A Manjunath & Karnataka HC 
ಸುದ್ದಿಗಳು

ಜೆಡಿಎಸ್‌ ಮಾಜಿ ಶಾಸಕ ಮಂಜುನಾಥ್‌ ಖಾಸಗಿ ವಿಡಿಯೊ ಪ್ರಸಾರಕ್ಕೆ ನಿರ್ಬಂಧ ವಿಧಿಸಿದ ಹೈಕೋರ್ಟ್

ವಿಡಿಯೊ ಪ್ರಸಾರದಿಂದ ಖಾಸಗಿತನದ ಹಕ್ಕಿಗೆ ಧಕ್ಕೆಯಾಗುವುದಲ್ಲದೆ, ಸರಿಪಡಿಸಲಾಗದ ಹಾನಿ ಉಂಟಾಗಬಹುದು ಎಂದ ನ್ಯಾಯಮೂರ್ತಿ ಕೆ.ವಿ. ಅರವಿಂದ್; ವಿಚಾರಣಾ ನ್ಯಾಯಾಲಯದ ಮಧ್ಯಂತರ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ.

Bar & Bench

ಜೆಡಿಎಸ್‌ ಪಕ್ಷದ ಮಾಗಡಿ ಮಾಜಿ ಶಾಸಕ ಎ ಮಂಜುನಾಥ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಖಾಸಗಿ ಹಾಗೂ ಆತ್ಮೀಯ ಕ್ಷಣಗಳ ವಿಡಿಯೊಗಳನ್ನು ಪ್ರಸಾರ ಮಾಡದಂತೆ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಪ್ರತಿವಾದಿಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ನಿರ್ಬಂಧ ವಿಧಿಸಿದೆ.

ವಿಡಿಯೊಗಳನ್ನು ಪ್ರಸಾರ ಮಾಡುವುದರಿಂದ ಅರ್ಜಿದಾರರ ಖಾಸಗಿತನದ ಹಕ್ಕಿಗೆ ಧಕ್ಕೆಯಾಗುವುದಲ್ಲದೆ, ಸರಿಪಡಿಸಲಾಗದ ಹಾನಿ ಉಂಟಾಗಬಹುದು ಎಂದು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ವಿಡಿಯೊ ಪ್ರಸಾರಕ್ಕೆ ಶಾಶ್ವತ ತಡೆ ಕೋರಿ ಸಲ್ಲಿಸಿದ್ದ ಸಿವಿಲ್ ದಾವೆಯಲ್ಲಿ ವಿಚಾರಣಾ ನ್ಯಾಯಾಲಯ ಅಕ್ಟೋಬರ್ 23ರಂದು ನೀಡಿದ್ದ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

Justice K V Aravind

2023ನೇ ವರ್ಷಕ್ಕೆ ಸಂಬಂಧಿಸಿದ ಕೆಲವು ಖಾಸಗಿ ವಿಡಿಯೊಗಳು ಬಿಡುಗಡೆಯಾಗಿವೆ ಎಂಬ ವಿಚಾರವನ್ನು ಪವರ್‌ ಟಿವಿ ಮಾಧ್ಯಮ ಸಂಸ್ಥೆಯ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾಗಿತ್ತು. ವಿಡಿಯೊಗಳ ಸತ್ಯಾಸತ್ಯತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದು, ಅವುಗಳನ್ನು ಪ್ರಸಾರ ಮಾಡುವುದರಿಂದ ತಮ್ಮ ಖಾಸಗಿತನದ ಹಕ್ಕು ಉಲ್ಲಂಘನೆಯಾಗಲಿದೆ ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಪ್ರತಿವಾದಿಗಳ ವಿರುದ್ಧ ಶಾಶ್ವತ ತಡೆ ಕೋರಿ ಸಿವಿಲ್ ದಾವೆ ಹೂಡಿದ್ದರು.

ಅರ್ಜಿದಾರರ ಪರ ವಕೀಲ ಅಂಗದ್ ಕಾಮತ್ ಅವರು, ವಿಚಾರಣಾ ನ್ಯಾಯಾಲಯವು ಮೇಲ್ನೋಟಕ್ಕೆ ಪ್ರಕರಣದಲ್ಲಿ ಅರ್ಹತೆ ಇರುವುದನ್ನು, ಅನುಕೂಲತೆಯ ಸಮತೋಲನ ಅರ್ಜಿದಾರರ ಪರವಾಗಿರುವುದನ್ನು ಹಾಗೂ ವಿಡಿಯೊ ಪ್ರಸಾರದಿಂದ ಸರಿಪಡಿಸಲಾಗದ ಹಾನಿಯಾಗುವ ಸಾಧ್ಯತೆಯನ್ನು ಪರಿಗಣಿಸಿದ್ದರೂ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ ಎಂದು ವಾದಿಸಿದ್ದರು.

ವಿಡಿಯೊಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸದಿದ್ದರೆ ದಾವೆ ಹೂಡಿರುವ ಉದ್ದೇಶವೇ ವಿಫಲವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದರು.

ವಾದಗಳನ್ನು ಆಲಿಸಿದ ಹೈಕೋರ್ಟ್, ತಡೆಯಾಜ್ಞೆ ನೀಡಲು ಅಗತ್ಯವಾದ ಅಂಶಗಳ ಕುರಿತು ವಿಚಾರಣಾ ನ್ಯಾಯಾಲಯವು ಅಭಿಪ್ರಾಯ ದಾಖಲಿಸಿದ್ದರೂ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿರುವುದನ್ನು ಗಮನಿಸಿತು.

“ಇಂತಹ ವಿವೇಚನಾಧಿಕಾರದ ಬಳಕೆಗೆ ನಿರಾಕರಿಸುವುದರಿಂದ ಅರ್ಜಿದಾರರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುವುದಲ್ಲದೆ, ಯಾವುದೇ ರೀತಿಯಲ್ಲಿ ಪರಿಹರಿಸಲಾಗದ ಸರಿಪಡಿಸಲಾಗದ ಹಾನಿ ಮತ್ತು ಸಂಕಷ್ಟಕ್ಕೆ ಕಾರಣವಾಗುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರತಿವಾದಿಗಳ ಆಕ್ಷೇಪಣೆಗಳನ್ನು ಪರಿಗಣಿಸುವವರೆಗೆ ಮಧ್ಯಂತರ ನಿರ್ಬಂಧ ವಿಧಿಸುವುದರಿಂದ ಅವರಿಗೆ ಯಾವುದೇ ಪೂರ್ವಾಗ್ರಹ ಉಂಟಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿತು.

ಪ್ರತಿವಾದಿಗಳ ನಿರೂಪಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಏಜೆಂಟರು ಅರ್ಜಿದಾರರಿಗೆ ಸಂಬಂಧಿಸಿದ ವಿವಾದಿತ ವಿಡಿಯೊಗಳನ್ನು ಯಾವುದೇ ಮಾಧ್ಯಮದ ಮೂಲಕ ಪ್ರಸಾರ ಮಾಡುವುದು, ಪ್ರಕಟಿಸುವುದು, ಅಪ್‌ಲೋಡ್ ಮಾಡುವುದು, ಹಂಚಿಕೊಳ್ಳುವುದು ಅಥವಾ ಇತರರಿಗೆ ಲಭ್ಯವಾಗುವಂತೆ ಮಾಡುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ.

ಅರ್ಜಿದಾರರನ್ನು ಖಾಸಗಿ ಅಥವಾ ಆತ್ಮೀಯ ಸನ್ನಿವೇಶಗಳಲ್ಲಿ ತೋರಿಸುವ, ಪೂರ್ಣ ಅಥವಾ ಭಾಗಶಃ ನಗ್ನತೆ ಅಥವಾ ಲೈಂಗಿಕ ಕ್ರಿಯೆಗಳನ್ನು ಒಳಗೊಂಡಿರುವ ಮತ್ತು ಅವರ ಅರಿವು ಅಥವಾ ಒಪ್ಪಿಗೆಯಿಲ್ಲದೆ ಮಾಡಲಾದ ದೃಶ್ಯ-ಶ್ರವ್ಯ ದಾಖಲೆಗಳಿಗೂ ಈ ನಿರ್ಬಂಧ ಅನ್ವಯಿಸುತ್ತದೆ. ಕೃತಕವಾಗಿ ಮಾರ್ಪಡಿಸಿದ ಚಿತ್ರಗಳು ಹಾಗೂ ವ್ಯಕ್ತಿಯ ಸೋಗು ಹಾಕುವ ರೀತಿಯಲ್ಲಿ ಸೃಷ್ಟಿಸಿದ ಚಿತ್ರಗಳನ್ನೂ ಪ್ರಕಟಿಸದಂತೆ ನಿರ್ಬಂಧಿಸಲಾಗಿದೆ.

ವಿಡಿಯೊಗಳ ಆಯ್ದ ಭಾಗಗಳು, ಸ್ಥಿರಚಿತ್ರಗಳು, ಆಡಿಯೊ ತುಣುಕುಗಳು, ಪ್ರತಿಲಿಪಿಗಳು, ಅನುವಾದಗಳು, ಶೀರ್ಷಿಕೆಗಳು, ಎಡಿಟ್ ಮಾಡಿದ ಅಥವಾ ಡಬ್ ಮಾಡಿದ ಆವೃತ್ತಿಗಳು, ಮಾರ್ಫ್ ಮಾಡಿದ ಚಿತ್ರಗಳು ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ರೂಪಗಳ ಪ್ರಸಾರಕ್ಕೂ ತಡೆ ವಿಧಿಸಲಾಗಿದೆ.

ಇದಲ್ಲದೆ, ವಿಡಿಯೊಗಳನ್ನು ನಕಲು ಮಾಡುವುದು, ವರ್ಗಾಯಿಸುವುದು ಅಥವಾ ಇತರರಿಗೆ ಹಸ್ತಾಂತರಿಸುವುದು, ಅವುಗಳನ್ನು ತೋರಿಸುವುದು ಅಥವಾ ವಿವರಿಸುವುದು ಹಾಗೂ ಅವುಗಳ ಅಸ್ತಿತ್ವವನ್ನು ಬಳಸಿಕೊಂಡು ಅರ್ಜಿದಾರರನ್ನು ಬೆದರಿಸುವುದು, ಒತ್ತಡ ಹೇರುವುದು ಅಥವಾ ಕಿರುಕುಳ ನೀಡುವುದನ್ನೂ ನ್ಯಾಯಾಲಯ ನಿಷೇಧಿಸಿದೆ.

ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಮಧ್ಯಂತರ ಅರ್ಜಿಗಳ ವಿಲೇವಾರಿ ಅಥವಾ ಮುಂದಿನ ವಿಚಾರಣೆಯ ದಿನಾಂಕ—ಇವೆರಡರಲ್ಲಿ ಯಾವುದು ಮೊದಲು ಸಂಭವಿಸುತ್ತದೆಯೋ ಅಲ್ಲಿಯವರೆಗೆ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.

ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಪ್ರಕರಣವನ್ನು ನವೆಂಬರ್ 30ಕ್ಕೆ ಮುಂದೂಡಿದೆ.