ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅಡಿಗಲ್ಲು ನೆರವೇರಿಸುವ ಸಂದರ್ಭದಲ್ಲಿ ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವುದಕ್ಕೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿಯವರನ್ನು ಆರೋಪಿಯನ್ನಾಗಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ದೂರುದಾರ ಸಾಕ್ಷಿಯ ಮುಖ್ಯ ವಿಚಾರಣೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಆರೋಪಿಯನ್ನಾಗಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಥಣಿ ಶಾಸಕರೂ ಆದ ಲಕ್ಷ್ಮಣ ಸವದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಅರ್ಜಿಯ ಮೆರಿಟ್ ಬಗ್ಗೆ ಹೇಳುತ್ತಿಲ್ಲ. ಪ್ರಕ್ರಿಯೆ ಬಗ್ಗೆ ಮಾತನಾಡುತ್ತಿದ್ದೇನೆ. ಇಲ್ಲಿ ಪ್ರಕ್ರಿಯೆ ಸಂಪೂರ್ಣವಾಗಿ ತಪ್ಪಾಗಿದೆ ಎನಿಸುತ್ತದೆ. ಸಾಕ್ಷಿಯು ಪ್ರತಿಕೂಲವಾದ ಮೇಲೆ ಪಾಟೀ ಸವಾಲಿಗೆ ಅವಕಾಶವಿದೆ. ಆದರೆ, ಪ್ರಧಾನ ಸಾಕ್ಷಿ ವಿಚಾರಣೆಗೆ ಹೇಗೆ ಸಾಧ್ಯ? ಆನಂತರ ಪ್ರಧಾನ ಸಾಕ್ಷಿ ವಿಚಾರಣೆ ಇರುವುದಿಲ್ಲ” ಎಂದು ಹೇಳಿ, ಸವದಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿತು.
2018ರಲ್ಲಿ ಅಥಣಿಯಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ದೂರುದಾರನು ಭವನದ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನ ಮತ್ತಿತರ ವಿಚಾರಗಳನ್ನು ಕುರಿತು ಪ್ರಶ್ನಿಸಿದ್ದಕ್ಕೆ ಸವದಿ ಅವರ ಬೆಂಬಲಿಗರು ದೂರುದಾರನ ಮೇಲೆ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇಲ್ಲಿ, ಸವದಿಯನ್ನು ಆರೋಪಿಯನ್ನಾಗಿಸಿರಲಿಲ್ಲ. ಆರೋಪ ಪಟ್ಟಿಯಲ್ಲೂ ಸವದಿ ಹೆಸರು ಇರಲಿಲ್ಲ.
ಆನಂತರ ಪ್ರಕರಣದ ವಿಚಾರಣೆಯ ವೇಳೆ ದೂರುದಾರ ಸಾಕ್ಷಿಯೂ ಪ್ರತೀಕೂಲ ಸಾಕ್ಷಿ ನುಡಿದಿದ್ದರು. ಆದರೆ, ಮತ್ತೆ ಪ್ರಧಾನ ಸಾಕ್ಷಿ ವಿಚಾರಣೆಯ ವೇಳೆ ದೂರುದಾರನು ಲಕ್ಷ್ಮಣ ಸವದಿ ಚಿತಾವಣೆಯಿಂದ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು. ದೂರಿನಲ್ಲಿ ಸವದಿ ಹೆಸರನ್ನು ಠಾಣೆಯ ಅಧಿಕಾರಿ ಅಳಿಸಿ ಹಾಕಿ ಅವರ ಹೆಸರು ಎಫ್‌ಐಆರ್‌ಗೆ ಸೇರದಂತೆ ಮಾಡಿದ್ದರು ಎಂದು ಹೇಳಿದ್ದರು. ಇದನ್ನು ಆಧರಿಸಿ ಸಿಆರ್‌ಪಿಸಿ ಸೆಕ್ಷನ್ 319ರ ಅಡಿ ಪ್ರಾಸಿಕ್ಯೂಷನ್, ಸವದಿ ಅವರನ್ನು ಆರೋಪಿಯನ್ನಾಗಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಕೋರಿತ್ತು.
ಇದನ್ನು ಸೆಪ್ಟೆಂಬರ್ ೨೬ರಂದು ಪುರಸ್ಕರಿಸಿದ್ದ ವಿಚಾರಣಾಧೀನ ನ್ಯಾಯಾಲಯವು “ಪ್ರಕರಣದಲ್ಲಿ ಸವದಿ ಹೆಸರು ಬರದಂತೆ ತಡೆಯಲು ಅಥಣಿ ಪೊಲೀಸರು ಎಲ್ಲಾ ಪ್ರಯತ್ನ ನಡೆಸಿದ್ದಾರೆ. ರಾಜ್ಯ ಕಾರ್ಯಾಂಗದ ಭಾಗವಾಗಿರುವ ಪೊಲೀಸ್ ಇಲಾಖೆಯು ರಾಜಕೀಯ ಅಧಿಕಾರ ಹೊಂದಿರುವ ನಾಯಕರನ್ನು ರಕ್ಷಿಸುವುದು ಮತ್ತು ಅವರ ಮಾತನ್ನು ಪಾಲಿಸುವುದು ಅಪರೂಪದ ಸಂಗತಿಯೇನಲ್ಲ” ಎಂದು ಕಟುವಾಗಿ ನುಡಿದಿತ್ತು.
ಇದನ್ನು ಪ್ರಶ್ನಿಸಿ ಸವದಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ ಪ್ರತಿವಾದ ಆಲಿಸಿದ ಪೀಠವು ಸವದಿ ವಿರುದ್ಧದ ವಿಚಾರಣೆಗೆ ತಡೆ ನೀಡಿದ್ದು, ಉಳಿದ 17 ಆರೋಪಿಗಳ ವಿರುದ್ಧದ ವಿಚಾರಣೆ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.
ಸವದಿಯವರ ಪರವಾಗಿ ಹಿರಿಯ ವಕೀಲ ರಾಜೇಶ್ ಮಹಾಲಯ, ಸರ್ಕಾರದ ಪರವಾಗಿ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾದ ಅನೂಪ್ ಕುಮಾರ್ ವಾದಿಸಿದರು.