Manual Scavenging
Manual Scavenging 
ಸುದ್ದಿಗಳು

ಕಾರ್ಮಿಕರಿಂದ ಮಲಗುಂಡಿ ಸ್ವಚ್ಛತೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶನ

Bar & Bench

ʼನಿಷೇಧವಿದ್ದರೂ ಮಲ ಹೊರುವ ಪದ್ಧತಿ ಜೀವಂತʼ ಎಂಬ ಮಾಧ್ಯಮ ವರದಿಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಉಲ್ಲೇಖಿಸಿತು.

ಸಿಜೆ ಅವರು “ಇದೊಂದು ಆತಂಕಕಾರಿ ಸುದ್ದಿ… ಇದು ಪ್ರತಿಯೊಬ್ಬರ ಆತ್ಮಸಾಕ್ಷಿಯನ್ನು ಕೆಣಕುತ್ತದೆ. ಸ್ವಾತಂತ್ರ್ಯ ಬಂದು 60 ವರ್ಷಗಳ ಬಳಿಕವೂ ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದ, ತನ್ನದಲ್ಲದ ದುರದೃಷ್ಟಕ್ಕೆ ಅವರು ಈ ಕೆಲಸ ಮಾಡಬೇಕಿದೆ. ಇದು ಮಾನವೀಯತೆಗೆ ನಾಚಿಕೆಯಾಗುವ ಸಂಗತಿಯಲ್ಲವೇ? ಈ ಕಾರಣಕ್ಕಾಗಿ ನಾವೆಲ್ಲ ಇಲ್ಲಿ ಇದ್ದೇವೆಯೇ?” ಎಂದು ಪೀಠವು ಮೌಖಿಕವಾಗಿ ಹೇಳಿತು.

“ಯಾರೋ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಪ್ರಾಣಿಗಿಂತ ಕೆಟ್ಟು ಬದುಕು ಬದುಕಬೇಕೆ? ನಾವೆಲ್ಲಾ ದೇವರ ಮಕ್ಕಳು? ಇದೇನಿದು? ಇಂದು ಯಂತ್ರೋಪಕರಣ ಇದ್ದು ಹೀಗೇಕೆ? ಮಲಗುಂಡಿ ಸ್ವಚ್ಛಗೊಳಿಸಲು ಒಂದು ತಾಸಿಗೆ ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆಯಷ್ಟೇ” ಎಂದು ಬೇಸರಿಸಿದರು.

ನ್ಯಾ. ದೀಕ್ಷಿತ್‌ ಅವರು “ನಮ್ಮಲ್ಲಿರುವುದು ಯಂತ್ರದ ಸಮಸ್ಯೆಯಲ್ಲ. ಮನಸ್ಥಿತಿಯದ್ದಾಗಿದೆ” ಎಂದರು.

ಆಗ ಸಿಜೆ ಅವರು “ಇದನ್ನು ನೋಡಿದರೆ ನಿದ್ರೆಯೇ ಬರುವುದಿಲ್ಲ. ಸಮಾಜದಲ್ಲಿ ಇದೆಲ್ಲಾ ನಡೆಯುತ್ತಿರುವುದನ್ನು ನೋಡಿದಾಗ ಬೇರೆ ವಿಚಾರಗಳ ಬಗ್ಗೆ ಗಮನಹರಿಸಲು ಮನಸ್ಸೇ ಬರುವುದಿಲ್ಲ. ಎರಡು ತಿಂಗಳ ಹಿಂದೆಷ್ಟೇ ಯಶಸ್ವಿ ಚಂದ್ರಯಾನವಾಗಿದೆ. ಅದು ನಮಗೆ ಹೆಮ್ಮೆಯ ವಿಷಯ… ಅದರೆ, ಇದೇ ಸಂದರ್ಭದಲ್ಲಿ ನಮ್ಮ ಸಹೋದರರನ್ನು ನಾವು ಮನುಷ್ಯರು ಎಂದೇಕೆ ಪರಿಗಣಿಸುತ್ತಿಲ್ಲ” ಎಂದು ಬೇಸರಿಸಿದರು.

ಅಂತಿಮವಾಗಿ ಪೀಠವು ವಕೀಲ ಶ್ರೀಧರ್‌ ಪ್ರಭು ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಿ, ಸಾರ್ವಜನಿಕ ಹಿತಾಸಕ್ತ ಅರ್ಜಿ ಸಿದ್ಧಪಡಿಸಿ ಶುಕ್ರವಾರದ ಒಳಗೆ ರಿಜಿಸ್ಟ್ರಿಗೆ ಸಲ್ಲಿಸಬೇಕು. ರಿಜಿಸ್ಟ್ರಿಯನ್ನು ಅರ್ಜಿಯನ್ನು ವಿಚಾರಣೆಗೆ ಸೋಮವಾರಕ್ಕೆ ಪಟ್ಟಿ ಮಾಡಬೇಕು ಎಂದು ನಿರ್ದೇಶಿಸಿತು.