WhatsApp, Karnataka High Court 
ಸುದ್ದಿಗಳು

ಆರೋಪಿಗೆ ವಾಟ್ಸಾಪ್‌ ಮೂಲಕ ನೋಟಿಸ್‌ ಕಳುಹಿಸುವಂತಿಲ್ಲ: ಪೊಲೀಸರಿಗೆ ತಿಳಿಹೇಳಿದ ಹೈಕೋರ್ಟ್‌

ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ಅಥವಾ ಸಿಆರ್‌ಪಿಸಿ 41(A) ಅಡಿ ವಾಟ್ಸಾಪ್‌ ಮೂಲಕ ನೋಟಿಸ್‌ ಕಳುಹಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಆದೇಶಿಸಿದೆ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ವಿವರಿಸಿದೆ.

Bar & Bench

ಗುರುತು ಕಳವು ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಪೊಲೀಸರು ವಾಟ್ಸಾಪ್‌ ಮೂಲಕ ಜಾರಿ ಮಾಡಿದ್ದ ನೋಟಿಸ್‌ ಅನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ.

ಬೆಂಗಳೂರಿನ ವಿದ್ಯಾರ್ಥಿ ಪವನ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಥವಾ ಸಿಆರ್‌ಪಿಸಿ ಅಡಿ ಉಲ್ಲೇಖಿಸಿರುವುದಕ್ಕೆ ವಿರುದ್ಧವಾಗಿ ವಾಟ್ಸಾಪ್‌ ಮೂಲಕ ತನಿಖೆ ಹಾಜರಾಗಲು ನೋಟಿಸ್‌ ಜಾರಿ ಮಾಡುವುದು ಪರ್ಯಾಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಆದೇಶಿಸಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಹೀಗಾಗಿ, ಪೊಲೀಸರು ವಾಟ್ಸಾಪ್‌ ಮೂಲಕ ಜಾರಿ ಮಾಡಿದ್ದ ನೋಟಿಸ್‌ ಅನ್ನು ಹೈಕೋರ್ಟ್‌ ರದ್ದುಗೊಳಿಸಿದ್ದು, ಕಾನೂನಿನ ಅನ್ವಯ ಹೊಸದಾಗಿ ನೋಟಿಸ್‌ ಜಾರಿ ಮಾಡಲು ಪೊಲೀಸರಿಗೆ ಆದೇಶಿಸಿದೆ.

ಬಿಎನ್‌ಎಸ್‌ಎಸ್‌ ಸೆಕ್ಷನ್‌ 35 ಅಥವಾ ಸಿಆರ್‌ಪಿಸಿ ಸೆಕ್ಷನ್‌ 41A ಅಡಿ ವ್ಯಕ್ತಿಯು ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರ ಬಂಧನ ಅಗತ್ಯವಿಲ್ಲದಿದ್ದರೆ ಅವರನ್ನು ವಿಚಾರಣೆಗೆ ತಮ್ಮ ಮುಂದೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ಜಾರಿ ಮಾಡಬಹುದಾಗಿದೆ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ಅಥವಾ ಸಿಆರ್‌ಪಿಸಿ 41(A) ಅಡಿ ವಾಟ್ಸಾಪ್‌ ಮೂಲಕ ನೋಟಿಸ್‌ ಕಳುಹಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿದೆ.

ಬೆಂಗಳೂರಿನ ಆಡುಗೋಡಿ ಪೊಲೀಸರು ಫೆಬ್ರವರಿ 14ರಂದು ವಾಟ್ಸಾಪ್‌ ಮೂಲಕ ತಮಿಳುನಾಡಿನ 25 ವರ್ಷದ ಅರ್ಜಿದಾರ ವಿದ್ಯಾರ್ಥಿಗೆ ಗುರುತು ಕಳವು ಮತ್ತು ತನ್ನ ಗುರುತು ಮರೆಮಾಚಿ ಬೇರೊಬ್ಬರ ಸೋಗು ಹಾಕಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ವಾಟ್ಸಾಪ್‌ ಮೂಲಕ ನೋಟಿಸ್‌ ಜಾರಿ ಮಾಡಿದ್ದರು. ಇದನ್ನು ವಿದ್ಯಾರ್ಥಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.