High Court of Karnataka  
ಸುದ್ದಿಗಳು

ಅಂತಿಮ ಸೆಮಿಸ್ಟರ್‌ ಪರೀಕ್ಷೆ ಆಫ್‌ಲೈನ್‌ನಲ್ಲಿ ನಡೆಸುವ ವಿಟಿಯು ತೀರ್ಮಾನ: ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

ಸದ್ಯ ಹೈಕೋರ್ಟ್‌ ಸಹ ಸಿವಿಲ್‌ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸುತ್ತಿದೆ ಎಂದು ನ್ಯಾಯಮೂರ್ತಿ ದೇವದಾಸ್‌ ಅವರು ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.

Bar & Bench

ಪ್ರಸಕ್ತ ವರ್ಷದ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

“ಇಂತಹ ನಿರ್ಧಾರವನ್ನು ಈ ನ್ಯಾಯಾಲಯ ತೆಗೆದುಕೊಳ್ಳಲಾಗದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗದರ್ಶಿ ನಿಯಮಗಳ ಪ್ರಕಾರ ವಿಶ್ವವಿದ್ಯಾಲಯದ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ,” ಎಂದು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರು ಮೌಖಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಹೈಕೋರ್ಟ್‌ ಸಹ ಸಿವಿಲ್‌ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸುತ್ತಿದೆ ಎಂದು ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ. ಮುಂದಿನ ವಾರ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಎಲ್ಲಾ ಪರೀಕ್ಷೆಗಳನ್ನು ರದ್ದುಪಡಿಸುವಂತೆ ನಾವು ಕೋರುತ್ತಿಲ್ಲ. ಬದಲಿಗೆ ಆಫ್‌ಲೈನ್‌ ಪರೀಕ್ಷೆಗಳನ್ನಷ್ಟೇ ರದ್ದು ಮಾಡುವಂತೆ ಕೋರುತ್ತಿದ್ದೇವೆ ಎಂದು ಅರ್ಜಿದಾರರ ಪರ ವಕೀಲೆ ತಾನ್ವಿ ದುಬೆ ವಾದಿಸಿದರು. ಹಾಸ್ಟೆಲ್‌ ಮತ್ತು ಮೆಸ್‌ಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರವಿಲ್ಲ ಎಂದೂ ಅವರು ಹೇಳಿದ್ದಾರೆ.

“ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸುವ ನಿರ್ಧಾರವು ಆನಂತರ ಮೂಡಿರುವಂತಹದ್ದಾಗಿದ್ದು, ಸ್ವೇಚ್ಛಾನುಸಾರ ಕೈಗೊಂಡಿರುವ ನಿರ್ಧಾರವಾಗಿದೆ. ಇದು ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಂದೊಡ್ಡಬಹುದಾದ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆ. ಹಲವು ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಸದ್ಯ ವಿದೇಶಗಳಲ್ಲಿದ್ದಾರೆ. ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸಿದರೆ ಅವರೆಲ್ಲರೂ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಇದು ಸಾವಿರಾರು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಅಪಾರ ಸಮಸ್ಯೆ ಉಂಟು ಮಾಡಲಿದೆ," ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅಕ್ಟೋಬರ್‌ 19ರಂದು ಅಧಿಸೂಚನೆ ಹೊರಡಿಸಿದ್ದ ವಿಟಿಯು ಪೂರಕ ಪರೀಕ್ಷೆಗಳು ಮತ್ತು ಮೊದಲ ವರ್ಷದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದಾಗಿ ಪ್ರಸ್ತಾಪಿಸಿತ್ತು. ಡಿಸೆಂಬರ್‌ 9ರಂದು ಮತ್ತೊಂದು ಅಧಿಸೂಚನೆ ಹೊರಡಿಸಿರುವ ವಿಟಿಯು ರಾಜ್ಯದಾದ್ಯಂತ ಇರುವ ಎಲ್ಲಾ ಕಾಲೇಜುಗಳಲ್ಲಿ ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದಾಗಿ ಹೇಳಿತ್ತು. ಇದನ್ನು ಆಧರಿಸಿ, ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದರಿಂದ ಎದುರಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ 1,373 ವಿದ್ಯಾರ್ಥಿಗಳು ವಿಟಿಯು ಉಪಕುಲಪತಿಗೆ ಪತ್ರ ಬರೆದಿದ್ದರು. ಕೋವಿಡ್‌ನ ಹೊಸ ಮಾದರಿಯ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಇದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.