BR Shetty, Karnataka HC
BR Shetty, Karnataka HC 
ಸುದ್ದಿಗಳು

ಉದ್ಯಮಿ ಬಿ ಆರ್ ಶೆಟ್ಟಿ ಚರಾಸ್ತಿ ವರ್ಗಾವಣೆಗೂ ನಿರ್ಬಂಧ ವಿಧಿಸಿದ ಕರ್ನಾಟಕ ಹೈಕೋರ್ಟ್

Bar & Bench

ಕರ್ನಾಟಕ ಮೂಲದ ಅನಿವಾಸಿ ಉದ್ಯಮಿ ಡಾ. ಬಿ ಆರ್‌ ಶೆಟ್ಟಿ ಮತ್ತು ಅವರ ಪತ್ನಿ ಅಥವಾ ಅವರ ಪ್ರತಿನಿಧಿಗಳು ತಮ್ಮ ಬ್ಯಾಂಕ್‌ ಖಾತೆಗಳಲ್ಲಿ ಇರಿಸಿರುವ ಠೇವಣಿ, ಷೇರು ಹಾಗೂ ಹಣದಂತಹ ಚರಾಸ್ತಿಗಳನ್ನು ಮಾರುವುದು ಅಥವಾ ವರ್ಗಾವಣೆ ಮಾಡುವುದಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ.

ಶೆಟ್ಟಿ ಮತ್ತವರ ಪತ್ನಿಯ ಸ್ಥಿರಾಸ್ತಿಯನ್ನು ಮಾತ್ರ ಪ್ರತ್ಯೇಕಿಸದಂತೆ 28 ಆಗಸ್ಟ್ 2020 ರಂದು ವಾಣಿಜ್ಯ ನ್ಯಾಯಾಲಯ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಪ್ರಶ್ನಿಸಿ ಬ್ಯಾಂಕ್‌ ಆಫ್‌ ಬರೋಡ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ನೇತೃತ್ವದ ಪೀಠ, ಬ್ಯಾಂಕಿನ ಒಪ್ಪಿಗೆಯಿಲ್ಲದೆ ತಮ್ಮ ಸ್ಥಿರ ಹಾಗೂ ಚರಾಸ್ತಿಗಳನ್ನು ಮಾರಾಟ ಅಥವಾ ವರ್ಗಾವಣೆ ಮಾಡಬಾರದು ಎಂಬ ಹೊಣೆಗಾರಿಕೆ ಶೆಟ್ಟಿ ಅವರ ಮೇಲಿದೆ ಎಂಬುದನ್ನು ಗಮನಿಸಿತು ಹೀಗಾಗಿ ಸ್ಥಿರ ಮತ್ತು ಚರಾಸ್ತಿಗಳನ್ನು ರಕ್ಷಿಸಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಷೇರು, ಮ್ಯೂಚುವಲ್‌ ಫಂಡ್‌, ಬ್ಯಾಂಕ್‌ ಠೇವಣಿ ರೀತಿಯ ಚರಾಸ್ತಿಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ನಿರ್ದಿಷ್ಟ ವಿವರಗಳನ್ನು ನೀಡಿಲ್ಲ ಎಂದ ಮಾತ್ರಕ್ಕೆ ವಾಣಿಜ್ಯ ಬ್ಯಾಂಕ್‌ ತಾತ್ಕಾಲಿಕ ಪ್ರತಿಬಂಧಕಾಜ್ಞೆ ನಿರಾಕರಿಸುವುದು ಸರಿಯಲ್ಲ ಎಂದು ಕೂಡ ಹೈಕೋರ್ಟ್‌ ತಿಳಿಸಿತು. ತಮ್ಮ ಎಲ್ಲಾ ಚರ ಮತ್ತು ಸ್ಥಿರಾಸ್ತಿಗಳನ್ನು ಬಹಿರಂಗಪಡಿಸಿವುದು ಶೆಟ್ಟಿ ಅವರ ಜವಾಬ್ದಾರಿಯಾಗಿದೆ ಎಂದ ನ್ಯಾಯಾಲಯ ಮೇಲ್ಮನವಿಯನ್ನು ಪುರಸ್ಕರಿಸಿತು. ಶೆಟ್ಟಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿದರು. ಮತ್ತೊಬ್ಬ ಹಿರಿಯ ವಕೀಲ ಉದಯ ಹೊಳ್ಳ ಬ್ಯಾಂಕ್‌ ಆಫ್‌ ಬರೋಡಾವನ್ನು ಪ್ರತಿನಿಧಿಸಿದರು.