Karnataka High Court 
ಸುದ್ದಿಗಳು

ವಿಶೇಷ ಚೇತನರಿಗೆ ಆದ್ಯತೆಯ ಮೇಲೆ ಕೋವಿಡ್ ಲಸಿಕೆ: ಯೋಜನೆ ರೂಪಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಅಂಗವೈಕಲ್ಯದಿಂದ ಸಂಚರಿಸಲು ಅಥವಾ ಸ್ಥಳಾಂತರವಾಗಲು ಸಾಧ್ಯವಾಗದ ವ್ಯಕ್ತಿಗಳಿಗೆ ಮನೆ- ಮನೆಗೆ ಲಸಿಕೆ ನೀಡುವ ಕುರಿತು ಪರಿಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

Bar & Bench

ರಾಜ್ಯ ಸರ್ಕಾರಕ್ಕೆ ಮಂಗಳವಾರ ಮಧ್ಯಂತರ ನಿರ್ದೇಶನ ನೀಡಿದ ಕರ್ನಾಟಕ ಹೈಕೋರ್ಟ್‌ ಗುರುತರ ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿಗಳಿಗೆ ಆದ್ಯತೆಯ ಮೇಲೆ ಕೋವಿಡ್‌ ಲಸಿಕೆ ನೀಡಲು ಯೋಜನೆ ರೂಪಿಸುವಂತೆ ಸೂಚಿಸಿದೆ. ಅಲ್ಲದೆ ಕೆಳ ಕಂಡ ನಿರ್ದೇಶನಗಳನ್ನು ಕೂಡ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠನೀಡಿದೆ:

  • ವಿಕಲಚೇತನರು ಅಥವಾ ಅವರ ಆರೈಕೆ ಮಾಡುವವರು ಎಸ್‌ಎಂಎಸ್, ಇಮೇಲ್ ಅಥವಾ ವಾಟ್ಸಾಪ್ ಮೂಲಕ ಲಸಿಕೆಗಾಗಿ ವಿನಂತಿ ಮಾಡಿದರೆ ಅದನ್ನು ಸ್ವೀಕರಿಸುವಂತೆ ʼಜಿಲ್ಲಾ ಅಂಗವಿಕಲರ ಅಧಿಕಾರಿʼಗೆ ಸರ್ಕಾರ ನಿರ್ದೇಶಿಸಬಹುದು.

  • ಗುರುತರ ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿಗಳಿಗೆ ಮಾತ್ರವಲ್ಲದೆ ಅವರನ್ನು ಆರೈಕೆ ಮಾಡುವವರಿಗೂ ಆದ್ಯತೆಯ ಮೇರೆಗೆ ಲಸಿಕೆ ಒದಗಿಸಲು ಕ್ರಮ ಕೈಗೊಳ್ಳಬೇಕು.

  • ಲಸಿಕಾ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ಕಾಯಲು ಅವಕಾಶವಿಲ್ಲದಂತೆ ವಿಶೇಷ ಚೇತನರಿಗೆ ಪರಿಣಾಮಕಾರಿ ವ್ಯವಸ್ಥೆ ಕೈಗೊಳ್ಳಬೇಕು.

  • ಅಂಗವೈಕಲ್ಯದಿಂದ ಸಂಚರಿಸಲು ಅಥವಾ ಸ್ಥಳಾಂತರವಾಗಲು ಸಾಧ್ಯವಾಗದ ವ್ಯಕ್ತಿಗಳಿಗೆ ಮನೆ ಮನೆಗೆ ಲಸಿಕೆ ನೀಡಲು ಸಾಧ್ಯವೇ ಎಂಬುದನ್ನು ಪರಿಗಣಿಸಬೇಕು.

  • ಮೇಲಿನ ನಿರ್ದೇಶನಗಳನ್ನು ಆಧರಿಸಿ ಯೋಜನೆಯೊಂದನ್ನು ರಾಜ್ಯ ಸರ್ಕಾರ ರೂಪಿಸಬೇಕು.

ವಿಕಲಾಂಗ ವ್ಯಕ್ತಿಗಳಿಗೆ ಆದ್ಯತೆಯ ಮೇರೆಗೆ ಕೋವಿಡ್‌ ಲಸಿಕೆ ಒದಗಿಸಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣದ ಮುಂದಿನ ವಿಚಾರಣೆ ಮೇ 12ಕ್ಕೆ ನಿಗದಿಯಾಗಿದ್ದು ಅಂದು ಈ ನಿಟ್ಟಿನಲ್ಲಿ ತಾನು ಕೈಗೊಂಡಿರುವ ಕ್ರಮಗಳ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.