ಕರ್ನಾಟಕ ಲೋಕಸೇವಾ ಆಯೋಗವು ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಹುದ್ದೆಗಳಿಗೆ ನಡೆಸಿದ ನೇಮಕಾತಿಗಳಲ್ಲಿನ ಸಂಪೂರ್ಣ ಪಿತೂರಿಯನ್ನು ಬಯಲಿಗೆಳೆದು ಅಪರಾಧಿಗಳನ್ನು ಪತ್ತೆ ಹಚ್ಚಲು ಕರ್ನಾಟಕ ಹೈಕೋರ್ಟ್ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಸಕ್ಷಮ ಪೊಲೀಸ್ ಠಾಣೆ ರೂಪಿಸುವಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರು “ಎಸ್ಐಟಿ ನೇತೃತ್ವ ವಹಿಸುವಂತೆ ಅಲೋಕ್ ಕುಮಾರ್ ಅವರನ್ನು ಹೆಸರಿಸಿರುವ ಬಗ್ಗೆ ಬದಲಾವಣೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಶೀಘ್ರವೇ ಎಸ್ಐಟಿ ರಚನೆ ಮಾಡಲಾಗುವುದು” ಎಂದು ಹೊಸ ಹೆಸರುಗಳನ್ನು ಒಳಗೊಂಡ ಮುಚ್ಚಿದ ಲಕೋಟೆಯನ್ನು ಪೀಠಕ್ಕೆ ನೀಡಿದರು.
ಇದಕ್ಕೆ ಪೀಠವು “ಹಗರಣಕ್ಕೆ ಸಂಬಂಧಿಸಿದಂತೆ ಇದೇ ಪೀಠ (ನ್ಯಾ.ಎಂ.ನಾಗಪ್ರಸನ್ನ) ನೀಡಿರುವ ‘ಡಿ ನೋವಾ’ (ಯಾವುದೇ ಒಂದು ಪ್ರಕರಣ ಅಥವಾ ತನಿಖೆಯನ್ನು ಮೊದಲಿನಿಂದ ಹೊಸದಾಗಿ ಆರಂಭಿಸುವಂತೆ ನೀಡುವ ಆದೇಶ) ಆದೇಶವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿಹಿಡಿದಿದೆ. ಆದರೆ, ನೀವಿನ್ನೂ ಎಸ್ಐಟಿ ರಚನೆ ಮಾಡಿಲ್ಲ. ಸಕ್ಷಮ ಪೊಲೀಸ್ ಠಾಣೆ ಆರಂಭಿಸಿ ಸಿಐಡಿಯಿಂದ ದಾಖಲೆಗಳನ್ನು ಪಡೆದಿಲ್ಲ” ಎಂದು ಕಿಡಿಕಾರಿತು.
“ಸುಪ್ರೀಂ ಕೋರ್ಟ್ ಆದೇಶ ಮಾಡಿ ಹತ್ತು ದಿನಗಳೇ ಕಳೆದಿದ್ದರೂ ಅಲೋಕ್ ಕುಮಾರ್ ಸೇರಿದಂತೆ ಹೈಕೋರ್ಟ್ ರಚನೆ ಮಾಡಿದ್ದ ಎಸ್ಐಟಿಯಲ್ಲಿನ ಇಬ್ಬರು ಅಧಿಕಾರಿಗಳ ಬದಲಿಗೆ ಹೆಸರನ್ನು ಇನ್ನೂ ಯಾಕೆ ನೀಡಿಲ್ಲ” ಎಂದು ಸರ್ಕಾರದ ನಡೆಗೆ ಹರಿಹಾಯಿತು.
“ಸರ್ಕಾರ ಹೆಸರಿಸುವ ಬದಲಾಯಿಸಿದ ಹೆಸರುಗಳ ಬಗ್ಗೆ ಏನಾದರೂ ತಕರಾರು ಇದ್ದಲ್ಲಿ ನಿಮ್ಮ ಆಕ್ಷೇಪಣೆ ಸಲ್ಲಿಸಿ” ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು.
“ಎಸ್ಐಟಿ 100 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಅಂತಿಮ ವರದಿಯನ್ನು ಕೋರ್ಟ್ಗೆ ಸಲ್ಲಿಸಬೇಕು” ಎಂದು ನ್ಯಾಯಪೀಠ ಗಡುವು ವಿಧಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ವಿಶೇಶ ಮೇಲ್ಮನವಿ ಸಲ್ಲಿಸಿತ್ತು.