ಅಪಘಾತ ಪ್ರಕರಣಗಳಲ್ಲಿ ಪೋಷಕರು ಮೃತಪಟ್ಟಾಗ ಅವರ ವಿವಾಹಿತ ಪುತ್ರಿಯರೂ ವಿಮಾ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ.
ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ಮಹಿಳೆಯ ವಿವಾಹಿತ ಪುತ್ರಿಗೆ ಪರಿಹಾರ ಘೋಷಿಸಿದ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿಯ (ಎಂಎಸಿಟಿ) ಆದೇಶ ಪ್ರಶ್ನಿಸಿ ವಿಮಾ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.
“ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ತಂದೆ-ತಾಯಿ ಅಪಘಾತದಲ್ಲಿ ಮೃತಪಟ್ಟಾಗ ಅವರ ವಿವಾಹಿತ ಹೆಣ್ಣು ಮಕ್ಕಳು ಪರಿಹಾರ ಪಡೆಯಬಹುದಾಗಿದೆ” ಎಂದು ಆದೇಶಿಸಿ ಮೇಲ್ಮನವಿ ವಜಾಗೊಳಿಸಿದೆ.
“ನ್ಯಾಷನಲ್ ಇನ್‌ಶ್ಯೂರೆನ್ಸ್ ಲಿಮಿಟೆಡ್ ಮತ್ತು ಬೀರೇಂದರ್ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ಉಲ್ಲೇಖಿಸಿರುವ ಪೀಠವು ಮೃತ ವ್ಯಕ್ತಿಯ ವಾರಸುದಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಯಸ್ಕ, ವಿವಾಹಿತ ಹಾಗೂ ಸಂಪಾದನೆ ಮಾಡುತ್ತಿರುವ ಮಕ್ಕಳು ಸಹ ಮೃತರ ವಾರಸುದಾರರಾಗಿದ್ದಾಗ ಅವರು ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಅದನ್ನು ಪರಿಗಣಿಸುವುದು ನ್ಯಾಯ ಮಂಡಳಿಯ ಕರ್ತವ್ಯವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟಿದೆ.
“ಪರಿಹಾರ ಕೋರಿ ಅರ್ಜಿ ಸಲ್ಲಿಸಿದವರು ಮೃತ ವ್ಯಕ್ತಿಗಳ ಮೇಲೆ ಅವಲಂಬಿತರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳದೆ ವಾರಸುದಾರರ ಕ್ಲೇಮು ಅರ್ಜಿಯನ್ನು ನ್ಯಾಯ ಮಂಡಳಿಯು ಪರಿಗಣಿಸಬೇಕಾಗುತ್ತದೆ. ಅದರಂತೆ ಈ ನ್ಯಾಯಾಲಯ ಸಹ ಪ್ರಕರಣದಲ್ಲಿ ಪರಿಹಾರ ಕೋರಿರುವುದು ವಿವಾಹಿತ ಗಂಡು ಅಥವಾ ಹೆಣ್ಣು ಮಕ್ಕಳೇ ಎಂಬುದನ್ನು ಗಣನೆಗೆ ತೆಗೆದುಕೊಂಡು ತಾರತಮ್ಯ ಮಾಡಲು ಆಗುವುದಿಲ್ಲ. ಹೀಗಾಗಿ, ಮೃತರ ವಿವಾಹಿತ ಹೆಣ್ಣು ಮಕ್ಕಳು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ವಿಮಾ ಸಂಸ್ಥೆಯ ವಾದವನ್ನು ಒಪ್ಪಲು ಆಗುವುದಿಲ್ಲ. ವಿವಾಹಿತ ಮತ್ತು ವಯಸ್ಕ ಗಂಡು ಮಕ್ಕಳು ಪರಿಹಾರ ಕ್ಲೇಮು ಮಾಡಲು ಅರ್ಹರಾಗಿದ್ದರೆ, ವಿವಾಹಿತ ಹೆಣ್ಣು ಮಕ್ಕಳು ಸಹ ಅರ್ಹರಾಗಿರುತ್ತಾರೆ” ಎಂದು ಆದೇಶದಲ್ಲಿ ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ರೇಣುಕಾ ಎಂಬುವರು 2012ರ ಏಪ್ರಿಲ್ 12ರಂದು ಮದುವೆಗೆ ಹಾಜರಾಗಲು ಹುಬ್ಬಳ್ಳಿಯಿಂದ ಟೆಂಪೊದಲ್ಲಿ ಹೊರಟ್ಟಿದ್ದರು. ಟೆಂಪೊ ಯಮನೂರು ಬಳಿಗೆ ಬಂದಾಗ ಲಾರಿ ಡಿಕ್ಕಿ ಹೊಡೆದಿತ್ತು. ಇದರಿಂದ ರೇಣುಕಾ ಮೃತಪಟ್ಟಿದ್ದರು. ಪರಿಹಾರ ಕೋರಿ ಅವರ ಪತಿ ಹಾಗೂ ವಿವಾಹಿತ ಹೆಣ್ಣು ಮಕ್ಕಳು ಎಂಎಸಿಟಿಗೆ ಕ್ಲೇಮು ಅರ್ಜಿ ಸಲ್ಲಿಸಿದ್ದರು. ನ್ಯಾಯ ಮಂಡಳಿಯು ಕ್ಲೇಮುದಾರರಿಗೆ ಶೇ 6ರಷ್ಟು ಬಡ್ಡಿ ದರಲ್ಲಿ 5.91 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಈ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಅಘಪಾತಕ್ಕೆ ಚಾಲಕನ ನಿರ್ಲಕ್ಷ್ಯವೂ ಇದೆ. ಅದನ್ನು ನ್ಯಾಯ ಮಂಡಳಿ ಪರಿಗಣಿಸಿಲ್ಲ. ಮೃತ ಮಹಿಳೆಯ ಪತಿ ನಿವೃತ್ತ ಶಿಕ್ಷಕರಾಗಿದ್ದು, ಪಿಂಚಣಿ ಪಡೆಯುತ್ತಿದ್ದರು. ಮೃತರ ವಿವಾಹಿತ ಹೆಣ್ಣು ಮಕ್ಕಳಿಗೆ ಪರಿಹಾರ ನೀಡಲು ಆದೇಶಿಸಲಾಗಿದ್ದು, ಅವರು ರೇಣುಕಾ ಅವನ್ನು ಅವಲಂಬಿಸಿರಲಿಲ್ಲ. ಹೀಗಾಗಿ, ನ್ಯಾಯ ಮಂಡಳಿಯ ಆದೇಶವು ಕಾನೂನುಬಾಹಿರ ಎಂದು ವಿಮಾ ಕಂಪನಿ ವಾದಿಸಿತ್ತು.
ಟೆಂಪೊ ಚಾಲಕನ ನಿರ್ಲಕ್ಷ್ಯ ಸಹ ಅಪಘಾತಕ್ಕೆ ಕಾರಣವಾಗಿದೆ ಎಂಬ ಅಂಶವನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ವಿಮಾ ಕಂಪೆನಿಯು ಟೆಂಪೊ ಚಾಲಕ ಮತ್ತು ಇತರೆ ತನ್ನ ಅಧಿಕೃತ ಸಾಕ್ಷ್ಯಗಳನ್ನು ವಿಚಾರಣೆ ವೇಳೆ ಪರೀಕ್ಷೆಗೆ ಒಳಪಡಿಸಿಲ್ಲ. ಹೀಗಾಗಿ, ಘಟನೆಯಲ್ಲಿ ಚಾಲಕನ ತಪ್ಪು ಇದೆಯೇ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.