ಸುದ್ದಿಗಳು

ವಿದ್ಯುನ್ಮಾನ ಸಾಕ್ಷ್ಯ ತಜ್ಞರ ನೇಮಕಾತಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

ಭಾರತೀಯ ಸಾಕ್ಷ್ಯ ಅಧಿನಿಮಯದಡಿ ರಾಜ್ಯದಾದ್ಯಂತ ಇರುವ ನ್ಯಾಯಾಲಯಗಳಿಗೆ ಸಲ್ಲಿಕೆ ಮಾಡುವ ಡಿಜಿಟಲ್‌ ಸಾಕ್ಷ್ಯವನ್ನು ಪ್ರಮಾಣೀಕರಿಸಲು ಏಕೈಕ ತಜ್ಞರು ಇದ್ದಾರೆ ಎಂದು ಪಿಐಎಲ್‌ನಲ್ಲಿ ಆಕ್ಷೇಪಿಸಲಾಗಿದೆ.

Bar & Bench

ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 79-ಎ ಅಡಿ ವಿದ್ಯುನ್ಮಾನ ಸಾಕ್ಷ್ಯ ಪ್ರಮಾಣೀಕರಿಸಲು ಮತ್ತು ಅದನ್ನು ಪರಿಶೀಲಿಸಲು ಅಗತ್ಯವಾದಷ್ಟು ತಜ್ಞರನ್ನು ನೇಮಕ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ವಕೀಲ ವಿ ಶ್ರೀನಿವಾಸ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಪಿಐಎಲ್‌ನಲ್ಲಿ ಎತ್ತಿರುವ ವಿಚಾರವು ಮೇಲ್ನೋಟಕ್ಕೆ ಬಹುಮುಖ್ಯವಾಗಿದ್ದು, ಐಟಿ ಕಾಯಿದೆ ಸೆಕ್ಷನ್‌ 79ಎ ಅನ್ನು ತುರ್ತಾಗಿ ಅನುಪಾಲಿಸುವುದು ಅಗತ್ಯವಾಗಿದೆ ಎಂದಿರುವ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿತು.

ಅರ್ಜಿದಾರರ ಪರ ವಕೀಲರು “ಐಟಿ ಕಾಯಿದೆ ಸೆಕ್ಷನ್‌ 79ಎ ಅಡಿ ಪ್ರತಿ ರಾಜ್ಯದಲ್ಲಿನ ಯಾವುದೇ ನ್ಯಾಯಾಲಯದ ಮುಂದೆ ಇರುವ ವಿದ್ಯುನ್ಮಾನ ಸಾಕ್ಷ್ಯಗಳನ್ನು ಪ್ರಮಾಣೀಕರಿಸಲು ಕೇಂದ್ರ ಸರ್ಕಾರವು ತಜ್ಞರನ್ನು ನೇಮಕ ಮಾಡಬೇಕು. ಕರ್ನಾಟಕಕ್ಕೆ ಏಕೈಕ ತಜ್ಞರನ್ನು ನೇಮಕ ಮಾಡಲಾಗಿದ್ದು, ಅವರ ಕಚೇರಿಯು ಬೆಂಗಳೂರಿನಲ್ಲಿದೆ. ಹೀಗಾಗಿ, ಪ್ರತಿಯೊಬ್ಬ ದಾವೆದಾರ ಅಥವಾ ವಿದ್ಯುನ್ಮಾನ ಸಾಕ್ಷ್ಯಗಳನ್ನು ಹಾಜರುಪಡಿಸುವ ವಕೀಲರು ಮೊದಲಿಗೆ ಬೆಂಗಳೂರಿಗೆ ಬಂದು ಇಲ್ಲಿನ ಏಕೈಕ ತಜ್ಞರ ಬಳಿ ಸಾಕ್ಷ್ಯ ಪ್ರಮಾಣೀಕರಿಸಬೇಕಿದೆ. ಇಡೀ ಭಾರತದಲ್ಲಿ ಕೇವಲ 16 ತಜ್ಞರನ್ನು ಮಾತ್ರ ಕೇಂದ್ರ ಸರ್ಕಾರ ನೇಮಕ ಮಾಡಿದೆ” ಎಂದರು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಮತ್ತು ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು ಸೂಚನೆ ಪಡೆಯಲು ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ಪೀಠವು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿತು.

ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್‌ 63ರ ಅನ್ವಯ ಪಕ್ಷಕಾರರು ಸಲ್ಲಿಕೆ ಮಾಡುವ ಎಲ್ಲಾ ವಿದ್ಯುನ್ಮಾನ ಸಾಕ್ಷ್ಯಗಳನ್ನು ತಜ್ಞರು ಪ್ರಮಾಣೀಕರಿಸಿ ಖಾತರಿಪಡಿಸಬೇಕು.