ಸರ್ಕಾರಿ ಸ್ವಾಮ್ಯದ ಕಾವೇರಿ ನೀರಾವರಿ ನಿಗಮ ನಿಯಮಿತದ (ಸಿಎನ್‌ಎನ್‌ಎಲ್) ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಯು (ಎನ್‌ಸಿಎಲ್‌ಟಿ) ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ (ಸಿಐಆರ್‌ಪಿ) ಆರಂಭಿಸಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಎಸ್‌ಪಿಎಂಎಲ್ ಇನ್ಫ್ರಾ ಲಿಮಿಟೆಡ್ ಐಬಿಸಿ ಸೆಕ್ಷನ್ 9ರ ಅಡಿ ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಡಿಸೆಂಬರ್ 10ರಂದು ಎನ್‌ಸಿಎಲ್‌ಟಿ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಕಾವೇರಿ ನೀರಾವರಿ ನಿಗಮ ನಿಯಮಿತದ ಅಮಾನತುಗೊಂಡಿರುವ ನಿರ್ದೇಶಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
“ಕಾವೇರಿ ನೀರಾವರಿ ನಿಗಮ ನಿಯಮಿತವನ್ನು ಎನ್‌ಸಿಎಲ್‌ಟಿಯು ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಗೆ ಒಳಪಡಿಸಬಾರದಿತ್ತು ಎಂಬುದು ತನ್ನ ಅಭಿಪ್ರಾಯವಾಗಿದೆ. ಹೀಗಾಗಿ, ಡಿಸೆಂಬರ್ 10ರ ಆದೇಶ ಮತ್ತು ಡಿಸೆಂಬರ್ 13ರ ಅನ್ವಯ ಸಾರ್ವಜನಿಕ ಪ್ರಕಟಣೆಯ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ” ಎಂದು ಆದೇಶಿಸಿತು.
ಕಾವೇರಿ ನಿಗಮ ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಕಾವೇರಿ ನಿಗಮವು ರಾಜ್ಯದಾದ್ಯಂತ 100ಕ್ಕೂ ಹೆಚ್ಚು ನೀರಾವರಿ ಯೋಜನೆಗಳನ್ನು ಕೈಗೊಂಡಿದೆ. ಸಾರ್ವಭೌಮ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಮಾಲೀಕತ್ವಕ್ಕೆ ಒಳಪಟ್ಟಿರುವ ನಿಗಮದ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸಲಾಗದು. ಈ ಹಿಂದೆಯೇ ಇಂಥ ಅರ್ಜಿಗಳು ಊರ್ಜಿತವಾಗುವುದಿಲ್ಲ ಎಂಬ ತೀರ್ಪುಗಳು ಬಂದಿವೆ” ಎಂದರು.
ನಂಜಾಪುರ ಏತ ನೀರಾವರಿ ಯೋಜನೆಯ ಗುತ್ತಿಗೆಯನ್ನು 1999ರಲ್ಲಿ ಎಸ್‌ಪಿಎಂಎಲ್ ಇನ್ಫ್ರಾಗೆ ನೀಡಲಾಗಿತ್ತು. ಕಂಪನಿಯು ಹೆಚ್ಚುವರಿಯಾಗಿ 2009ರಲ್ಲಿ ಕೆಲಸ ನಡೆಸಿದ್ದು, ಅದರ ಬಾಕಿ ಹಣ ಪಾವತಿಸಲು 2013ರಲ್ಲಿ ಬಿಲ್ ಸಲ್ಲಿಸಿತ್ತು. ಇದಾದ ನಂತರ ಕಾವೇರಿ ನಿಗಮ ಬಾಕಿ ಮೊತ್ತ ಪಾವತಿಸುವ ಸಂಬಂಧ ಖಾತರಿ ನೀಡಿದ್ದರೂ ಆಂತರಿಕ ಒಪ್ಪಿಗೆ ನೆಪವೊಡ್ಡಿತ್ತು. ಸುದೀರ್ಘ ಕಾಲ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಿವಾಳಿ ಪ್ರಕ್ರಿಯೆ ಆರಂಭಿಸಲು ಎಸ್‌ಪಿಎಂಎಲ್ ಇನ್ಫ್ರಾ ಅರ್ಜಿ ಸಲ್ಲಿಸಿತ್ತು. ಕಾವೇರಿ ನಿಗಮವು ಬಡ್ಡಿ ಸೇರಿ ₹9.36 ಕೋಟಿ ಪಾವತಿಸಬೇಕು ಎಂದು ಎಸ್‌ಪಿಎಂಎಲ್ ಇನ್ಫ್ರಾ ಹೇಳಿತ್ತು.
ಸಾಲವು ವಿವಾದಾಸ್ಪದವಾಗಿದೆ ಮತ್ತು ಸಂಬಂಧಿತ ಸಮಸ್ಯೆಗಳು 2004ರಲ್ಲಿ ನೇಮಕಗೊಂಡ ನ್ಯಾಯ ನಿರ್ಣಯ ಮಧ್ಯಸ್ಥಿಕೆದಾರರ ಮುಂದೆ ಬಾಕಿ ಇವೆ ಎಂದು ಸಿಎನ್‌ಎನ್ಎಲ್ ವಾದಿಸಿತ್ತು. ಆದರೆ, ಎನ್‌ಸಿಎಲ್‌ಟಿ ನ್ಯಾಯಾಂಗ ಸದಸ್ಯ ಸುನೀಲ್ ಕುಮಾರ್ ಅಗರ್ವಾಲ್ ಮತ್ತು ತಾಂತ್ರಿಕ ಸದಸ್ಯ ಶ್ರೀಪಾದ ಅವರು ಸಿಎನ್‌ಎನ್‌ಎಲ್ ಆಂತರಿಕ ದಾಖಲೆಯಲ್ಲಿ ಹೊಣೆಗಾರಿಕೆ ಒಪ್ಪಿರುವುದನ್ನು ಉಲ್ಲೇಖಿಸಿ, ಸಿಐಆರ್‌ಪಿ ಆರಂಭಿಸಿತ್ತು.