ಕರ್ನಾಟಕ ಹೈಕೋರ್ಟ್, ಧಾರವಾಡ ಪೀಠ 
ಸುದ್ದಿಗಳು

ಪೋಕ್ಸೊ ಪ್ರಕರಣದಲ್ಲಿ ಅಮಾನವೀಯ ವರ್ತನೆ: ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ತರಬೇತಿ ಪಡೆಯಲು ಸೂಚಿಸಿದ ಹೈಕೋರ್ಟ್

ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರಲ್ಲಿನ 'ವೃತ್ತಿಪರತೆಯ ಕೊರತೆ' ಮತ್ತು ಪ್ರಾಸಿಕ್ಯೂಷನ್ ಸಾಕ್ಷ್ಯಗಳೆಡೆಗಿನ ʼಅತೀವ ಸಂವೇದನಾರಾಹಿತ್ಯತೆ'ಯನ್ನು ನ್ಯಾಯಾಲಯ ಗಮನಿಸಿತು.

Bar & Bench

ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆಸುವಲ್ಲಿ "ಅಮಾನವೀಯ" ಮತ್ತು "ಸಂವೇದನಾರಹಿತ"ವಾಗಿ ವರ್ತಿಸಿದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರೊಬ್ಬರನ್ನು ತರಾಟೆಗೆ ತೆಗೆದುಕೊಂಡಿದೆ [ಕರ್ನಾಟಕ ಸರ್ಕಾರ ಮತ್ತು ವೆಂಕಟೇಶ್‌ ಅಲಿಯಾಸ್‌ ವೆಂಕಪ್ಪ ನಡುವಣ ಪ್ರಕರಣ].

ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರು ನಿಷ್ಠುರ ರೀತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ವೆಂಕಟೇಶ್ ನನ್ನು ಖುಲಾಸೆಗೊಳಿಸಿದ ಆದೇಶ ಬದಿಗೆ ಸರಿಸಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದರು.

ಆರೋಪಿಯನ್ನು ಖುಲಾಸೆಗೊಳಿಸಿದ ಕೆಳ ನ್ಯಾಯಾಲಯದ ನ್ಯಾಯಾಧೀಶರು ಪ್ರಾಸಿಕ್ಯೂಷನ್ ಸಾಕ್ಷ್ಯಗಳ ವಿಚಾರಣೆ ವೇಳೆ ʼಅತೀವ ಸಂವೇದನಾರಾಹಿತ್ಯತೆʼ ಮತ್ತು ʼವೃತ್ತಿಪರತೆಯ ಕೊರತೆʼ ತೋರಿದ್ದಾರೆ ಎಂದು ನ್ಯಾಯಾಲಯ ನುಡಿದಿದೆ.

"ಈ ರೀತಿಯ ತೀರ್ಪು ನೀಡಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಿಗೆ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಸ್ವಲ್ಪ ತರಬೇತಿ ನೀಡುವ ಅಗತ್ಯವಿದೆ. ಆದ್ದರಿಂದ, ತೀರ್ಪು ನೀಡಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯುವಂತೆ ನ್ಯಾಯಾಲಯ ಈ ಮೂಲಕ ಶಿಫಾರಸು ಮಾಡುತ್ತಿದೆ" ಎಂದು ಪೀಠ ಆದೇಶಿಸಿದೆ.

2018ರ ಫೆಬ್ರವರಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಮತ್ತು ಐಪಿಸಿ ಸೆಕ್ಷನ್‌ಗಳಡಿ ವಿಚಾರಣೆ ಎದುರಿಸಿದ್ದ.

"ಯಾವುದೇ ಸ್ವತಂತ್ರ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ ಮತ್ತು ಸಂತ್ರಸ್ತೆಗೆ ಯಾವುದೇ ಗಾಯವಾಗಿಲ್ಲ ಎಂದು ವೈದ್ಯರ ಪುರಾವೆಗಳು ಬಹಿರಂಗಪಡಿಸಿವೆ ಎಂಬ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಡಿಸೆಂಬರ್ 2020ರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು.

ಪೋಕ್ಸೊ ನ್ಯಾಯಾಲಯ ಸಾಕ್ಷ್ಯಗಳನ್ನು "ತುಂಬಾ ತಾಂತ್ರಿಕವಾಗಿ" ಪರಾಮರ್ಶಿಸಿದೆಯೇ ವಿನಾ ಸೂಕ್ತ ರೀತಿಯಲ್ಲಿ ಅಲ್ಲ ಎಂದು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅಭಿಪ್ರಾಯಪಟ್ಟರು. ವಿಚಾರಣಾ ನ್ಯಾಯಾಲಯದ ಕ್ರಮ "ಸಂಪೂರ್ಣವಾಗಿ ತಪ್ಪು, ವಿಕೃತ ಮತ್ತು ಅಮಾನವೀಯ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಪ್ರಾಪ್ತ ಬಾಲಕಿಯ ಮತ್ತು ಆಕೆಯ ಪೋಷಕರ ಪುರಾವೆಗಳು ಪ್ರಸ್ತುತವಾಗಿದ್ದು ನಂಬಲರ್ಹವೆಂದು ಅರ್ಹತೆಯ ಆಧಾರದ ಮೇಲೆ ಹೈಕೋರ್ಟ್ ಕಂಡುಕೊಂಡಿದೆ. ಉಳಿದ ಸಂಬಂಧಿಕರ ಸಾಕ್ಷ್ಯಗಳನ್ನು ವಿಶ್ಲೇಷಿಸಿದ ನಂತರ, ಆರೋಪಿಗಳು ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. 

"ಈ ರೀತಿಯ ಪ್ರಕರಣಗಳಲ್ಲಿ, ಲಭ್ಯವಿರುವ ಸಾಕ್ಷಿಗಳೆಂದರೆ ಅದು ಪೋಷಕರು, ಸಂಬಂಧಿಕರು ಹಾಗೂ ಅಪ್ರಾಪ್ತ ಸಂತ್ರಸ್ತರು. ಪೋಕ್ಸೊ ನ್ಯಾಯಾಲಯ ಸ್ವತಂತ್ರ ಸಾಕ್ಷಿಗಳು ಮತ್ತು ಪ್ರತ್ಯಕ್ಷ ಸಾಕ್ಷಿಗಳನ್ನು ಬಯಸಿದೆ, ಇದು ಅಸಾಧ್ಯ" ಎಂದು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅಭಿಪ್ರಾಯಪಟ್ಟರು.

ಗೋಚರಿಸುವಂತಹ ಗಾಯಗಳು ಇಲ್ಲದಿರುವುದರ ಆಧಾರದ ಮೇಲೆ ವೈದ್ಯರ ಪುರಾವೆಗಳನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯ ಗಂಭೀರ ತಪ್ಪು ಎಸಗಿದೆ ಎಂದು ನ್ಯಾಯಾಲಯ ಹೇಳಿದೆ.

"ಆರೋಪಿಯು ಸಂತ್ರಸ್ತೆಯ ಎದೆಯ ಭಾಗವನ್ನು ಹಿಂಡಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಆಗ ಗಾಯಗಳಾಗಿರಲು ಸಾಧ್ಯವಿಲ್ಲ. ಆರೋಪಿಯು ಸಂತ್ರಸ್ತೆಯ ಎದೆಯ ಭಾಗ ಮತ್ತು ಆಕೆಯ ಹಿಂಭಾಗವನ್ನು ಸ್ಪರ್ಶಿಸಿರಬಹುದು ಅಥವಾ ಲಘುವಾಗಿ ಹಿಂಡಿರಬಹುದು, ಆಗ ಗಾಯಗಳು ಸಂಭವಿಸುವ ಸಾಧ್ಯತೆಗಳಿಲ್ಲ" ಎಂದು ಅದು ನುಡಿದಿದೆ.

ಈ ಹಿನ್ನೆಲೆಯಲ್ಲಿ, ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಲಯದಲ್ಲಿನ ಪುರಾವೆಗಳನ್ನು ಪರಾಮರ್ಶಿಸುವಲ್ಲಿ ಸಂವೇದನಾಶೀಲತೆ ಮೆರೆದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. 

ಘನತೆಗೆ ಧಕ್ಕೆ ತರುವ ಈ ರೀತಿಯ ಅಪರಾಧಗಳಲ್ಲಿ ಗಾಯ ಉಂಟಾಗಿರಬೇಕು ಎಂದು ನಿರೀಕ್ಷಿಸುವುದು ಸಂಪೂರ್ಣವಾಗಿ ಅನಗತ್ಯ ಮತ್ತು ನ್ಯಾಯಾಲಯದ "ಆತ್ಮಸಾಕ್ಷಿಗೆ ಧಕ್ಕೆ ತರುತ್ತದೆ" ಎಂದು ನ್ಯಾಯಮೂರ್ತಿ ಸಂಜೀವ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

"ಆರೋಪಿಗಳನ್ನು ಖುಲಾಸೆಗೊಳಿಸುವಾಗ ಪೋಕ್ಸೊ ನ್ಯಾಯಾಲಯವು ಕ್ಷುಲ್ಲಕ ಕಾರಣಗಳನ್ನು ನೀಡಿದ್ದು ಸಾಕ್ಷ್ಯಗಳನ್ನು ಪರಾಮರ್ಶಿಸುವಲ್ಲಿ "ಅತ್ಯಂತ ಸಂವೇದನಾರಹಿತವಾಗಿತ್ತು" ಎಂದು ಹೈಕೋರ್ಟ್‌ ಪೀಠ ಹೇಳಿದೆ.

"ಪ್ರತಿ ಸಾಲಿನಲ್ಲಿಯೂ ಪ್ರಾಸಿಕ್ಯೂಷನ್ ಸಾಕ್ಷ್ಯಗಳಲ್ಲಿ ದೋಷ ಪತ್ತೆ ಹಚ್ಚಿ ತುಂಬಾ ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು ಮಾಡಿರುವುದು ನ್ಯಾಯದ ವಿಡಂಬನೆಯಲ್ಲದೆ ಬೇರೇನೂ ಅಲ್ಲ" ಎಂದು ಅದು ಹೇಳಿದೆ.

ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಆರೋಪದಲ್ಲಿ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿದ ನ್ಯಾಯಾಲಯ ಆತನಿಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು.

ಕರ್ನಾಟಕ ಸಂತ್ರಸ್ತರ ಪರಿಹಾರ ಯೋಜನೆಯಡಿ ಅಪ್ರಾಪ್ತ ಬಾಲಕಿಗೆ 5 ಲಕ್ಷ ರೂಗಳ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ಆದೇಶಿಸಿತು. 

ಸರ್ಕಾರದ ಪರವಾಗಿ ವಕೀಲ ಪ್ರವೀಣ್ ದೇವರೆಡ್ಡಿಯವರ್ ವಾದ ಮಂಡಿಸಿದ್ದರು. ಆರೋಪಿಯನ್ನು ವಕೀಲ ಅನ್ವರ್ ಬಾಷಾ ಬಿ ಹಾಗೂ ದೂರುದಾರರನ್ನು ಅಮಿಕಸ್ ಕ್ಯೂರಿ ಸೋನು ಸುಹೇಲ್ ಪ್ರತಿನಿಧಿಸಿದ್ದರು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

State of Karnataka v. Venkatesh @Venkappa.pdf
Preview