ಸುದ್ದಿಗಳು

ಹೊಣೆಗಾರಿಕೆ ಮತ್ತು ಗೌಪ್ಯತೆ ಒಟ್ಟೊಟ್ಟಿಗೆ ಸಾಗಬೇಕು: ಫೋನ್‌ ಪೇ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ಒದಗಿಸುವಂತೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ನೀಡಿರುವ ನೋಟಿಸ್‌ ಪ್ರಶ್ನಿಸಿ ಫೋನ್‌ಪೇ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

Bar & Bench

“ಹೊಣೆಗಾರಿಕೆ ಮತ್ತು ಗೌಪ್ಯತೆ ಒಟ್ಟೊಟ್ಟಿಗೆ ಸಾಗಬೇಕು” ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌, ಕ್ರಿಕೆಟ್‌ ಬೆಟ್ಟಿಂಗ್‌ ಸಂಬಂಧಿತ ಪ್ರಕರಣದಲ್ಲಿ ತನಿಖಾಧಿಕಾರಿ ಕೋರಿದ್ದ ಮಾಹಿತಿ ನೀಡಲು ನಿರಾಕರಿಸಿದ್ದ ಫೋನ್‌ ಪೇ ವಾದವನ್ನು ತಿರಸ್ಕರಿಸಿದೆ.

ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ಒದಗಿಸುವಂತೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ನೀಡಿರುವ ನೋಟಿಸ್‌ ಪ್ರಶ್ನಿಸಿ ಫೋನ್‌ಪೇ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಗೌಪ್ಯವಾಗಿಡಬೇಕಾದ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂಬ ಫೋನ್‌ ಪೇ ವಾದವನ್ನು ಒಪ್ಪಲಾಗದು. ಕಾನೂನುಬದ್ಧವಾಗಿ ಸಾಕ್ಷಿ ಸಂಗ್ರಹಿಸಿ, ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತನಿಖಾಧಿಕಾರಿಯ ಕೈಯನ್ನು ಗ್ರಾಹಕರ ಖಾಸಗಿತನ ರಕ್ಷಣೆ ಹೆಸರಿನ ನೆಪದಲ್ಲಿ ಕಟ್ಟಿಹಾಕಲಾಗದು. ಹೊಣೆಗಾರಿಕೆ ಮತ್ತು ಗೌಪ್ಯತೆ ಒಟ್ಟೊಟ್ಟಿಗೆ ಸಾಗಬೇಕು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಕ್ರಿಮಿನಲ್‌ ಚಟುವಟಿಕೆಯ ವಾಸನೆ ಕಂಡುಬಂದಾಗ ಸಂಸ್ಥೆಗಳು ತನಿಖಾ ಸಮನ್ಸ್‌ನಿಂದ ಹಿಂದೆ ಸರಿಯಲಾಗದು ಎಂದು ಬಾಂಬೆ, ಮದ್ರಾಸ್‌ ಮತ್ತು ಕೇರಳ ಹೈಕೋರ್ಟ್‌ ಹೇಳಿವೆ. ಹೀಗಾಗಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಕ್ರಿಮಿನಲ್‌ ತನಿಖೆಯ ವಿಷಯ ಬಂದಾಗ ದತ್ತಾಂಶ ರಕ್ಷಣೆಯ ಕರ್ತವ್ಯ ತಲೆಬಾಗಬೇಕಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಇಂದಿನ ಯುಗದಲ್ಲಿ ಸಾಂಪ್ರದಾಯಿಕ ಅಪರಾಧಗಳು ಹಿಂದೆ ಸರಿದಿದ್ದು, ಹೊಸ ಕಾಲಮಾನದ ಅಪರಾಧಗಳು ಹೆಚ್ಚಾಗುತ್ತಿವೆ. ಹೊಸ ಯುಗದ ಅಪರಾಧಗಳು ಸೈಬರ್‌ ಅಪರಾಧಗಳಾಗಿದ್ದು, ಗುಪ್ತಗಾಮಿನಿಯಾಗಿರುವ ಆಧುನಿಕ ಅಪರಾಧಗಳಾಗಿವೆ. ಇಂಥ ಅಪರಾಧಗಳಿಗೆ ತಕ್ಷಣ, ಗುರಿ ಕೇಂದ್ರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಬೇಕಿದೆ. ಕಾನೂನಿನ ಮಿತಿಯಲ್ಲಿ ಪೊಲೀಸರಿಗೆ ಡಿಜಿಟಲ್‌ ಹೆಜ್ಜೆಗುರುತು ಪತ್ತೆ ಹಚ್ಚುವ ಅಧಿಕಾರ ನೀಡಬೇಕಿದೆ. ಇಲ್ಲವಾದಲ್ಲಿ ಅದು ನಾಶವಾಗಲಿದೆ. ಫೋನ್‌ ಪೇ ವಾದದಂತೆ ಖಾಸಗಿತನದ ನಿರ್ವಹಣೆಯನ್ನು ಕಾಪಾಡಬೇಕಾಗುತ್ತದೆಯಾದರೂ ಕಾನೂನುಬದ್ಧ ತನಿಖೆಯ ಮುಂದೆ ಅದನ್ನು ಗುರಾಣಿಯಂತೆ ಬಳಸಲಾಗದು” ಎಂದಿದೆ.

“ಪೇಮೆಂಟ್‌ ಅಂಡ್‌ ಸೆಟಲ್‌ಮೆಂಟ್‌ ಸಿಸ್ಟಮ್‌ ಕಾಯಿದೆ 2007 ಮತ್ತು ಬ್ಯಾಂಕರ್ಸ್‌ ಬುಕ್ಸ್‌ ಸಾಕ್ಷ್ಯ ಕಾಯಿದೆಗಳು ಶಾಸನಬದ್ಧ ಸಂಸ್ಥೆಗಳ ಜೊತೆ ಮಾಹಿತಿ ಹಂಚಿಕೊಳ್ಳಲು ಅನುಮತಿಸುತ್ತವೆ. ಜೊತೆಗೆ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2011ರ ಅನ್ವಯ ತನಿಖಾಧಿಕಾರಿ ಕಾನೂನಿನ ಅನ್ವಯ ಮಾಹಿತಿ ಕೋರಿದಾಗ 72 ತಾಸಿನ ಒಳಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದೆ” ಎಂದು ನ್ಯಾಯಾಲಯ ವಿವರಿಸಿದೆ.

“ತನಿಖಾಧಿಕಾರಿ ಕೇಳುವ ಮಾಹಿತಿಯು ನಿರ್ದಿಷ್ಟವಾಗಿರಬೇಕು. ಈ ನೆಲೆಯಲ್ಲಿ ಪೊಲೀಸರು ಫೋನ್‌ ಪೇಗೆ ಜಾರಿ ಮಾಡಿರುವ ನೋಟಿಸ್‌ ಕಾನೂನುಬಾಹಿರವಲ್ಲ. ಇಲ್ಲಿ ಹಲವು ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದ್ದು, ಅಕ್ರಮ ಹಣಕಾಸು ವ್ಯವಹಾರ ಪತ್ತೆ ಮಾಡುವ ಗುರಿಯನ್ನು ತನಿಖೆ ಹೊಂದಿದೆ” ಎಂದು ನ್ಯಾಯಾಲಯ ಹೇಳಿದೆ.

ಫೋನ್‌ ಪೇ ಪರ ವಕೀಲ ನಿತಿನ್‌ ರಮೇಶ್‌ “ಪೇಮೆಂಟ್‌ ಅಂಡ್‌ ಸೆಟಲ್‌ಮೆಂಟ್‌ ಸಿಸ್ಟಮ್‌ ಕಾಯಿದೆ 2007 ಮತ್ತು ಬ್ಯಾಂಕರ್ಸ್‌ ಬುಕ್ಸ್‌ ಸಾಕ್ಷ್ಯ ಕಾಯಿದೆ ಅನ್ವಯ ಗ್ರಾಹಕರ ದತ್ತಾಂಶದ ಗೌಪ್ಯತೆ ಕಾಪಾಡುವುದು ತನ್ನ ಹೊಣೆಗಾರಿಕೆಯಾಗಿದ್ದು, ನ್ಯಾಯಾಲಯ ಆದೇಶಿಸಿದರೆ ಮಾತ್ರ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು” ಎಂದಿದ್ದರು.

ಪ್ರಕರಣದ ಹಿನ್ನೆಲೆ: ವ್ಯಕ್ತಿಯೊಬ್ಬರು ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಪಂದ್ಯಕ್ಕೆ ಬೆಟ್ಟಿಂಗ್‌ ಮಾಡುವ ಸಂಬಂಧ ಕ್ರೀಡಾ ವೆಬ್‌ಸೈಟ್‌ ಒಂದಕ್ಕೆ ಸುಮಾರು ₹6,000 ಹಣ ಠೇವಣಿ ಇಡಲು ಫೋನ್‌ ಪೇ ಬಳಕೆ ಮಾಡಿದ್ದರು. ಆದರೆ, ಆನಂತರ ಅವರು ತಮ್ಮ ವರ್ಚುವಲ್‌ ವಾಲೆಟ್‌ ಮೂಲಕ ಹಣ ಹಿಂಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ವೆಬ್‌ಸೈಟ್‌ ಅನ್ನು ನಿರ್ಬಂಧಿಸಲಾಗಿತ್ತು. ಇದರಿಂದ ಆ ವ್ಯಕ್ತಿಯು ತನಗೆ ವಂಚನೆಯಾಗಿದೆ ಎಂದು ಆರೋಪಿಸಿ, ಹಣ ವಾಪಸ್‌ ಕೊಡಿಸುವಂತೆ ದೂರು ಸಲ್ಲಿಸಿದ್ದರು.

ಇದರ ಆಧಾರದಲ್ಲಿ ಫೋನ್‌ ಪೇಗೆ ಅದರ ವೇದಿಕೆ ಬಳಕೆ ಮಾಡಿ ಜೂಜಿನ ವೆಬ್‌ಸೈಟ್‌ಗೆ ಹಣ ಠೇವಣಿ ಇಟ್ಟಿರುವ ಸಂಬಂಧ ಮಾಹಿತಿ ನೀಡುವಂತೆ ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ 2022ರ ಡಿಸೆಂಬರ್‌ನಲ್ಲಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು.

ಬಳಕೆದಾರ ಯಾರಿಗೆ ಹಣ ಪಾವತಿಸಿದ್ದಾರೆ? ಅಂಥ ಗ್ರಾಹಕರನ್ನು ಸೇರ್ಪಡೆ ಮಾಡುವುದಕ್ಕೂ ಮುನ್ನ ಫೋನ್‌ ಪೇ ಅವರಿಗೆ ವಿವರಣೆ ನೀಡಿತ್ತೇ? ವಂಚನೆ ಆಗುತ್ತಿರುವ ಬಗ್ಗೆ ಫೋನ್‌ ಪೇಗೆ ತಿಳಿದಿತ್ತೇ? ತನ್ನ ವೇದಿಕೆಯಲ್ಲಿ ಆನ್‌ಲೈನ್‌ ಜೂಜು ನಡೆಯುತ್ತಿರುವುದು ಪತ್ತೆ ಮಾಡಿತ್ತೇ ಎನ್ನುವ ಪ್ರಶ್ನೆಗಳೂ ಸೇರಿದಂತೆ ಆನ್‌ಲೈನ್‌ ಜೂಜಿನಲ್ಲಿ ತೊಡಗಿರುವ ಗ್ರಾಹಕರ ಪಟ್ಟಿ ಒದಗಿಸುವಂತೆ ಪೊಲೀಸ್‌ ನೋಟಿಸ್‌ನಲ್ಲಿ ಕೋರಲಾಗಿತ್ತು.

Phone Pe Pvt Ltd Vs State of Karnataka.pdf
Preview