ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ವಿಚಾರಣೆ ಆರಂಭವಾದಾಗಿನಿಂದ 2020ರ ಮಾರ್ಚ್ 24ರಿಂದ 2021ರ ಆಗಸ್ಟ್ 21ರವರೆಗೆ ದೇಶದ 28 ಹೈಕೋರ್ಟ್‌ಗಳ ಪೈಕಿ 4,62,509 ಪ್ರಕರಣಗಳನ್ನು ವಿಲೇವಾರಿ ಮಾಡಿರುವ ಕರ್ನಾಟಕ ಹೈಕೋರ್ಟ್ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ ದೇಶದ ಹೈಕೋರ್ಟ್‌ಗಳಲ್ಲಿ ಎರಡನೆಯ ಸ್ಥಾನದಲ್ಲಿದೆ.
ಇದೇ ಅವಧಿಯಲ್ಲಿ 5,61,691 ಪ್ರಕರಣಗಳನ್ನು ವಿಲೇವಾರಿ ಮಾಡಿರುವ ಮದ್ರಾಸ್ ಹೈಕೋರ್ಟ್ ಮೊದಲ ಸ್ಥಾನದಲ್ಲಿದ್ದರೆ, 4,32,356 ಪ್ರಕರಣ ವಿಲೇವಾರಿ ಮಾಡಿರುವ ಮಧ್ಯ ಪ್ರದೇಶ ಹೈಕೋರ್ಟ್ ಮೂರನೆಯ ಸ್ಥಾನದಲ್ಲಿದೆ. ಉಳಿದಂತೆ ಯಾವುದೇ ಹೈಕೋರ್ಟ್ 4 ಲಕ್ಷ ಪ್ರಕರಣಗಳ ಗಡಿ ದಾಟಿಲ್ಲ ಎಂಬುದು ಸುಪ್ರೀಂ ಕೋರ್ಟ್‌ನ ಇ-ಸಮಿತಿಯ ನ್ಯೂಸ್ ಲೆಟರ್‌ನಿಂದ ತಿಳಿದು ಬಂದಿದೆ.
2020ರ ಮಾರ್ಚ್ 24ರಿಂದ 2021ರ ಆಗಸ್ಟ್ 21ರವರೆಗೆ 99,182 ಪ್ರಕರಣಗಳನ್ನು ಕರ್ನಾಟಕದ ಜಿಲ್ಲಾ ನ್ಯಾಯಾಲಯಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ವಿಲೇವಾರಿ ಮಾಡಿವೆ. ಜಿಲ್ಲಾ ನ್ಯಾಯಾಲಯಗಳ ಪಟ್ಟಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕರ್ನಾಟಕ 15ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ದೆಹಲಿ (21,83,168) ಮೊದಲ ಸ್ಥಾನದಲ್ಲಿದೆ, ಉತ್ತರಪ್ರದೇಶ (17,25,727) ಮತ್ತು ಬಿಹಾರ (12,37,929) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಉಳಿದಂತೆ ಯಾವುದೇ ರಾಜ್ಯದ ಜಿಲ್ಲಾ ನ್ಯಾಯಾಲಯಗಳು 10 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಿಲ್ಲ ಎಂದು ತಿಳಿದುಬಂದಿದೆ.
ದೇಶದ ಎಲ್ಲಾ ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳ ಪೈಕಿ ಒಟ್ಟಾರೆ 5,61,691 ಪ್ರಕರಣಗಳನ್ನು ವಿಲೇವಾರಿ ಮಾಡಿರುವ ಕರ್ನಾಟಕ ರಾಜ್ಯವು 8ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಅಲಹಾಬಾದ್ (19,14,754) ಮೊದಲ ಸ್ಥಾನದಲ್ಲಿದ್ದರೆ, ಪಟ್ನಾ (13,63,508) ಮತ್ತು ಮದ್ರಾಸ್ (11,89,583) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ಅಖಿಲ ಭಾರತ ಮಟ್ಟದಲ್ಲಿ ರಾಜ್ಯವು ದ್ವಿತೀಯ ಸ್ಥಾನ ಪಡೆಯುವಲ್ಲಿ ಕರ್ನಾಟಕ ಹೈಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿ ಹಾಗೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಅಭಯ್ ಶ್ರೀನಿವಾಸ್ ಓಕ್ ಅವರ ಪಾತ್ರ ಹಿರಿದಾಗಿದೆ. ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾಯಾಲಯದ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಅಳವಡಿಕೆಯ ಕುರಿತು ಮಾತನಾಡಿದ್ದ ನ್ಯಾ. ಓಕ್ ಅವರು “ಒಂದೊಮ್ಮೆ ಕೋವಿಡ್ ಮೂರನೇ ಅಲೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಮುನ್ನೋಟ ಕೈಪಿಡಿ (ವಿಷನ್ ಸ್ಟೇಟ್‌ಮೆಂಟ್) ಸಿದ್ಧಪಡಿಸಬೇಕು. ಕರ್ನಾಟಕ ಹೈಕೋರ್ಟ್‌ನಲ್ಲಿ ಅಳವಡಿಸಿಕೊಂಡಿರುವ ಹೈಬ್ರಿಡ್ ಮಾದರಿಯನ್ನು ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ವಿಸ್ತರಿಸಬೇಕು. ಇದನ್ನು ಸಾಧ್ಯವಾಗಿಸಿದರೆ ಇಡೀ ದೇಶದಲ್ಲಿ ಕರ್ನಾಟಕದ ನ್ಯಾಯಾಂಗವು ಅತ್ಯುತ್ತಮ ಸೇವೆಗಳನ್ನು ಹೊಂದಿದ ವ್ಯವಸ್ಥೆ ಎನಿಸಿಕೊಳ್ಳಲಿದೆ” ಎಂದಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
“ಹೈಕೋರ್ಟ್‌ನಲ್ಲಿ ಆರಂಭಿಸಲಾಗಿರುವ ಇ-ಕೇಂದ್ರಗಳನ್ನು ಸಣ್ಣಪುಟ್ಟ ಕೆಲಸಗಳಿಗೆ ಸೀಮಿತಗೊಳಿಸದೇ ಅತ್ಯುತ್ತಮ ಸೌಲಭ್ಯ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಿ ವಕೀಲರು ಅಲ್ಲಿಂದಲೇ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಇದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಿಗೂ ವಿಸ್ತರಣೆಯಾಗಬೇಕು. ವಿಡಿಯೊ ಕಾನ್ಫರೆನ್ಸ್ ಮೂಲಕ ಸಾಕ್ಷ್ಯ ನುಡಿಯುವ ವ್ಯವಸ್ಥೆ ಬಲಪಡಿಸಬೇಕು” ಎಂದಿದ್ದರು.
“ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೂರು ದಿನಗಳಷ್ಟೇ ಕೆಲಸ ಮಾಡಿದ್ದೇನೆ. ಆದರೆ, ಇಲ್ಲಿನ ವಿಡಿಯೊ ಕಾನ್ಫರೆನ್ಸ್‌ಗೂ ಅಲ್ಲಿನ ವಿಡಿಯೊ ಕಾನ್ಫರೆನ್ಸ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಇದೇ ಉತ್ತಮ ಎಂದು ನನಗನ್ನಿಸಿದೆ” ಎಂದೂ ನ್ಯಾ. ಓಕ್ ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ನೆನೆಯಬಹುದು.