“ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ” ಎಂದು ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಸಂಬಂಧ ಅವರಿಗೆ ರಾಜ್ಯ ಮಹಿಳಾ ಆಯೋಗವು ಏಳು ದಿನಗಳ ಒಳಗಾಗಿ ಆಯೋಗದ ಮುಂದೆ ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಜಾರಿ ಮಾಡಿದ್ದ ನೋಟಿಸ್‌ಗೆ ಅರ್ಜಿ ಇತ್ಯರ್ಥವಾಗುವವರೆಗೂ ತಡೆಯಾಜ್ಞೆ ನೀಡಿ ಶುಕ್ರವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪೀಠವು ಸ್ಪಷ್ಟೀಕರಣ ಕೋರಿರುವ ರಾಜ್ಯ ಮಹಿಳಾ ಆಯೋಗದ ನಡೆಯು ವ್ಯಾಪ್ತಿ ಮೀರಿದೆ ಎಂದಿದೆ.
ಪೀಠವು ತನ್ನ ಆದೇಶದಲ್ಲಿ, “ಅರ್ಜಿದಾರರು ಮಾಜಿ ಮುಖ್ಯಮಂತ್ರಿಯಾಗಿದ್ದು, ಅವರು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವಾಗ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ಇದರ ಆಧಾರದಲ್ಲಿ ಆಯೋಗವು ಕುಮಾರಸ್ವಾಮಿಗೆ ನೋಟಿಸ್ ನೀಡಿದ್ದು, ಸ್ಪಷ್ಟನೆ ಕೇಳಿದೆ. ಏಳು ದಿನಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅವರಿಗೆ ಸೂಚಿಸಿದೆ. ಇಲ್ಲವಾದಲ್ಲಿ ಆಯೋಗದ ಮುಂದೆ ಹಾಜರಾಗುವಂತೆ ಕುಮಾರಸ್ವಾಮಿ ಅವರಿಗೆ ಸೂಚಿಸಿದೆ” ಎಂದು ದಾಖಲಿಸಿದೆ.
ಮುಂದುವರಿದು, “ಯಾವುದೇ ಕಾರಣಕ್ಕಾಗಿಯಾದರೂ ಯಾವುದೇ ವ್ಯಕ್ತಿಯ ವಿರುದ್ಧ ರಾಜ್ಯ ಮಹಿಳಾ ಆಯೋಗದ ಕಾಯಿದೆ ಅಡಿ ಪ್ರಕರಣ ದಾಖಲಿಸಿದ ನಂತರ ಮಾತ್ರ ತನಿಖೆ ನಡೆಸಬಹುದಾಗಿದ್ದು, ಆನಂತರ ಅವರನ್ನು ಖುದ್ದು ಹಾಜರಾತಿಗೆ ಆದೇಶಿಸಬಹುದು. ಆಗ ಮಾತ್ರ ಆರೋಪಿತ ವ್ಯಕ್ತಿಯ ಖುದ್ದು ಹಾಜರಾತಿಗೆ ಸೂಚಿಸುವ ಅಧಿಕಾರ ಆಯೋಗಕ್ಕೆ ಪ್ರಾಪ್ತವಾಗಲಿದೆ. ಹಾಲಿ ಪ್ರಕರಣದಲ್ಲಿ ಷೋಕಾಸ್ ನೋಟಿಸ್ ಅಥವಾ ಸಮನ್ಸ್ ನೀಡಲಾಗಿದೆ. ಸ್ಪಷ್ಟೀಕರಣ ಕೋರಿರುವ ಆಯೋಗದ ಕ್ರಮವು ವ್ಯಾಪ್ತಿ ಮೀರಿದೆ. ಹೀಗಾಗಿ, ಅರ್ಜಿದಾರರ ಕೋರಿಕೆಯಂತೆ ಅರ್ಜಿ ಇತ್ಯರ್ಥವಾಗುವವರೆಗೆ ನೋಟಿಸ್‌ಗೆ ತಡೆಯಾಜ್ಞೆ ವಿಧಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಅಲ್ಲದೇ, ಪ್ರತಿವಾದಿಗಳಾದ ರಾಜ್ಯ ಮಹಿಳಾ ಆಯೋಗ ಮತ್ತು ಅದರ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಎ ವಿ ನಿಶಾಂತ್ ಅವರು “ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995ರ ಸೆಕ್ಷನ್ 10(ಎ) ಅಡಿ ಅಧ್ಯಕ್ಷೆ ಸ್ಪಷ್ಟನೆ ಕೋರಿ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ. ಆದರೆ, ಸೆಕ್ಷನ್ 7ರ ಪ್ರಕಾರ ಕಾರ್ಯದರ್ಶಿ ನೋಟಿಸ್ ನೀಡಬೇಕು” ಎಂದರು.
ಇದಕ್ಕೆ ಪೀಠವು “ಸ್ಪಷ್ಟೀಕರಣ ಕೋರಿರುವುದು ನೈತಿಕತೆ ಆಧಾರದ ಮೇಲೆ ಇರಬಹುದು. ಕಾನೂನಾತ್ಮಕವಾಗಿ ನಿಮ್ಮ ಬಳಿ ಏನು ಆಧಾರವಿದೆ” ಎಂದರು.
ಇದಕ್ಕೆ ವಕೀಲ “ಆಯೋಗ ಪ್ರತಿಕ್ರಿಯೆ ಕೇಳಿಲ್ಲ. ಬದಲಿಗೆ ಖುದ್ದು ಹಾಜರಾಗಲು ಸೂಚಿಸಿದ್ದಾರೆ. ಇದು ಪೂರ್ವನಿರ್ಧರಿತ ಆದೇಶ. ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಷೋಕಾಸ್ ನೋಟಿಸ್ ಜಾರಿ ಮಾಡಬೇಕು” ಎಂದರು.
ಪ್ರಕರಣದ ಹಿನ್ನೆಲೆ: ತುಮಕೂರಿನ ತುರುವೇಕೆರೆ ಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ವಿ ಸೋಮಣ್ಣ ಅವರ ಪರವಾಗಿ ಪ್ರಚಾರ ಮಾಡುವಾಗ ಕುಮಾರಸ್ವಾಮಿ ಅವರು “ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ” ಎಂದು ಹೇಳಿದ್ದರು. ಇದರ ಕುರಿತು ಮಹಿಳಾ ಆಯೋಗವು ಏಳು ದಿನಗಳಲ್ಲಿ ಖುದ್ದಾಗಿ ಆಯೋಗದ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಕುಮಾರಸ್ವಾಮಿಗೆ ಸೂಚಿಸಿತ್ತು.