ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಹಾಡುಹಗಲೇ ಕೊಲೆಗೀಡಾದ ಯುವತಿ ಲಾವಣ್ಯ ಘಟನೆಯ ಕುರಿತು ಟ್ವೀಟ್ ಮಾಡಿದ್ದ ಆರನೇ ಸೆಮಿಸ್ಟರ್ ಕಾನೂನು ವಿದ್ಯಾರ್ಥಿ ವಿರುದ್ಧ ದಾಖಲಿಸಿದ್ದ ಎರಡು ಎಫ್‌ಐಆರ್‌ಗಳಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಬಂಟ್ವಾಳ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಮತ್ತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಬೆಂಗಳೂರಿನ ಕಿರಣ್ ಆರಾಧ್ಯ ಅಲಿಯಾಸ್ ಕಿರಣ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಯುವತಿಯ ಕೊಲೆ ಕೃತ್ಯವು ಖಂಡನೆಗೆ ಅರ್ಹ. ಆದರೆ, ಅರ್ಜಿದಾರರು ತಮ್ಮ ಎಕ್ಸ್‌ನಲ್ಲಿ ಬಳಸಿರುವ ಭಾಷೆಯಿಂದ, ನಿರ್ದಿಷ್ಟ ಸಮುದಾಯವನ್ನು ಸ್ಪಷ್ಟವಾಗಿ ಗುರಿಯಾಗಿಸುವ ಯಾವುದೇ ನೇರ ಅಥವಾ ಪರೋಕ್ಷ ಉಲ್ಲೇಖ ಕಾಣಬರುತ್ತಿಲ್ಲ” ಎಂದ ಪೀಠ ಹೇಳಿತು.
ಅರ್ಜಿದಾರರ ಪರ ವಕೀಲ ಹಾಗೂ ಬಿಜೆಪಿ ಸಂಸದ ಎಲ್ ಎಸ್ ತೇಜಸ್ವಿ ಸೂರ್ಯ ಅವರು “ಅರ್ಜಿದಾರರು ಮಾಡಿರುವ ಟ್ವೀಟ್‌ನಲ್ಲಿ ಯಾವುದೇ ಧರ್ಮ, ಸಮುದಾಯ, ಜಾತಿ ಅಥವಾ ಗುರುತಿಸಬಹುದಾದ ಗುಂಪಿನ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ವ್ಯಾಖ್ಯಾನ ಮತ್ತು ಊಹೆಯ ಆಧಾರದಲ್ಲಿ ಇದಕ್ಕೆ ಕೋಮು ಬಣ್ಣ ನೀಡುವ ಪ್ರಯತ್ನ ನಡೆದಿದ್ದು ಅರ್ಜಿದಾರರ ವಿರುದ್ಧ ವಿನಾಕಾರಣ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದನ್ನು ರದ್ದುಗೊಳಿಸಬೇಕು” ಎಂದು ಕೋರಿದರು.
ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪ್ರಕರಣಗಳು ಕೇವಲ ಎರಡು ದಿನಗಳ ಹಿಂದಷ್ಟೇ ದಾಖಲಾಗಿವೆ. ಪೊಲೀಸರು ಇನ್ನೂ ನೋಟಿಸ್ ಅನ್ನೇ ಕಳುಹಿಸಿಲ್ಲ. ಆಗಲೇ ಅರ್ಜಿದಾರರು ಹೈಕೋರ್ಟ್ ಕದ ತಟ್ಟಿದ್ದಾರೆ. ಅರ್ಜಿದಾರರನ್ನು ರಕ್ಷಿಸುವಂತಹ ಯಾವುದೇ ಆದೇಶ ನೀಡಬಾರದು” ಎಂದು ಮನವಿ ಮಾಡಿದರು.
ಈ ಆಕ್ಷೇಪಣೆಯನ್ನು ತಳ್ಳಿಹಾಕಿದ ಪೀಠವು “ಈ ವಿಷಯದ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಯುವವರೆಗೆ, ಅರ್ಜಿದಾರರ ವಿರುದ್ಧದ ಮುಂದಿನ ತನಿಖೆಗೆ ತಡೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ” ಆದೇಶಿಸಿತು.
ಪ್ರತಿವಾದಿ ರಾಜ್ಯ ಪ್ರಾಸಿಕ್ಯೂಷನ್‌ಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದ ಪೀಠವು ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಕಿರಣ್ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೂ ಪೀಠ ಮಧ್ಯಂತರ ತಡೆ ನೀಡಿ ಆದೇಶಿಸಿತು. ಬಂಟ್ವಾಳ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅರ್ಜಿದಾರರ ಪರ ವಕೀಲ ಗಿರೀಶ್ ಭಾರದ್ವಾಜ್ ಹಾಜರಿದ್ದರು.
ಆರೋಪಿಗೆ ರಕ್ಷಣೆ: ಆರೋಪಿ ಕಿರಣ್ ಆರಾಧ್ಯ ತಮ್ಮ ಎಕ್ಸ್ (ಟ್ವೀಟ್) ಪೋಸ್ಟ್‌ನಲ್ಲಿ; ಎಡಗೈಯಲ್ಲಿ ಕೈಗಡಿಯಾರ ಮತ್ತು ಪಾದದ ಗಂಟಿಗಿಂತ ಮೇಲ್ಭಾಗಕ್ಕೆ ಇರುವ ಪ್ಯಾಂಟ್ ಧರಿಸಿದ್ದ, ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳನ್ನು ಕೊಂದ ರಾಕ್ಷಸ ಎಂದು ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ ಯಾವುದೇ ಅಧಿಕೃತ ತನಿಖೆಯ ಅಂತಿಮ ವರದಿ, ನ್ಯಾಯಾಲಯದ ತೀರ್ಪು ಅಥವಾ ಅಧಿಕೃತ ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸದೆ ಕಾಂಗ್ರೆಸ್ ಸರ್ಕಾರವು ಆರೋಪಿಯನ್ನು ಉದ್ದೇಶಪೂರ್ವಕವಾಗಿ ರಕ್ಷಿಸುತ್ತಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಹೇಳಿಕೆ ನೀಡಲಾಗಿದೆ. ಇಂತಹ ಹೇಳಿಕೆಗಳು ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವುದರ ಜೊತೆಗೆ ಸಮಾಜದಲ್ಲಿ ತಪ್ಪು ಮಾಹಿತಿ ಹರಡುವುದಕ್ಕೂ ಸಾರ್ವಜನಿಕ ಶಾಂತಿ ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇದೆ’ ಎಂದು ಆರೋಪಿಸಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಕುಶಾಲ್ ಹರುವೆಗೌಡ ದೂರು ನೀಡಿದ್ದರು.
ಇದರ ಅನುಸಾರ ಪೊಲೀಸರು ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್192 (ಗಲಭೆ) ಮತ್ತು 353 (2) (ಸಾರ್ವಜನಿಕರಲ್ಲಿ ಗೊಂದಲ, ಭಯ ಅಥವಾ ಸುಳ್ಳು ವದಂತಿಗಳನ್ನು ಹರಡುವ ಅಪರಾಧ) ಅಡಿಯಲ್ಲಿ ಹೈಗ್ರೌಂಡ್ಸ್ ಮತ್ತು ಬಂಟ್ವಾಳ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಎಫ್‌ಐಆರ್ ದಾಖಲಿಸಿದ್ದಾರೆ.