ED, K Y Nanjegowda and HC 
ಸುದ್ದಿಗಳು

ಜಾರಿ ನಿರ್ದೇಶನಾಲಯಕ್ಕೆ ‘ಸೂಪರ್ ಕಾಪ್’ ಆಗಿ ವರ್ತಿಸುವ ಅಧಿಕಾರವಿಲ್ಲ: ಹೈಕೋರ್ಟ್

ಕಾಂಗ್ರೆಸ್‌ ಶಾಸಕ ಕೆ ವೈ ನಂಜೇಗೌಡ ಪ್ರಮುಖ ಆರೋಪಿಯಾಗಿದ್ದ ಕೋಲಾರ ಭೂ ಮಂಜೂರಾತಿ, ಕೋಮುಲ್ ನೇಮಕಾತಿ ಹಗರಣದ ಪ್ರಕರಣಗಳಲ್ಲಿ ಪಿಎಂಎಲ್‌ಎ ಪ್ರಕ್ರಿಯೆ ರದ್ದುಪಡಿಸಿದ ನ್ಯಾಯಾಲಯ.

Bar & Bench

“ಜಾರಿ ನಿರ್ದೇಶನಾಲಯವು ತನ್ನ ಗಮನಕ್ಕೆ ಬರುವ ಎಲ್ಲವನ್ನೂ ತನಿಖೆ ನಡೆಸುವ ಸೂಪರ್‌ ಕಾಪ್‌ (ಅತಿಶಕ್ತ ಪೊಲೀಸ್‌ ಅಧಿಕಾರಿ) ಅಲ್ಲ” ಎಂದಿರುವ ಕರ್ನಾಟಕ ಹೈಕೋರ್ಟ್‌, ಕೋಲಾರ ಜಿಲ್ಲೆಯ ಮಾಲೂರು ಭೂ ಮಂಜೂರಾತಿ ಹಗರಣ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಮುಲ್) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ಆರಂಭಿಸಿದ್ದ ಎಲ್ಲಾ ಪ್ರಕ್ರಿಯೆಗಳನ್ನು ಇತ್ತೀಚೆಗೆ ರದ್ದುಪಡಿಸಿದೆ.

ನಿಗದಿತ ಅಪರಾಧ (ಷೆಡ್ಯೂಲ್ಡ್‌ ಅಪರಾಧ) ಅಸ್ತಿತ್ವದಲ್ಲಿರುವುದು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ಕ್ರಮ ಕೈಗೊಳ್ಳಲು ಅತ್ಯಗತ್ಯವಾಗಿದ್ದು, ಇ ಡಿಗೆ ಎಲ್ಲ ಅಪರಾಧಗಳ ತನಿಖೆ ನಡೆಸುವ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿ ಎಂ ಐ ಅರುಣ್ ಅವರು ನವೆಂಬರ್ 6ರಂದು ಐದು ಅರ್ಜಿಗಳನ್ನು ಪುರಸ್ಕರಿಸಿ ಆದೇಶಿಸಿದ್ದಾರೆ.

ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಿ, ಅದರ ಆಧಾರದಲ್ಲಿ ಆರೋಪಿಗಳ ವಿರುದ್ಧ ಪಿಎಂಎಲ್‌ಎ ಅಡಿ ತನಿಖೆ ಆರಂಭಿಸಲು ಕಾಯಿದೆಯು ಇ ಡಿ ಗೆ ಸ್ಪಷ್ಟ ಅಧಿಕಾರ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

Justice M I Arun

ಪ್ರಕರಣದ ಹಿನ್ನೆಲೆ: ಮಾಲೂರು ತಾಲ್ಲೂಕಿನಲ್ಲಿ ನಡೆದಿರುವ ಭೂ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾದ ಹಾಲಿ ಕಾಂಗ್ರೆಸ್‌ ಶಾಸಕ ಕೆ ವೈ ನಂಜೇಗೌಡ ಅವರು ಸುಮಾರು 38 ಮಂದಿಗೆ 80 ಎಕರೆ ಭೂಮಿಯನ್ನು ಶಿಫಾರಸು ಮಾಡುವ ಮೂಲಕ ಅಕ್ರಮವಾಗಿ ಮಂಜೂರಾತಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ದಾಖಲಾದ ದೂರಿನ ಆಧಾರದಲ್ಲಿ 2022ರಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ 468, 464, 465, 471, 420 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಆಧರಿಸಿ ದೂರು ದಾಖಲಿಸಿದ ಇಡಿಯು ಪಿಎಂಎಲ್‌ಎ ಅಡಿ ತನಿಖೆ ಆರಂಭಿಸಿತ್ತು.

ತನಿಖೆಯ ವೇಳೆ ಕೋಮುಲ್ ಉದ್ಯೋಗಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಬಗ್ಗೆ ಕೆಲವು ದಾಖಲೆಗಳು ಮತ್ತು ಮಾಹಿತಿ ದೊರೆತಿವೆ ಎಂದು ಇ ಡಿ ಆರೋಪಿಸಿತ್ತು.

ಈ ಮಾಹಿತಿಯನ್ನು ಪಿಎಂಎಲ್‌ಎ ಸೆಕ್ಷನ್ 66(2) ಅಡಿ ಸಂಬಂಧಿತ ತನಿಖಾ ಸಂಸ್ಥೆಗಳಿಗೆ ಇ ಡಿ ರವಾನಿಸಿತ್ತು. ಆದರೆ, ಸಂಬಂಧಿತ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಆ ಬಳಿಕ ಇ ಡಿ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್‌ಗಳಾದ 7, 11, 12 ಮತ್ತು 13 ಹಾಗೂ ಐಪಿಸಿಯ ಸೆಕ್ಷನ್‌ಗಳಾದ 120ಬಿ, 420, 464, 465, 468 ಮತ್ತು 471 ಅಡಿ ತನಿಖೆ ನಡೆಸಲು ದೂರಿನಲ್ಲಿ ಕೋರಲಾಗಿತ್ತು.

ಇದೇ ವೇಳೆ, ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಗದ ಕಾರಣ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದರು. ಹೀಗಾಗಿ, ಈ ಆದೇಶ ಅಂತಿಮಗೊಂಡಿತ್ತು. ಇದರ ಬೆನ್ನಲ್ಲೇ, ಇ ಡಿ ಮುಂದುವರಿಸಿದ್ದ ಪಿಎಂಎಲ್‌ಎ ಪ್ರಕ್ರಿಯೆಗಳು ಮತ್ತು ಖಾಸಗಿ ದೂರನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, ನಿಗದಿತ ಅಪರಾಧ ಅಸ್ತಿತ್ವದಲ್ಲಿರುವುದು ಪಿಎಂಎಲ್‌ಎ ಅಡಿ ಕ್ರಮ ಕೈಗೊಳ್ಳಲು ಅತ್ಯಗತ್ಯ ಎಂದು ಹೇಳಿದೆ.

ಭೂ ಹಗರಣದ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಕೆಯಾಗಿ, ಅದನ್ನು ಪ್ರಶ್ನಿಸಿದ್ದ ಪ್ರತಿಭಟನಾ ಅರ್ಜಿಯೂ ವಜಾಗೊಂಡಿರುವುದನ್ನು ನ್ಯಾಯಾಲಯ ಗಮನಿಸಿದೆ. ನಿಗದಿತ ಅಪರಾಧದ ಆಧಾರದಲ್ಲಿ ಅಕ್ರಮ ಹಣ ವರ್ಗಾವಣೆಯ ಆರೋಪವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ನಿಗದಿತ ಅಪರಾಧದ ಅಸ್ತಿತ್ವವು ಅಕ್ರಮ ಹಣದ ಮೂಲವನ್ನು ಗುರುತಿಸಲು ಮತ್ತು ಪಿಎಂಎಲ್‌ಎ ಅಡಿ ಕ್ರಮ ಕೈಗೊಳ್ಳಲು ಅತ್ಯಗತ್ಯವಾದ ಪೂರ್ವಾಪೇಕ್ಷಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪಿಎಂಎಲ್‌ಎ ಸೆಕ್ಷನ್ 66(2) ಅಡಿ ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ರವಾನಿಸಿದ ಬಳಿಕ, ಅವು ಕ್ರಮ ಕೈಗೊಳ್ಳದಿದ್ದರೆ ಇ ಡಿ ಸ್ವತಃ ಖಾಸಗಿ ದೂರು ದಾಖಲಿಸಬಹುದೇ ಎಂಬ ಪ್ರಶ್ನೆಯನ್ನು ಹೈಕೋರ್ಟ್ ಪರಿಶೀಲಿಸಿದೆ.

ಸಂಬಂಧಿತ ಕಾನೂನಿನಡಿ ಇ ಡಿಗೆ ನೀಡಿರುವ ಅಧಿಕಾರಗಳು ಸೀಮಿತವಾಗಿದ್ದು, ಇತರ ಕಾಯಿದೆಗಳ ಅಡಿ ಅಪರಾಧಗಳ ತನಿಖೆಯನ್ನು ಸ್ವತಃ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ನಮ್ಮ ಸಂವಿಧಾನವು ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ಪ್ರತ್ಯೇಕಗೊಳಿಸಿದೆ. ಯಾವುದೇ ಒಂದು ಸಂಸ್ಥೆ ಸರ್ವಾಧಿಕಾರಿಯಾಗದಂತೆ ಮತ್ತು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಈ ವ್ಯವಸ್ಥೆ ಅಗತ್ಯವಾಗಿದೆ. ಕಾನೂನು ಅಧಿಕಾರದ ಸಮತೋಲನ ಮತ್ತು ನಿಯಂತ್ರಣವನ್ನು ಗುರುತಿಸುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪಿಎಂಎಲ್‌ಎ ಅಡಿ ಇ ಡಿಗೆ ನೀಡಿರುವ ಅಧಿಕಾರಗಳನ್ನು ಕಾಯಿದೆಯ ಮಿತಿಯೊಳಗೆ ಮಾತ್ರ ಬಳಸಬೇಕು. ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಲು ಕಾಯಿದೆಯು ಇ ಡಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಇ ಡಿ ಅಥವಾ ಪಿಎಂಎಲ್‌ಎ ಅಡಿ ಅಧಿಕಾರಿಗಳಿಗೆ ಖಾಸಗಿ ದೂರು ಸಲ್ಲಿಸಲು ಮತ್ತು ಅದರ ಆಧಾರದಲ್ಲಿ ಆರೋಪಿಗಳ ವಿರುದ್ಧ ಪಿಎಂಎಲ್‌ಎ ಅಡಿ ತನಿಖೆ ಕೈಗೊಳ್ಳಲು ಕಾಯಿದೆಯು ಸ್ಪಷ್ಟ ಅಧಿಕಾರ ನೀಡುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇ ಡಿ ರವಾನಿಸಿದ ಮಾಹಿತಿಯನ್ನು ಸಂಬಂಧಿತ ಸಂಸ್ಥೆಗಳು ಪರಿಶೀಲಿಸಿ, ವಿಚಾರಣೆ ಅಥವಾ ಪ್ರಾಸಿಕ್ಯೂಷನ್ ಆರಂಭಿಸಬೇಕೇ ಎಂಬುದನ್ನು ನಿರ್ಧರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಸಂಬಂಧಿತ ಸಂಸ್ಥೆಗಳು ಕ್ರಮ ಕೈಗೊಳ್ಳದಿದ್ದಾಗ ಇ ಡಿ ಸ್ವತಃ ಖಾಸಗಿ ದೂರು ದಾಖಲಿಸಿ ತನಿಖೆ ಆರಂಭಿಸುವುದು, ಅದಕ್ಕೆ “ಸೂಪರ್ ಕಾಪ್”ನ ಅಧಿಕಾರ ನೀಡಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ಇ ಡಿ ಖಾಸಗಿ ದೂರು ದಾಖಲಿಸುವುದನ್ನು ಪಿಎಂಎಲ್‌ಎ ಕಾಯಿದೆ ಪರಿಗಣಿಸಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Senior Advocate Kiran S Javali

ಇ ಡಿಗೆ ಇಂತಹ ಅಧಿಕಾರ ನೀಡಿದರೆ, ಯಾವುದೇ ವ್ಯಕ್ತಿಯ ವಿರುದ್ಧ ಖಾಸಗಿ ದೂರು ದಾಖಲಿಸಿ, ನಂತರ ಪಿಎಂಎಲ್‌ಎ ಅಡಿ ತನಿಖೆ ಆರಂಭಿಸಲು ಅವಕಾಶವಾಗುತ್ತದೆ. ಆದರೆ, ಕಾಯಿದೆಯು ಅಂತಹ ಕ್ರಮವನ್ನು ಕಲ್ಪಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನಿಗದಿತ ಅಪರಾಧದ ಮಾಹಿತಿ ದೊರೆತಾಗ, ಅದು ಸಂಜ್ಞೇಯ ಅಪರಾಧವಾಗಿದ್ದರೆ ಸಂಬಂಧಿತ ಪೊಲೀಸ್ ಠಾಣೆಯ ಅಧಿಕಾರಿಗಳು ಎಫ್‌ಐಆರ್ ದಾಖಲಿಸಬೇಕಾಗುತ್ತದೆ ಎಂಬ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಪಿಎಂಎಲ್‌ಎ ಅಡಿ ಕ್ರಮ ಕೈಗೊಳ್ಳುವುದು ನಿಗದಿತ ಅಪರಾಧದ ಅಸ್ತಿತ್ವಕ್ಕೆ ಸಂಬಂಧಿಸಿರಬೇಕು. ಇ ಡಿ ಕಾಯಿದೆಯ ನಿಯಮಗಳನ್ನು ಮೀರಿ ಸ್ವತಂತ್ರವಾಗಿ ನಿಗದಿತ ಅಪರಾಧಗಳ ತನಿಖೆ ಆರಂಭಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ಅರ್ಜಿಗಳನ್ನು ಪುರಸ್ಕರಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಕಿರಣ್ ಎಸ್. ಜವಳಿ ವಾದ ಮಂಡಿಸಿದರೆ, ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ವಾದ ಮಂಡಿಸಿದರು.