Karnataka High Court
Karnataka High Court  Bar and Bench
ಸುದ್ದಿಗಳು

ಐಡಿಯಲ್‌ ಜಾವಾದ 'ಯೆಜ್ಡಿ' ಟ್ರೇಡ್‌ಮಾರ್ಕ್‌ ಬಳಸದಂತೆ ಕ್ಲಾಸಿಕ್‌ ಲೆಜೆಂಡ್ಸ್‌ಗೆ ಕರ್ನಾಟಕ ಹೈಕೋರ್ಟ್‌ ನಿರ್ಬಂಧ

Bar & Bench

ಒಂದೊಮ್ಮೆ ತನ್ನ ಬೈಕ್‌ಗಳ ಸದ್ದಿನ ಮೂಲಕವೇ ಸುದ್ದಿಯಲ್ಲಿರುತ್ತಿದ್ದ ಐಡಿಯಲ್ ಜಾವಾ ಇಂಡಿಯಾ ಲಿಮಿಟೆಡ್‌ ಇದೀಗ ಮುಚ್ಚುವಿಕೆಯ ಪ್ರಕ್ರಿಯೆಯಲ್ಲಿದೆ. ಆದರೆ, ಈ ನಡುವೆಯೇ ಅದು ತನ್ನ ಪ್ರಸಿದ್ಧ ಬೈಕ್‌ಗಳಲ್ಲಿ ಒಂದಾದ 'ಯೆಜ್ಡಿ' ಬ್ರ್ಯಾಂಡ್‌ ಟ್ರೇಡ್‌ಮಾರ್ಕ್‌ಅನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

‘ಯೆಜ್ಡಿ’ ಟ್ರೇಡ್‌ಮಾರ್ಕ್ ಅಥವಾ ಹೆಸರು ಒಳಗೊಂಡ ಇತರ ಯಾವುದೇ ಟ್ರೇಡ್‌ಮಾರ್ಕ್ ಬಳಸುವುದಕ್ಕೆ ಕ್ಲಾಸಿಕ್ ಲೆಂಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತದರ ಸಹ ಸಂಸ್ಥಾಪಕ ಬೊಮನ್ ಇರಾನಿ ಅವರಿಗೆ ಹೈಕೋರ್ಟ್ ನಿರ್ಬಂಧ ಹೇರಿದೆ. ಕ್ಲಾಸಿಕ್‌ ಲೆಜೆಂಡ್ಸ್‌ ಸಂಸ್ಥೆಯು ಬೊಮನ್‌ ಇರಾನಿ ಹಾಗೂ ಮಹೀಂದ್ರ ಅಂಡ್‌ ಮಹೀಂದ್ರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೂಡಿದೆ.

ಟ್ರೇಡ್‌ಮಾರ್ಕ್ ನೋಂದಣಿ ಪ್ರಾಧಿಕಾರವು ಬೊಮನ್ ಇರಾನಿ ಅವರಿಗೆ ‘ಯೆಜ್ಡಿ’ ಹೆಸರು ಬಳಕೆಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿ ಐಡಿಯಲ್ ಜಾವಾ ಸಂಸ್ಥೆಯ ಅಧಿಕೃತ ಬರ್ಖಾಸ್ತುದಾರ (ಅಫಿಷಿಯಲ್ ಲಿಕ್ವಿಡೇಟರ್) ಮತ್ತು ಐಡಿಯಲ್ ಜಾವಾ ನೌಕರರ ಸಂಘ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಐಡಿಯಲ್‌ ಜಾವಾ ಮುಚ್ಚುವಿಕೆಯ ಪ್ರಕ್ರಿಯೆಯು ಚಾಲನೆಯಲ್ಲಿರುವಾಗ ಅದಕ್ಕೆ ಸೇರಿದ ಟ್ರೇಡ್‌ಮಾರ್ಕ್‌ಅನ್ನು ನೋಂದಣಿ ಮೂಲಕ ಪಡೆದಿರುವ ಬೊಮನ್‌ ಇರಾನಿ ಅವರ ವರ್ತನೆಯು ದುರುದ್ದೇಶದಿಂದ ಕೂಡಿದ್ದು, ಸಂಸ್ಥೆಯ ಆಸ್ತಿಯ ದುರ್ಬಳಕೆಯಾಗಿದೆ ಎಂದು ನ್ಯಾಯಾಲಯವು ಹೇಳಿದೆ.

'ಯೆಜ್ಡಿ' ಟ್ರೇಡ್‌ಮಾರ್ಕ್‌ ಐಡಿಯಲ್‌ ಜಾವಾ ಸಂಸ್ಥೆಗೆ ಸೇರಿದ್ದಾಗಿದ್ದು ಸಂಸ್ಥೆಯು ನಷ್ಟದತ್ತ ಮುಖ ಮಾಡಿದ್ದರಿಂದ ಅದನ್ನು 1996ರಲ್ಲಿ ಮುಚ್ಚುವಂತೆ ಆದೇಶಿಸಲಾಯಿತು. ಆನಂತರ ಕಂಪೆನಿಗೆ ಸಂಬಂಧಿಸಿದ ಎಲ್ಲ ಆಸ್ತಿಗಳ ಜವಾಬ್ದಾರಿಯು ಮುಚ್ಚುವಿಕೆಯ ಹೊಣೆಹೊತ್ತ ಅದಿಕೃತ ಬರ್ಖಾಸ್ತುದಾರರಿಗೆ (ಅಫಿಷಿಯಲ್‌ ಲಿಕ್ವಿಡೇಟರ್‌) ಸೇರುತ್ತದೆ. ಆದರೆ, ಈ ನಡುವೆ ಇರಾನಿ ಅವರು ತಮ್ಮ ವೈಯಕ್ತಿಕ ಪ್ರಭಾವದ ಮೂಲಕ 'ಯೆಜ್ಡಿ' ಟ್ರೇಡ್‌ಮಾರ್ಕ್‌ ಅನ್ನು ನೋಂದಣಿ ಮಾಡಿಸುವಲ್ಲಿ ಸಫಲರಾಗಿದ್ದರು. ಆನಂತರ ಕ್ಲಾಸಿಕ್‌ ಲೆಜೆಂಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಅಡಿ 'ಯೆಜ್ಡಿ' ಬೈಕ್‌ಗಳನ್ನು ಮತ್ತೆ ರಸ್ತೆಗಿಳಿಸಲಾಗಿತ್ತು. ಇರಾನಿ ಅವರ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಇದೀಗ ನ್ಯಾಯಾಲಯವು ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ಸಂಸ್ಥೆಯು ಯೆಜ್ಡಿ ಬ್ರ್ಯಾಂಡ್ (ಪದ ಹಾಗೂ ಸಾಧನ) ಮತ್ತು ಟ್ರೇಡ್‌ಮಾರ್ಕ್‌ನ ಮಾಲೀಕತ್ವ ಹೊಂದಿದೆ. ಈ ಕಂಪನಿಗೆ ಸೇರಿದ ಯೆಜ್ಡಿ ಹೆಸರಿನ ಟ್ರೇಡ್ ಮಾರ್ಕ್‌ಗಳನ್ನು ಬೊಮನ್ ಇರಾನಿ ಅಥವಾ ಅವರ ಪರವಾಗಿರುವ ಇತರ ಯಾವುದೇ ವ್ಯಕ್ತಿ ಬಳಕೆ ಮಾಡಬಾರದು ಎಂದು ಪ್ರತಿಬಂಧಿಸಿ ಆದೇಶಿಸಿದೆ. ಅಲ್ಲದೆ, ದೆಹಲಿ, ಮುಂಬೈ ಮತ್ತು ಅಹಮದಬಾದ್‌ನಲ್ಲಿ ಬೊಮನ್ ಇರಾನಿ ಅವರ ಹೆಸರಿನಲ್ಲಿ ಯೆಜ್ಡಿ ಟ್ರೇಡ್‌ಮಾರ್ಕ್ ನೋಂದಣಿ ಮಾಡಿ ನೋಂದಣಿ ರಿಜಿಸ್ಟ್ರಾರ್ ವಿತರಿಸಿದ ಪ್ರಮಾಣಪತ್ರ ಕಾನೂನುಬಾಹಿರವೆಂದು ಅಭಿಪ್ರಾಯಪಟ್ಟಿದೆ.

ಬೊಮನ್ ಇರಾನಿ ಹೆಸರಿನಲ್ಲಿ ನೋಂದಣಿಯಾದ ಯೆಜ್ಡಿ ಹೆಸರಿನ ಎಲ್ಲ ನೋಂದಣಿಗಳನ್ನು ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್ ಅವರು ರದ್ದುಪಡಿಸಬೇಕು. ಆ ಎಲ್ಲ ನೋಂದಣಿಗಳನ್ನು ಐಡಿಯಲ್ ಕಂಪನಿಗೆ ಕೂಡಲೇ ವರ್ಗಾಯಿಸಬೇಕು. ಯೆಜ್ಡಿ ಟ್ರೇಡ್‌ಮಾರ್ಕ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಬೊಮನ್ ಇರಾನಿ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ತಲಾ 10 ಲಕ್ಷ ರೂ.ಗಳನ್ನು ಐಡಿಯಲ್ ಜಾವಾ ಕಂಪನಿಯ ಬರ್ಖಾಸ್ತುದಾರರಿಗೆ ದಂಡ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಆದಿತ್ಯ ಸೋಂಧಿ ಹಾಗೂ ನ್ಯಾಯವಾದಿ ಕೆ ಎಸ್‌ ಮಹದೇವನ್‌ ಅವರು ಅಧಿಕೃತ ಬರಖಾಸ್ತುದಾರರನ್ನು ಪ್ರತಿನಿಧಿಸಿದ್ದರು. ಮತ್ತೊಂದೆಡೆ ಕ್ಲಾಸಿಕ್‌ ಲೆಜೆಂಡ್ಸ್‌ ಸಂಸ್ಥೆಯನ್ನು ಹಿರಿಯ ವಕೀಲರಾದ ಎಸ್‌ ಎಸ್ ನಾಗಾನಂದ ಮತ್ತು ಶ್ರೀನಿವಾಸ ರಾಘವನ್‌ ಹಾಗೂ ನ್ಯಾಯವಾದಿ ವಿಕ್ರಮ್ ಉನ್ನಿ ರಾಜಗೋಪಾಲ್‌ ಪ್ರತಿನಿಧಿಸಿದ್ದರು.