Karnataka High Court and Lawyers' black gowns 
ಸುದ್ದಿಗಳು

ಮದ್ಯದ ಅಮಲಿನಲ್ಲಿ ಕಲಾಪಕ್ಕೆ ಅಡ್ಡಿ: ವಕೀಲರೊಬ್ಬರಿಗೆ ಒಂದು ದಿನದ ಜೈಲು; ₹2 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

ವಕೀಲರ ವರ್ತನೆ ಉದ್ದೇಶಪೂರ್ವಕ ಮತ್ತು ಹಠಮಾರಿತನದಿಂದ ಕೂಡಿದೆ. ಸಾಮಾಜಿಕ, ನೈತಿಕ, ನ್ಯಾಯಾಂಗ ನಡವಳಿಕೆ ಮತ್ತು ನಿಯಮಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಹೊಂದಿರುವುದನ್ನು ಇದು ತೋರಿಸುತ್ತದೆ ಎಂದಿರುವ ಪೀಠ.

Bar & Bench

ಮದ್ಯದ ಅಮಲಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸಿ, ನ್ಯಾಯಾಧೀಶರ ವಿರುದ್ಧ ಕೂಗಾಡಿದ ಆರೋಪದಡಿ ವಕೀಲರೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಒಂದು ದಿನದ ಸರಳ ಜೈಲು ಶಿಕ್ಷೆ ಹಾಗೂ ₹2 ಸಾವಿರ ದಂಡ ವಿಧಿಸಿ ಈಚೆಗೆ ಆದೇಶಿಸಿದೆ.

ಕಾರವಾರದ ಪಂಕಜ್‌ ಕೌಶಿಕ್‌ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್‌ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ಈ ಕುರಿತು ಆದೇಶಿಸಿದೆ.

ವಕೀಲರ ವರ್ತನೆ ಉದ್ದೇಶಪೂರ್ವಕ ಮತ್ತು ಹಠಮಾರಿತನದಿಂದ ಕೂಡಿದೆ. ಸಾಮಾಜಿಕ, ನೈತಿಕ, ನ್ಯಾಯಾಂಗ ನಡವಳಿಕೆ ಮತ್ತು ನಿಯಮಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಹೊಂದಿರುವುದನ್ನು ಇದು ತೋರಿಸುತ್ತದೆ. ಶಿಕ್ಷೆ ವಿಧಿಸದಿದ್ದರೆ, ಇದು ಪುನರಾವರ್ತನೆಯಾಗುವ ಸಾಧ್ಯತೆಯಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಪಂಕಜ್‌ ಕೌಶಿಕ್‌ ತಮ್ಮ ಪತ್ನಿ ದಾಖಲಿಸಿದ್ದ ಕೌಟುಂಬಿಕ ಹಿಂಸಾಚಾರ ಆರೋಪದ ಪ್ರಕರಣದಲ್ಲಿ ಸ್ವತಃ ವಾದ ಮಂಡಿಸಿದ್ದರು. 2022ರ ಏಪ್ರಿಲ್‌ನ ಎರಡು ಸಂದರ್ಭಗಳಲ್ಲಿ ವಿಚಾರಣಾ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿ ಅನುಚಿತವಾಗಿ ವರ್ತಿಸಿದ್ದರು ಎಂದು ಜಿಲ್ಲಾ ನ್ಯಾಯಾಲಯ ವರದಿ ಸಲ್ಲಿಸಿತ್ತು.

ಸಿವಿಲ್‌ ನ್ಯಾಯಾಧೀಶರು ನನ್ನ ಪತ್ನಿಯಿಂದ ಹಣ ಪಡೆದು ಆಕೆಯ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಕೌಶಿಕ್‌ ಮೌಖಿಕವಾಗಿ ಆರೋಪಿಸಿದ್ದಾರೆ. ಎಚ್ಚರಿಕೆ ನೀಡಿದರೂ ಹೈಕೋರ್ಟ್‌ ನ್ಯಾಯಾಧೀಶರ ವಿರುದ್ಧವೂ ಮಾನಹಾನಿಕರ ಹೇಳಿಕೆ ನೀಡಿದ್ದರು. ಮತ್ತೊಂದು ಬಾರಿ ಬೇರೊಂದು ಪ್ರಕರಣದ ವಿಚಾರಣೆ ವೇಳೆ ಕೌಶಿಕ್ ಪುನಃ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿತ್ತು.

ಕೌಶಿಕ್‌ ಅಸ್ಥಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶರು ಅವರನ್ನು ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಕೌಶಿಕ್‌ ಮದ್ಯ ಸೇವಿಸಿದ್ದು ಕಂಡು ಬಂದಿದೆ ಎಂದು ಆಸ್ಪತ್ರೆ ತನ್ನ ಪರೀಕ್ಷಾ ವರದಿಯಲ್ಲಿ ದಾಖಲಿಸಿದೆ ಎಂದು ಜಿಲ್ಲಾ ನ್ಯಾಯಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಆಧರಿಸಿ ಹೈಕೋರ್ಟ್‌ 2022ರಲ್ಲಿ ಸ್ವಯಂ ಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿತ್ತು.

ಆರೋಪಗಳನ್ನು ನಿರಾಕರಿಸಿದ್ದ ಕೌಶಿಕ್‌ ಪತ್ರದ ಮೂಲಕ ನ್ಯಾಯಾಲಯದ ಕ್ಷಮೆ ಯಾಚಿಸಿದ್ದರು. ನನ್ನ ವರ್ತನೆ ಉದ್ದೇಶ ಪೂರ್ವಕವಾಗಿರಲಿಲ್ಲ. ನಾನು 18 ವರ್ಷಗಳಿಂದ ಯಾವುದೇ ಕಳಂಕವಿಲ್ಲದೆ ವಕೀಲಿ ವೃತ್ತಿ ನಡೆಸಿಕೊಂಡು ಬರುತ್ತಿದ್ದೇನೆ. 35 ವರ್ಷಗಳಿಂದ ಅಪಸ್ಮಾರದಿಂದ (ಮೂರ್ಛೆ ರೋಗ) ಬಳಲುತ್ತಿದ್ದೇನೆ ಹಾಗೂ ಹಾಸಿಗೆ ಹಿಡಿದಿರುವ 75 ವರ್ಷದ ತಾಯಿಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಅವರು ವಿವರಿಸಿದ್ದರು.