಂದ ಬಳಸಬೇಕಾದರೂ, ಅದರಿಂದ ಮೇಲ್ಮನವಿ ಸಲ್ಲಿಸುವ ಪಕ್ಷಕಾರರಿಗೆ ಮಾತ್ರ ಅನುಕೂಲವಾಗಬಾರದು. ಈಗಾಗಲೇ ನ್ಯಾಯಾಲಯದ ಆದೇಶ ಪಡೆದಿರುವ ದಾವೆದಾರರ ಹಕ್ಕುಗಳು, ನ್ಯಾಯಾಂಗದ ಆದೇಶಗಳ ಪಾವಿತ್ರ್ಯ ಮತ್ತು ವ್ಯಾಜ್ಯಗಳಿಗೆ ಅಂತಿಮತೆ ನೀಡುವ ಕಾಲಮಿತಿಯ ಕಾನೂನಿನ ಉದ್ದೇಶಗಳನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.
ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಇತರ ದಾವೆದಾರರಂತೆಯೇ ಕಾಲಮಿತಿಯ ಕಾನೂನಿಗೆ ಒಳಪಡುತ್ತವೆ. ಇಲ್ಲದಿದ್ದರೆ, ನಿಷ್ಕ್ರಿಯತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಕಾನೂನಿನಲ್ಲಿ ನಿಗದಿಪಡಿಸಿದ ಕಾಲಮಿತಿಯು ಆಡಳಿತದ ಇಚ್ಛೆಗೆ ಅನುಗುಣವಾಗಿ ಬದಲಾಗುವ ಸ್ಥಿತಿಗೆ ತಲುಪುತ್ತದೆ ಎಂದು ನ್ಯಾಯಾಲಯ ಹೇಳಿತು.
ವಿಳಂಬ ಕ್ಷಮಿಸುವ ಅರ್ಜಿಗಳಲ್ಲಿ ಯಾವುದೇ ಅಸಾಧಾರಣ ಸಂದರ್ಭ, ಬಲವಾದ ಅಡ್ಡಿ ಅಥವಾ ವಿಶ್ವಾಸಾರ್ಹ ವಿವರಣೆ ಕಂಡುಬಂದಿಲ್ಲ ಎಂದು ತೀರ್ಮಾನಿಸಿದ ಪೀಠವು ನಾಲ್ಕೂ ಮೇಲ್ಮನವಿಗಳನ್ನು ವಜಾಗೊಳಿಸಿತು.
ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಂಗಾಧರ ಜೆ ಎಂ ಅವರು ವಾದ ಮಂಡಿಸಿದ್ದು, ಅವರಿಗೆ ಹೈಕೋರ್ಟ್ ಸರ್ಕಾರಿ ವಕೀಲೆ ಗಿರಿಜಾ ಎಸ್. ಹಿರೇಮಠ್ ಸಹಕರಿಸಿದರು. ಕೆಎಸ್ಎಲ್ಯು ಪರ ವಕೀಲ ಪವನ್ ಬಿ. ದೊಡ್ಡಟ್ಟಿ ಹಾಜರಾದರೆ, ಪ್ರತಿವಾದಿಗಳ ಪರ ವಕೀಲರಾದ ಸುನಿಲ್ ಎಸ್. ದೇಸಾಯಿ ಮತ್ತು ಕೆ ಎಲ್ ಪಾಟೀಲ್ ವಾದ ಮಂಡಿಸಿದರು.