Congress leader M R Seetharam and Karnataka HC 
ಸುದ್ದಿಗಳು

ಅಕ್ರಮ ಹಣ ಹರಿವಿನ ಪ್ರಕರಣ: ಮಾಜಿ ಸಚಿವ ಎಂ ಆರ್‌ ಸೀತಾರಾಮ್ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

ಅಕ್ರಮ ಹಣಕ್ಕೆ ಮಾಜಿ ಸಚಿವ ಸೀತಾರಾಮ್ ಅವರು ಸಮಾಧಾನಕರ ವಿವರಣೆ ನೀಡಿಲ್ಲ ಎಂದು ಹೇಳಿರುವ ನ್ಯಾಯಾಲಯ.

Bar & Bench

ತಮ್ಮ ವಿರುದ್ಧದ ₹50 ಲಕ್ಷ ಅಕ್ರಮ ಹಣ ಹರಿವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಾಂಗ್ರೆಸ್‌ ಮುಖಂಡ ಎಂ ಆರ್‌ ಸೀತಾರಾಮ್ ಅವರು ತೃಪ್ತಿದಾಯಕ ಉತ್ತರ ನೀಡಿಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್‌ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಈಚೆಗೆ ನಿರಾಕರಿಸಿದೆ [ಎಂ ಆರ್‌ ಸೀತಾರಾಮ್ ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು].

ಎಂ ಆರ್‌ ಸೀತಾರಾಮ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಅಕ್ರಮ ಹಣ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ₹3.58 ಕೋಟಿ ಕಾವೇರಿ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಟಿ ಎನ್‌ ಚಿಕ್ಕರಾಯಪ್ಪ ಅವರ ವಿರುದ್ಧ 2016ರಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 13(1)(ಡಿ), 13(1)(ಇ) ಜೊತೆಗೆ 13(2) ಅಡಿ ಪ್ರಕರಣ ದಾಖಲಿಸಿತ್ತು.

ಎಂ ಎಸ್‌ ರಾಮಯ್ಯ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷರಾದ ಸೀತಾರಾಮ್ ಅವರು ಚಿಕ್ಕರಾಯಪ್ಪ ಅವರಿಗೆ ಎಂ ಎಸ್‌ ರಾಮಯ್ಯ ವೈದ್ಯಕೀಯ ಕಾಲೇಜಿನ ಪರವಾಗಿ ₹50 ಲಕ್ಷ ಮೊತ್ತದ ಚೆಕ್‌ ನೀಡಿರುವುದು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿತ್ತು. ಚಿಕ್ಕರಾಯಪ್ಪ ಅವರ ಪುತ್ರಿಗೆ ಶೈಕ್ಷಣಿಕ ಸಾಲ ನೀಡಲಾಗಿತ್ತು ಎಂದು ಎಸಿಬಿ ನೋಟಿಸ್‌ಗೆ ಸೊಸೈಟಿಯು ಪ್ರತಿಕ್ರಿಯೆ ನೀಡಿತ್ತು.

ಆನಂತರ ಎಸಿಬಿಯು ಮತ್ತೊಂದು ನೋಟಿಸ್‌ ಮೂಲಕ ಸಾಲದ ವಿವರಣೆ ಕೇಳಿತ್ತು. ಈಗ ಸೊಸೈಟಿಯ ಕಾರ್ಯನಿರ್ವಹಣೆ ಬಂದಾಗಿದ್ದು, ದಾಖಲೆಗಳು ಲಭ್ಯವಿಲ್ಲ ಎಂದು ಸೊಸೈಟಿ ಹೇಳಿತ್ತು. ಇದಾದ ಬಳಿಕ ಎಸಿಬಿಯು ಸೀತಾರಾಮ್ ವಿರುದ್ದ ಆರೋಪ ಪಟ್ಟಿ ಸಲ್ಲಿಸಿದ್ದು, ಆನಂತರ ವಿಶೇಷ ನ್ಯಾಯಾಲಯವು ಸೀತಾರಾಮ್ ಅವರ ವಿರುದ್ಧ ಸಂಜ್ಞೇಯ ಪರಿಗಣಿಸಿತ್ತು. ಇದನ್ನು ಸೀತಾರಾಂ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

“ಎಸಿಬಿಯು ಶೈಕ್ಷಣಿಕ ಸಾಲದ ಮಾಹಿತಿ ಕೇಳಿದ ನಂತರ ಸೊಸೈಟಿ ಕಾರ್ಯಾಚರಣೆ ನಿಲ್ಲಿಸಿದೆ ಎಂಬ ಉತ್ತರ ನೀಡಲಾಗಿದೆ. ಆದರೆ, ಮೊದಲ ನೋಟಿಸ್‌ ನೀಡಿದಾಗ ಈ ವಿಚಾರ ಪ್ರಸ್ತಾಪಿಸಿಲ್ಲ. ಎರಡು ನೋಟಿಸ್‌ಗಳ ನಡುವಿನ ಒಂದು ವಾರ ಸಮಯದಲಿ ದಾಖಲೆಗಳು ನಾಶವಾಗಲು ಸಾಧ್ಯವಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಕಾಲೇಜಿನ ಹೆಸರಿನಲ್ಲಿ ಸೀತಾರಾಮ್ ಅವರ ಸಹಿ ಮಾಡಿರುವ ಚೆಕ್‌ನಿಂದ ಹಣ ಪಡೆಯಲಾಗಿದೆ. ಹೀಗಾಗಿ, ಇಲ್ಲಿ ಐಪಿಸಿ ಸೆಕ್ಷನ್‌ 109 ಅನ್ವಯಿಸುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪಿ ಪ್ರಸನ್ನ ಕುಮಾರ್‌ ಅವರು “ಸೀತಾರಾಮ್ ಅವರು ಸೊಸೈಟಿಯ ಅಧ್ಯಕ್ಷರಾಗಿ ಚೆಕ್‌ಗೆ ಸಹಿ ಮಾಡಿದ್ದಾರೆ. ಚೆಕ್‌ ನೀಡಿರುವುದಕ್ಕೆ ಅಂತಿಮವಾಗಿ ಸೊಸೈಟಿಯು ಜವಾಬ್ದಾರಿಯಾಗಿದೆ. ಹೀಗಾಗಿ, ತಮ್ಮ ಕಡೆಯಿಂದ ಏನೂ ಲೋಪವಾಗಿಲ್ಲ” ಎಂದು ವಾದಿಸಿದ್ದರು.

“ಎಸಿಬಿಯು ಎರಡನೇ ನೋಟಿಸ್‌ ನೀಡುವ ವೇಳೆಗೆ ಸೊಸೈಟಿಯು ಕಾರ್ಯನಿರ್ವಹಣೆ ನಿಲ್ಲಿಸಿತ್ತು. ಹೀಗಾಗಿ, ದಾಖಲೆ ಇರಲಿಲ್ಲ. ಈ ನೆಲೆಯಲ್ಲಿ ವಿಚಾರಣೆ ರದ್ದುಪಡಿಸಬೇಕು” ಎಂದು ಕೋರಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಬಿ ಪಾಟೀಲ್‌ ಅವರು “ಚಿಕ್ಕರಾಯಪ್ಪ ಪುತ್ರಿಗೆ ಸೊಸೈಟಿಯು ಸಾಲ ನೀಡಿದ್ದರೆ, ಸೊಸೈಟಿಯ ಆದಾಯ ತೆರಿಗೆಯಲ್ಲಿ ಅದು ಉಲ್ಲೇಖವಾಗಬೇಕಿತ್ತು. ಆದರೆ. ಅಲ್ಲಿಯೂ ಇಲ್ಲ. ನೋಟಿಸ್‌ ನೀಡಿರುವುದಕ್ಕೆ ಸೊಸೈಟಿಯು ಯಾವುದೇ ದಾಖಲೆ ಸಲ್ಲಿಸಿಲ್ಲ. ಸೊಸೈಟಿಯ ಪ್ರತಿಕ್ರಿಯೆ ಹಾರಿಕೆಯಿಂದ ಕೂಡಿದ್ದು, ಸೊಸೈಟಿಯು ಕಾರ್ಯಾಚರಣೆ ನಿಲ್ಲಿಸಿರುವುದರಿಂದ ದಾಖಲೆ ಇದೆಯೋ, ಇಲ್ಲವೋ ಎಂಬುದು ವಿಚಾರಣೆಯಿಂದ ನಿರೂಪಿತವಾಗಬೇಕಿದೆ” ಎಂದು ವಾದಿಸಿದ್ದರು.

M R Seetharam Vs State of Karnataka.pdf
Preview