ಕರ್ನಾಟಕ ಹೈಕೋರ್ಟ್‌ 
ಸುದ್ದಿಗಳು

ಬಿಜಿಎಸ್‌ ಬ್ಲೂಮ್‌ಫೀಲ್ಡ್‌ ಅಕ್ರಮ ಶಾಲೆ ಮುಚ್ಚಲು ಕೋರಿದ್ದ ರಿಟ್‌ ಅರ್ಜಿ: ಪಿಐಎಲ್‌ ಆಗಿ ಪರಿವರ್ತಿಸಿದ ಹೈಕೋರ್ಟ್‌

ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಭಾರೀ ಪ್ರಮಾಣದ ಹಿತಾಸಕ್ತಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಅರ್ಜಿಯನ್ನು ಪಿಐಎಲ್‌ ಆಗಿ ಬದಲಿಸಿದೆ

Bar & Bench

ಬೆಂಗಳೂರು ತ್ಯಾಗರಾಜನಗರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬಿಜಿಎಸ್‌ ಬ್ಲೂಮ್‌ಫೀಲ್ಡ್‌ ಶಾಲೆ ಮುಚ್ಚುವಂತೆ ಕೋರಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ಈಚೆಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ಪರಿವರ್ತಿಸಿದೆ.

ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಭಾರೀ ಪ್ರಮಾಣದ ಹಿತಾಸಕ್ತಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಅರ್ಜಿಯನ್ನು 05-04-2024ರಂದು ಪಿಐಎಲ್‌ ಆಗಿ ಬದಲಿಸಿತು.

“…ಅರ್ಜಿಯನ್ನು ಓದಿದಾಗ ಅದನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಸಲ್ಲಿಸಲಾಗಿದೆ ಎಂದು ತಿಳಿದು ಬರಲಿದ್ದು ಮನವಿದಾರರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ಹೇಳಿಕೊಂಡಿದ್ದಾರೆ” ಎಂದು ನ್ಯಾಯಾಲಯ ನುಡಿದಿದೆ.

ಕಟ್ಟಡ ನಕ್ಷೆ ಇಲ್ಲದಿರುವುದು ಹಾಗೂ ಪ್ರವಾಹದ ನೀರು ಹರಿಯುವ ಸ್ಥಳದಲ್ಲಿ ಅದನ್ನು ನಿರ್ಮಿಸಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟಡ ಕೆಡವುವಂತೆ ಆದೇಶಿಸಿತ್ತು. ಬಿಬಿಎಂಪಿಯ ತೆರವು ಆದೇಶ ಯಾವುದೇ ಸಮಯದಲ್ಲಿ ಜಾರಿಗೆ ಬರಬಹುದು ಎಂಬ ಕಾರಣಕ್ಕೆ, ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಸುಧಾ ಕಟ್ವಾ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸರ್ಕಾರ ಹಾಗೂ ಶಾಲಾ ಆಡಳಿತ ಮಂಡಳಿಗೆ ಹೈಕೋರ್ಟ್‌ ಕಳೆದ ಫೆಬ್ರವರಿಯಲ್ಲಿ ನೋಟಿಸ್‌ ನೀಡಿತ್ತು.

ಏಪ್ರಿಲ್ 5, 2024ರಂದು ಪ್ರಕರಣದ ವಿಚಾರಣೆ ನಡೆಸಿದ ಪೀಠ ಮಕ್ಕಳ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಕರಣ ಇದಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ಪ್ರಕರಣವನ್ನು ಪರಿಗಣಿಸಿತು. ಅಲ್ಲದೆ ಹೆಚ್ಚಿನ ವಿಚಾರಣೆಯ ಸಲುವಾಗಿ ರೋಸ್ಟರ್‌ ಪೀಠದೆದುರು ಪ್ರಕರಣವನ್ನು ಉಲ್ಲೇಖಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಿಗೆ ಅದು ಸೂಚಿಸಿತು.

ಅರ್ಜಿದಾರರಾದ ಸುಧಾ ಕಟ್ವಾ ಅವರನ್ನು ಬೆಂಗಳೂರಿನ ಎಲ್‌ಇಎಕ್ಸ್‌ ಗ್ರೂಪ್‌ನ ವಕೀಲರಾದ ಎಸ್‌ ಉಮಾಪತಿ ಪ್ರತಿನಿಧಿಸಿದ್ದರು.