ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಈ ಹಂತದಲ್ಲಿ ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡುವಂಥ ಆದೇಶವನ್ನು ಯಾವುದೇ ನ್ಯಾಯಾಲಯ ಮಾಡಲಾಗದು ಎಂಬುದು ಸ್ಥಾಪಿತ ಕಾನೂನಾಗಿದೆ ಎಂದಿರುವ ಕರ್ನಾಟಕ ಹೈಕೋರ್ಟ್, ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ. 33 ಮೀಸಲಾತಿ ಕಲ್ಪಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ವಜಾ ಮಾಡಿದೆ.
ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಬೆಂಗಳೂರು ವಕೀಲರ ಸಂಘಕ್ಕೆ ನಿರ್ದೇಶಿಸಬೇಕು ಎಂದು ರಾಜ್ಯ ಮಹಿಳಾ ವಕೀಲರ ಒಕ್ಕೂಟ ಮತ್ತು ವಕೀಲೆ ದೀಕ್ಷಾ ಅಮೃತೇಶ್ ಸಲ್ಲಿಸಿದ್ದ ಅರ್ಜಿ ಹಾಗೂ ಮತ್ತೊಬ್ಬ ಮಹಿಳಾ ವಕೀಲರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ವಜಾ ಮಾಡಿತು.
“ಫೌಜಿಯಾ ರೆಹಮಾನ್ ವರ್ಸಸ್ ದೆಹಲಿ ವಕೀಲರ ಸಂಘ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘ ವರ್ಸಸ್ ಬಿ ಡಿ ಕೌಶಿಕ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯಡಿ ನಿರ್ದೇಶನ ನೀಡಿದೆ. ಈ ನ್ಯಾಯಾಲಯಕ್ಕೆ ಆ ಅಧಿಕಾರವಿಲ್ಲ. ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನಗಳನ್ನು ನೀಡುವ ನಿಟ್ಟಿನಲ್ಲಿ ಹೈಕೋರ್ಟ್ ಹಾಗೂ ದೇಶದ ಎಲ್ಲಾ ವಕೀಲರ ಸಂಘಗಳಿಂದ ದತ್ತಾಂಶ ಸಂಗ್ರಹಿಸುವ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಆರಂಭಿಸಿದೆ” ಎಂದು ನ್ಯಾಯಾಲಯ ಹೇಳಿದೆ.
“ಕಳೆದ ಅಕ್ಟೋಬರ್‌ನಲ್ಲಿ ದೆಹಲಿ ವಕೀಲರ ಸಂಘದ ಚುನಾವಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿತ್ತು. ಈ ನ್ಯಾಯಾಲಯವು ಅಂಥದ್ದೇ ಆದೇಶ ಮಾಡಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ಒಪ್ಪಲಾಗದು. ಏಕೆಂದರೆ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅರ್ಜಿಯು ಬಾಕಿ ಇದ್ದು, ಮಧ್ಯಂತರ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ದೆಹಲಿ ವಕೀಲರ ಸಂಘದ ಪ್ರಕರಣದಲ್ಲಿ ಹೈಕೋರ್ಟ್ ಚುನಾವಣೆ ಮುಂದೂಡಿತ್ತು. ಹಾಲಿ ಪ್ರಕರಣದಲ್ಲಿ ಅಂಥ ಸಂದರ್ಭವಿಲ್ಲ. ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಈ ನ್ಯಾಯಾಲಯವು ಕೆಲವು ನಿರ್ದೇಶನಗಳನ್ನು ನೀಡಿದ್ದು, ಇಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜನವರಿ 2ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಇದರಿಂದ ಚುನಾವಣಾ ನೀತಿ ಸಂಹಿತೆ ಚಾಲ್ತಿಗೆ ಬಂದಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
“ಚುನಾವಣೆಯಲ್ಲಿ ಮಧ್ಯಪ್ರವೇಶವಾಗುವಂಥ ಆದೇಶವನ್ನು ಯಾವುದೇ ನ್ಯಾಯಾಲಯ ಮಾಡುವಂತಿಲ್ಲ ಎಂಬುದು ಸ್ಥಾಪಿತ ಕಾನೂನು. ಸುಪ್ರೀಂ ಕೋರ್ಟ್ ರೂಪಿಸಿರುವ ಈ ಕಾನೂನು ಸೊಸೈಟಿಗಳು ಮತ್ತು ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಹೀಗಿರುವಾಗ ಚುನಾವಣಾಧಿಕಾರಿ ಅಥವಾ ಉನ್ನತಾಧಿಕಾರ ಸಮಿತಿಗೆ ಬೈಲಾದಲ್ಲಿ ಅವಕಾಶವಿಲ್ಲದಿದ್ದರು ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವಂತೆ ನಿರ್ದೇಶಿಸುವುದಕ್ಕೆ ಅವಕಾಶವಿಲ್ಲ. ಈ ಸಂಬಂಧ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಅಗತ್ಯ ನಿರ್ದೇಶನ ಪಡೆಯಬಹುದಾಗಿದೆ. ಫೆಬ್ರವರಿ 2ಕ್ಕೆ ಎಎಬಿಗೆ ಚುನಾವಣೆ ನಿಗದಿಯಾಗಿರುವುದರಿಂದ ಅರ್ಜಿದಾರರ ಕೋರಿಕೆಗೆ ಮನ್ನಿಸಲಾಗದು. ಆದ್ದರಿಂದ, ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಎಎಬಿ ಚುನಾವಣೆಗೆ ಅಗತ್ಯವಾದ ವಿದ್ಯುನ್ಮಾನ ಮತ ಯಂತ್ರಗಳು ಮತ್ತು ಅಗತ್ಯ ಪೊಲೀಸರನ್ನು ನಿಯೋಜಿಸುವಂತೆ ಸಂಬಂಧಿತ ಸಂಸ್ಥೆ ಮತ್ತು ಇಲಾಖೆಗೆ ನಿರ್ದೇಶಿಸಿರುವ ನ್ಯಾಯಾಲಯ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಮತ್ತು ವಕೀಲ ಮಂಜುನಾಥ್ ನಾಯ್ಕ್ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಮತ್ತು ಜಯ್ನಾ ಕೊಠಾರಿ ಅವರು “ಆರು ತಿಂಗಳ ಹಿಂದೆಯೇ ಮಹಿಳಾ ವಕೀಲರಿಗೆ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವಂತೆ ಎಎಬಿಗೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಅವರು ಪರಿಗಣಿಸಿಲ್ಲ. ಆದ್ದರಿಂದ, ದೆಹಲಿ ವಕೀಲರ ಸಂಘದ ಚುನಾವಣೆಯನ್ನು ಮುಂದೂಡುವ ಮೂಲಕ ದೆಹಲಿ ಹೈಕೋರ್ಟ್ ದಿಟ್ಟ ಕ್ರಮಕೈಗೊಂಡಿತ್ತು. ಈ ನ್ಯಾಯಾಲಯವು ಅದೇ ನಿಲುವು ಕೈಗೊಳ್ಳಬೇಕು. ಬೈಲಾದಲ್ಲಿ ಅವಕಾಶವಿಲ್ಲದಿದ್ದರೂ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳಾ ಮೀಸಲಾತಿಯು ಸುಧಾರಣಾ ಕ್ರಮವಾಗಿದ್ದು, ಅದನ್ನು ಜಾರಿಗೊಳಿಸುವ ಮೇಲ್ಪಂಕ್ತಿ ಹಾಕಬೇಕು. ಈಗಿನ ಅವಕಾಶ ತಪ್ಪಿದರೆ ಇನ್ನೂ ಮೂರು ವರ್ಷ ಕಾಯಬೇಕಾಗುತ್ತದೆ” ಎಂದು ಕೋರಿದರು.
ಬೆಂಗಳೂರು ವಕೀಲರ ಸಂಘ ಪ್ರತಿನಿಧಿಸಿದ್ದ ನಿಕಟಪೂರ್ವ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು “ಬೈಲಾಗೆ ತಿದ್ದುಪಡಿಯಾಗದೇ ಮಹಿಳಾ ಮೀಸಲಾತಿ ಕಲ್ಪಿಸಲಾಗದು. ಅದಾಗ್ಯೂ, ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ತಾವು ಬದ್ಧವಾಗಿದ್ದೇವೆ. ಆಡಳಿತ ಮಂಡಳಿಯ ಅವಧಿಯು ಕಳೆದ ವರ್ಷದ ಡಿಸೆಂಬರ್ 19ಕ್ಕೆ ಕೊನೆಗೊಡಿರುವುದರಿಂದ ಈ ಹಂತದಲ್ಲಿ ಎಎಬಿ ಪರವಾಗಿ ಯಾವುದೇ ಹೇಳಿಕೆ ನೀಡಲಾಗದು” ಎಂದು ವಾದಿಸಿದ್ದರು.