ರೈತರು ಮತ್ತು ಖಾಸಗಿ ವ್ಯಕ್ತಿಗಳ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ನವೆಂಬರ್‌ನಲ್ಲಿ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ವಕ್ಫ್ ಆಸ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಆದೇಶ ಮಾಡುವಂತೆ ಕೋರಿ ಬೆಂಗಳೂರಿನ ಸಯ್ಯದ್ ಏಜಾಜ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯಲ್ಲಿ ವಿಚಾರಣಾರ್ಹತೆ ಇಲ್ಲ. ಇದು ಪ್ರಚಾರಕ್ಕಾಗಿ ಸಲ್ಲಿಸಲಾಗಿರುವ ಅರ್ಜಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠವು ಅರ್ಜಿ ವಜಾ ಮಾಡಿತು.
ರಾಜ್ಯ ಸರ್ಕಾರವು ನವೆಂಬರ್ 9ರಂದು ಸಾರ್ವಜನಿಕ ಒಳಿತಿನ ದೃಷ್ಟಿಯಿಂದ ಅಧಿಸೂಚನೆ ಹೊರಡಿಸಿದೆ. “ರೈತರು ಮತ್ತು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿರುವ ಭೂಮಿಯ ಖಾತೆಯನ್ನು ವಕ್ಫ್ ಹೆಸರಿಗೆ ನೋಂದಣಿ ಮಾಡದಂತೆ ರಾಜ್ಯ ಸರ್ಕಾರದ ಸಂಬಂಧಿತ ಇಲಾಖೆಯು ನೀಡಿರುವ ನಿರ್ದೇಶನವನ್ನು ಸಾರ್ವಜನಿಕ ಒಳಿತು ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನೋಡಬೇಕು” ಎಂದು ನ್ಯಾಯಾಲಯ ಹೇಳಿದೆ.
"ನವೆಂಬರ್ 9ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಮತ್ತು ವಕ್ಫ್ ಆಸ್ತಿಗಳ ರಕ್ಷಣೆಯ ವಿಚಾರವು ಕಾರ್ಯಾಂಗ ವ್ಯಾಪ್ತಿಗೆ ಬರುತ್ತದೆ. ‘ಈ ಅರ್ಜಿಯು ರಾಜಕೀಯ ಪ್ರೇರಿತ ಅಥವಾ ಪ್ರಚಾರಕ್ಕಾಗಿ ಸಲ್ಲಿಸಿದಂತಿದೆ. ಅರ್ಜಿದಾರರ ಪ್ರಾಮಾಣಿಕತೆ ಪ್ರಶ್ನಾರ್ಹವಾಗಿದೆ. ವಿಚಾರಣೆಗೆ ಅರ್ಹವಾದ ಯಾವುದೇ ಅಂಶಗಳು ಈ ಅರ್ಜಿಯಲ್ಲಿ ಇಲ್ಲ" ಎಂದ ಪೀಠವು ಒಂದು ಹಂತದಲ್ಲಿ ಅರ್ಜಿದಾರರಿಗೆ ₹10 ಸಾವಿರ ದಂಡ ವಿಧಿಸಿಲು ಮುಂದಾಯಿತು. ಆದರೆ, ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅವರ ಮನವಿಯ ಹಿನ್ನೆಲೆಯಲ್ಲಿ ದಂಡ ವಿಧಿಸುವ ನಿರ್ಧಾರವನ್ನು ಕೈಬಿಟ್ಟಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅವರು ರಾಜ್ಯದಾದ್ಯಂತ ಸುಮಾರು 91,000 ಎಕರೆ ಭೂಮಿಯನ್ನು ಭೂಗಳ್ಳರು, ರಾಜಕಾರಣಿಗಳು ಮತ್ತಿತರರು ಒತ್ತುವರಿ ಮಾಡಿದ್ದಾರೆ. ಈಗ ರಾಜ್ಯ ಸರ್ಕಾರವು ವಕ್ಫ್ ಆಸ್ತಿ ನೋಂದಣಿಗೆ ನಿರ್ಬಂಧ ವಿಧಿಸಿ ಹೊರಡಿಸಿರುವ ನವೆಂಬರ್ 9ರ ಸುತ್ತೋಲೆಯನ್ನು ರದ್ದುಪಡಿಸಿ, ವಕ್ಫ್ ಆಸ್ತಿ ರಕ್ಷಣೆ ಮಾಡದಿದ್ದರೆ ಇದು ಗಣನೀಯ ನಷ್ಟಕ್ಕೆ ಎಡೆ ಮಾಡಿಕೊಡಲಿದೆ. ಅದು ಸಮುದಾಯದ ಸಾಮಾಜಿಕ-ಆರ್ಥಿಕ ಪ್ರಗತಿಗೆ ಅಡ್ಡಿಯಾಗಲಿದೆ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಇದೊಂದು ರಾಜಕೀಯ ಪ್ರೇರಿತ ಪಿಐಎಲ್ ಆಗಿದ್ದು, ಅದನ್ನು ವಜಾ ಮಾಡಬೇಕು” ಎಂದು ಕೋರಿದರು.
ಅರ್ಜಿದಾರರ ಕೋರಿಕೆ ಏನು ?: ರಾಜ್ಯದಲ್ಲಿರುವ ವಕ್ಫ್‌ಗೆ ಸೇರಿದ ಎಲ್ಲ ಆಸ್ತಿಗಳ ಸಂರಕ್ಷಣೆ ಮಾಡಬೇಕು. ವಕ್ಫ್ ಆಸ್ತಿಗಳ ಒತ್ತುವರಿದಾರರಿಗೆ ರಾಜ್ಯ ಸರ್ಕಾರ ನೀಡಿದ್ದ ನೋಟಿಸ್‌ಗಳನ್ನು ಹಿಂಪಡೆದಿದೆ. ಈ ದಿಸೆಯಲ್ಲಿ 2024ರ ನವೆಂಬರ್ 9ರಂದು ಹೊರಡಿಸಿರುವ ಆದೇಶವನ್ನು ರದ್ದಪಡಿಸಬೇಕು. ಈ ಸಂಬಂಧ ನಾವು ಸರ್ಕಾರಕ್ಕೆ ನೀಡಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ವಕ್ಫ್ ಆಸ್ತಿಗಳ ಒತ್ತುವರಿ ಮಾಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವುದಕ್ಕಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಕರ್ನಾಟಕ ಇನಾಂ ನಿರ್ಮೂಲನಾ ಕಾಯಿದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯಿದೆ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಪರ್ಯಾಯವಾಗಿ ಮಾರುಕಟ್ಟೆ ಮೌಲ್ಯದ ಜಮೀನನ್ನು ನೀಡಿ ವಕ್ಫ್ ಆಸ್ತಿಗಳನ್ನು ಹಿಂಪಡೆಯಲು ನಿರ್ದೇಶಿಸಬೇಕು ಎಂದು ಕೋರಿದ್ದರು.
ವಕ್ಫ್ ಆಸ್ತಿಗಳಿಗೆ ಕುರಿತ ವಿಚಾರಗಳನ್ನು ಮಾಧ್ಯಮಗಳಲ್ಲಿ ರಾಜಕೀಯಗೊಳಿಸಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಲು ಆದೇಶಿಸಬೇಕು. ಸರ್ಕಾರ ಮತ್ತು ಸರ್ಕಾರದ ಅಧೀನ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಒತ್ತುವರಿಯಾಗಿರುವ ವಕ್ಫ್ ಮಂಡಳಿಯ ಆಸ್ತಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು. ನಿಗದಿತ ಸಮಯದಲ್ಲಿ ಹಿಂಪಡೆಯಲು ನಿರ್ದೇಶನ ನೀಡಬೇಕು ಎಂಬುದೂ ಸೇರಿದಂತೆ ಅರ್ಜಿದಾರರು ಹಲವು ಮನವಿಗಳನ್ನು ಮಾಡಿದ್ದರು.