Karnataka High Court 
ಸುದ್ದಿಗಳು

ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಆಯೋಜಿಸಿದ್ದ ನಾಲ್ವರು ವಕೀಲೆಯರ ಅಮಾನತು ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌

ಮುಂದಿನ ಮಹಿಳಾ ದಿನಾಚರಣೆಯ ಕಾರ್ಯಕ್ರಮಕ್ಕೆ ಸಂಘದ ಕಾರ್ಯದರ್ಶಿಯಿಂದ ಹಣ ಖರ್ಚು ಮಾಡಿಸಬೇಕಾಗುತ್ತದೆ ಎಂದು ನ್ಯಾಯಾಲಯವು ಕಿಡಿಕಾರಿತು.

Bar & Bench

ಪೂರ್ವಾನುಮತಿ ಪಡೆಯದೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ನಾಲ್ವರು ಮಹಿಳಾ ವಕೀಲರನ್ನು ಅಮಾನತುಗೊಳಿಸಿದ್ದ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ವಕೀಲರ ಸಂಘದ‌ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಅಮಾನತು ಪ್ರಶ್ನಿಸಿ ವಕೀಲೆಯರಾದ ಎಸ್ ಡಿ ಸರೋಜಮ್ಮ, ಎಂ ಎನ್ ವಾಣಿ, ಕೆ ಮಂಜುಳಾ ಹಾಗೂ ಎಚ್ಆರ್ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Sachin Shankar Magadum

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಾರೆ ಎಂಬ ಕಾರಣಕ್ಕಾಗಿ ಅರ್ಜಿದಾರರ ಸದಸ್ಯತ್ವವನ್ನು ಅಮಾನತುಗೊಳಿಸುವ ಮೂಲಕ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ. ಮೇಲ್ನೋಟಕ್ಕೆ ದಾಖಲೆಗಳನ್ನು ಗಮನಿಸದಿದ್ದರೂ, ಲಭ್ಯವಿರುವ ಛಾಯಾಚಿತ್ರ ಸಾಕ್ಷ್ಯಗಳು ಕೆ ಆರ್ ಪೇಟೆ ವಕೀಲರ ಸಂಘದ ಪದಾಧಿಕಾರಿಗಳು ದ್ವೇಷದ ಕ್ರಮ ಕೈಗೊಂಡಿರುವುದನ್ನು ಸಾಬೀತುಪಡಿಸುತ್ತವೆ. ಅಮಾನತುಗೊಂಡ ನಂತರ ಮಹಿಳಾ ವಕೀಲರಿಗೆ ಸಂಘದ ಸೌಲಭ್ಯ ಬಳಸಲು ಅವಕಾಶ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಈ ವಿಷಯವು ಪರಿಗಣನೆಗೆ ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟು, ನಾಲ್ವರು ಮಹಿಳಾ ವಕೀಲರ ಅಮಾನತಿಗೆ ಮುಂದಿನ ವಿಚಾರಣೆಯವರೆಗೆ ತಡೆ ನೀಡಿತಲ್ಲದೆ, ಸಂಘದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮುಂದಿನ ವಿಚಾರಣೆಯವರೆಗೆ ಈ ಅರ್ಜಿದಾರರಿಗೆ ನಿರಾಕರಿಸದಂತೆ ಪದಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿತು.

ಅರ್ಜಿ ಸಂಬಂಧ ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಕೆ ಆರ್ ಪೇಟೆ ವಕೀಲರ ಸಂಘಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ವಿಚಾರಣೆಯ ಸಂದರ್ಭದಲ್ಲಿ ಪೀಠವು ವಕೀಲರ ಸಂಘದ ಕಾರ್ಯದರ್ಶಿ ಯಾರು? ಅವರಿಗೆ ಏನಾಗಿದೆ? ಈ ಅರ್ಜಿಯನ್ನು ಪುರಸ್ಕರಿಸಿ, ಆ ಸಂಘದ ಕಾರ್ಯದರ್ಶಿಯೇ ಪ್ರತಿ ವರ್ಷ ತನ್ನ ಸ್ವಂತ ಖರ್ಚಿನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುವಂತೆ ಆದೇಶಿಸಲಾಗುವುದು ಎಂದು ಹೇಳಿತು.

ಅರ್ಜಿದಾರರ ಪರ ವಕೀಲರಾದ ಎಂ ಎಸ್ ನಾಗರಾಜ ಅವರು, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಂಗ ಅಧಿಕಾರಿಗಳು ಸಹ ಭಾಗವಹಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮತ್ತೊಂದೆಡೆ, ಹೆಚ್ಚುವರಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, ಚುನಾಯಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅರ್ಜಿದಾರರು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ತಿಳಿಸಿದರು.

ಒಂದು ಹಂತದಲ್ಲಿ ಪೀಠವು ಮಹಿಳಾ ವಕೀಲರು ಮಹಿಳಾ ದಿನಾಚರಣೆ ಏಕೆ ಆಚರಿಸಬಾರದು? ನೀವು (ಸಂಘ ಮತ್ತು ಪದಾಧಿಕಾರಿಗಳು) ಇಂತಹ ಚಟುವಟಿಕೆಯಿಂದ ದೂರವಿರಬೇಕು. ಸದಸ್ಯತ್ವದಿಂದ ಅಮಾನತುಗೊಳಿಸುವುದು ಅವರಿಗೆ ಅಪಮಾನ ಮಾಡುವಂಹದ್ದು ಎಂದು ಮೌಖಿಕವಾಗಿ ಹೇಳಿತು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸದೆ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದಕ್ಕಾಗಿ ವಕೀಲರನ್ನು ದಂಡಿಸಲಾಗಿದೆ. ಸಂಘವು ಅರ್ಜಿದಾರರನ್ನು ನ್ಯಾಯಾಲಯಕ್ಕೆ ಹಾಜರಾಗದಂತೆ ತಡೆಯುತ್ತಿದೆ ಮತ್ತು ಶೌಚಗೃಹದಂತಹ ಮೂಲ ಸೌಲಭ್ಯ ಬಳಸುವುದಕ್ಕೂ ನಿರಾಕರಿಸುತ್ತಿದೆ. ಅರ್ಜಿದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಯಾವುದೇ ನಿರ್ದಿಷ್ಟ ಕಾರ್ಯಸೂಚಿ ಅಥವಾ ನಿರ್ಧಾರ ಇರಲಿಲ್ಲ. ಸಾಮಾನ್ಯ ಸಭೆಯ ಬಹುಮತದ ನಿರ್ಧಾರವಿಲ್ಲದೆ ಸದಸ್ಯರನ್ನು ಅಮಾನತುಗೊಳಿಸಲು ಉಪನಿಯಮಗಳ ನಿಯಮ 34 ಸಂಘಕ್ಕೆ ಅಧಿಕಾರ ನೀಡುವುದಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರ ವಕೀಲೆಯರು ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ 2026ರ ಮಾರ್ಚ್ 9ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಿದ್ದರು‌. ಕಾರ್ಯಕ್ರಮದಲ್ಲಿ ಮಹಿಳಾ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳು ಭಾಗವಹಿಸಿದ್ದರು. ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರನ್ನು 6 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ವಕೀಲೆಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.