Karnataka High Court 
ಸುದ್ದಿಗಳು

ಶೇ.50 ಮೀರಿದ ಒಟ್ಟು ಮೀಸಲಾತಿ ಪ್ರಮಾಣ: ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಕಾಯಿದೆ ರದ್ದುಗೊಳಿಸಿದ ಹೈಕೋರ್ಟ್

ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 56ಕ್ಕೆ ಹೆಚ್ಚಿಸಲಾಗಿತ್ತು.

Bar & Bench

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿ ಜಾರಿಗೆ ತರಲಾಗಿದ್ದ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯಿದೆ- 2022’ರ  ಸೆಕ್ಷನ್‌ 3 ಮತ್ತು 4 ಅನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.

ಈ ಕಾಯಿದೆಯ ಸೆಕ್ಷನ್ 3ರಡಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 56ಕ್ಕೆ ಹೆಚ್ಚಿಸಿದ್ದ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯಿದೆ- 2022’ ಅನ್ನು 2023ರ ಜನವರಿ 13ರಂದು ಜಾರಿಗೆ ತಂದು ಅಂದಿನ ಬಿಜೆಪಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.

ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಾಯಚೂರಿನ ಡಾ.ಅಂಬೇಡ್ಕರ್‌ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್‌ ಮಿತ್ರಾ, ತುಮಕೂರು ಜಿಲ್ಲೆ ತಿಪಟೂರಿನ ಎಚ್ ಆರ್ ಸಾಗರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ಪ್ರಕಟಿಸಿದೆ.

Chief Justice Vibhu Bakhru & Justice K S Hemalekha

ಕಾಯಿದೆಯ ಸೆಕ್ಷನ್ 3ರಡಿ ಎಸ್‌ಸಿ ವರ್ಗಗಳ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹೆಚ್ಚಿಸಿದ್ದ ಹಾಗೂ ಎಸ್‌ಟಿ ವರ್ಗಗಳ ಮೀಸಲಾತಿಯನ್ನು ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಒಟ್ಟು ಮೀಸಲಾತಿಯನ್ನು ಶೇ.50ರ ಮಿತಿಗಿಂತ ಶೇ.56ಕ್ಕೆ ಹೆಚ್ಚಿಸಿರುವುದು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ. ಆದ ಕಾರಣ ಕಾಯಿದೆಯ ಸೆಕ್ಷನ್ 3 ಮತ್ತು 4ನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಈ ತೀರ್ಪು ರಾಜ್ಯ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳ ನೇಮಕಾತಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಈ ಹಿಂದೆ ಕೆಎಎಸ್‌ ಅಧಿಕಾರಿಗಳ ಹುದ್ದೆಗಳು ಸೇರಿದಂತೆ ಬೇರೆ ಬೇರೆ ಹುದ್ದೆಗಳ ನೇಮಕಾತಿ ಇದೇ ಶೇ.56ರ ಮೀಸಲಾತಿ ಪ್ರಮಾಣ ಆಧರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮೀಸಲು ಹೆಚ್ಚಳ ಪ್ರಶ್ನಿಸಿ ಕೆಲವು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ಕೋರ್ಟ್‌ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿ, ಅಂತಿಮ ಆಯ್ಕೆಯು ಕೋರ್ಟ್‌ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಮೀಸಲಾತಿ ಪ್ರಮಾಣ ಶೇ.50ರ ಗರಿಷ್ಠ ಮಿತಿಯ ವಿಷಯಕ್ಕೆ ಬಂದರೆ, ಸಂವಿಧಾನದ 16ನೇ ವಿಧಿಯ ಉಪ ವಿಧಿ (4)ರ ಅಡಿಯಲ್ಲಿನ ಮೀಸಲಾತಿಗೆ ಅನ್ವಯವಾಗುವಂತೆಯೇ, ಸಂವಿಧಾನದ 15ನೇ ವಿಧಿಯ ಉಪ ವಿಧಿ (4)ರ ಅಡಿಯಲ್ಲಿನ ಮೀಸಲಾತಿಗೂ ಇದು ಸಮಾನವಾಗಿ ಅನ್ವಯಿಸುತ್ತದೆ. ಆದ್ದರಿಂದ, ಅಸಾಧಾರಣ ಸಂದರ್ಭಗಳಲ್ಲಿ ವಿನಾಯಿತಿಗೆ ಅರ್ಹ ಹಾಗೂ ಬಲವಾದ ಕಾರಣ ಸಾಬೀತುಪಡಿಸದ ಹೊರತು ರಾಜ್ಯವು ಈ ಮಿತಿಯನ್ನು ಮೀರುವುದನ್ನು ಅನುಮತಿಸುವುದು ಅರ್ಹವಲ್ಲ ಎಂದು ಪೀಠ ತೀರ್ಪಿನಲ್ಲಿ ಹೇಳಿದೆ.

ಸಂವಿಧಾನದ ವಿಧಿ 338ರ ಉಪ ವಿಧಿ (9) ಮತ್ತು ವಿಧಿ 338ಎರ ಉಪ ವಿಧಿ (9)ರ ಪ್ರಕಾರ, ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಪ್ರಮುಖ ನೀತಿ ವಿಷಯಗಳ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆ ನಡೆಸುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರುವ ಮೊದಲು ರಾಜ್ಯ ಸರ್ಕಾರವು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆಯೇ ನಡೆಸಿಲ್ಲ ಎಂದು ಪೀಠ ತೀರ್ಪಿನಲ್ಲಿ ಆಕ್ಷೇಪಿಸಿದೆ.

ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕಾಯಿದೆಯನ್ನು ರೂಪಿಸಲು ರಾಜ್ಯ ಶಾಸಕಾಂಗಕ್ಕೆ ಶಾಸನೀಯ ಅಧಿಕಾರವಿದೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದಾಗ್ಯೂ, ಸಂವಿಧಾನದ 245 ಮತ್ತು 246ನೇ ವಿಧಿಗಳ ಅಡಿಯಲ್ಲಿನ ಅಧಿಕಾರವು ಸಂವಿಧಾನದ ಇತರ ನಿಬಂಧನೆಗಳಿಂದ ನಿಯಂತ್ರಿಸಲ್ಪಡುವುದಿಲ್ಲ ಅಥವಾ ಮಿತಿಗೊಳಿಸಲ್ಪಡುವುದಿಲ್ಲ ಎಂದು ಸರ್ಕಾರವು ಪ್ರತಿಪಾದಿಸುವುದು ತಪ್ಪಾಗುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಪ್ರಮುಖ ನೀತಿ ವಿಷಯಗಳ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆ ನಡೆಸುವಂತೆ 338 ಮತ್ತು 338ಎ ವಿಧಿಗಳ ಉಪ ವಿಧಿ (9) ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತದೆ. ಇದು ಒಂದು ಸಾಂವಿಧಾನಿಕ ಅವಶ್ಯಕತೆಯಾಗಿದೆ. ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಸಂವಿಧಾನದ ವಿಧಿ 338ರ ಉಪ ವಿಧಿ (9) ಮತ್ತು ವಿಧಿ 338ಎರ ಉಪ ವಿಧಿ (9)ರ ಅಡಿಯಲ್ಲಿ ಅಗತ್ಯವಿರುವ 'ಸಮಾಲೋಚನೆ'ಯನ್ನು, ಕೇವಲ ಕಾಯಿದೆಯನ್ನು ಜಾರಿಗೆ ತಂದ ನಂತರ ಪತ್ರ ಬರೆಯುವ ಮೂಲಕ ಪೂರೈಸಲಾಗಿದೆ ಎಂದು ಸರ್ಕಾರ ಮಂಡಿಸಿರುವ ವಾದವನ್ನು ಪರಿಗಣಿಸಲಾಗುವುದಿಲ್ಲ. ಕಾಯಿದೆ ಜಾರಿಗೆ ಬಂದ ಸುಮಾರು ಮೂರು ವರ್ಷಗಳ ನಂತರ ಮತ್ತು ಕಾಯಿದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ರಾಜ್ಯ ಸರ್ಕಾರವು 2025ರ ಡಿಸೆಂಬರ್‌ 10 ಮತ್ತು 2026ರ ಜನವರಿ 20ರಂದು ಪತ್ರಗಳನ್ನು ಬರೆದಿದೆ. ಅದನ್ನು ಒಪ್ಪಲಾಗದು. ಸಮಾಲೋಚನೆಯು ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗಿರಬೇಕಾದರೆ, ಅದು ನಿರ್ಧಾರ ಕೈಗೊಳ್ಳುವ ಮೊದಲೇ ನಡೆಯಬೇಕು ಎಂದು ಪೀಠ ಹೇಳಿದೆ.

Mahendra Kumar Mitra & others Vs Union of India & others.pdf
Preview