Chief Justice Vibhu Bakhru & Justice K S Hemalekha 
ಸುದ್ದಿಗಳು

ಮೆರಿಟ್‌ ಪಟ್ಟಿಯಲ್ಲಿ 51ನೇ ರ‍್ಯಾಂಕ್‌, ಸೇನಾ ನೇಮಕಾತಿಗೆ ಮೂತ್ರಪಿಂಡ ಅಡ್ಡಿ: ಅಭ್ಯರ್ಥಿಗೆ ಹೈಕೋರ್ಟ್‌ನಲ್ಲೂ ನಿರಾಸೆ

ಎಡ ಮೂತ್ರಪಿಂಡದ ಗಾತ್ರ ನಿಗದಿತ ವೈದ್ಯಕೀಯ ಮಾನದಂಡಕ್ಕಿಂತ ಕಡಿಮೆ ಇರುವುದರಿಂದ ಅನರ್ಹಗೊಂಡಿದ್ದ ಅಭ್ಯರ್ಥಿಗೆ ಮರುಪರಿಶೀಲನಾ ವೈದ್ಯಕೀಯ ಪರೀಕ್ಷೆ ನಡೆಸಲು ನಿರ್ದೇಶಿಸಲು ವಿಭಾಗೀಯ ಪೀಠ ನಿರಾಕರಿಸಿದೆ.

Bar & Bench

ಭಾರತೀಯ ಸೇನೆಯ ನೇಮಕಾತಿ ಮೆರಿಟ್‌ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದಿದ್ದರೂ, ಎಡ ಮೂತ್ರಪಿಂಡದ ಗಾತ್ರ ನಿಗದಿತ ವೈದ್ಯಕೀಯ ಮಾನದಂಡಕ್ಕಿಂತ ಕಡಿಮೆ ಇದೆ ಎಂಬ ಕಾರಣಕ್ಕೆ ಅನರ್ಹಗೊಂಡಿದ್ದ 25 ವರ್ಷದ ಸೇನಾ ಆಕಾಂಕ್ಷಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಿರಾಸೆಯಾಗಿದೆ.

ಮರುಪರಿಶೀಲನಾ ವೈದ್ಯಕೀಯ ಮಂಡಳಿ ರಚಿಸಿ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ನಿರ್ದೇಶಿಸಲು ನಿರಾಕರಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೈಸೂರಿನ ಮೋನಿಶ್‌ ಎನ್‌. ಆರಾಧ್ಯ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ.

“ಸಶಸ್ತ್ರ ಪಡೆಗಳ ಪ್ರವೇಶ ವೈದ್ಯಕೀಯ ಮಾನದಂಡಗಳ ಪ್ರಕಾರ, ಅಪೂರ್ಣ ಬೆಳವಣಿಗೆ ಅಥವಾ ಕುಗ್ಗುವಿಕೆಯಿಂದ ಒಂದು ಅಥವಾ ಎರಡೂ ಮೂತ್ರಪಿಂಡಗಳ ಗಾತ್ರ 8 ಸೆಂ ಮೀ ಗಿಂತ ಕಡಿಮೆಯಿದ್ದರೆ ಅದು ಅನರ್ಹತೆಗೆ ಕಾರಣವಾಗುತ್ತದೆ. 2008ರ ಜೂನ್‌ 3ರ ಮಾರ್ಗಸೂಚಿಗಳಲ್ಲಿಯೂ ಇದೇ ಮಾನದಂಡವನ್ನು ಉಲ್ಲೇಖಿಸಲಾಗಿದೆ” ಎಂದು ಪೀಠ ಹೇಳಿದೆ.

ಬೇರೆ ವೈದ್ಯಕೀಯ ವರದಿಗಳನ್ನು ಸಲ್ಲಿಸಿದ ಪ್ರತಿಯೊಂದು ಪ್ರಕರಣವನ್ನೂ ಮರುಪರಿಶೀಲನಾ ವೈದ್ಯಕೀಯ ಮಂಡಳಿಗೆ ಕಳುಹಿಸಬೇಕು ಎಂಬ ನಿಯಮವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಮರುಪರಿಶೀಲನಾ ವೈದ್ಯಕೀಯ ಮಂಡಳಿಯ ಪರೀಕ್ಷೆ ಅಭ್ಯರ್ಥಿಯ ಹಕ್ಕಲ್ಲ, ಬದಲಿಗೆ ಪ್ರಕರಣದ ಅರ್ಹತೆಯನ್ನು ಆಧರಿಸಿದ ವಿವೇಚನಾತ್ಮಕ ನಿರ್ಧಾರ ಎಂದು ತಿಳಿಸಿದೆ.

ಅಭ್ಯರ್ಥಿಯ ಪರ ವಕೀಲರು ವಿವಿಧ ಆಸ್ಪತ್ರೆಗಳ ವೈದ್ಯಕೀಯ ವರದಿಗಳನ್ನು ಸಲ್ಲಿಸಿದ್ದರು. ಮಣಿಪಾಲ್‌ ಆಸ್ಪತ್ರೆಯ ಅಲ್ಟ್ರಾಸೌಂಡ್‌ ವರದಿಯಲ್ಲಿ ಎಡ ಮೂತ್ರಪಿಂಡದ ಗಾತ್ರ 7.7ರಿಂದ 8 ಸೆಂ.ಮೀ. ಎಂದು ದಾಖಲಾಗಿತ್ತು. ಪುದುಚೇರಿಯ ಜಿಪ್ಮರ್‌ ಸಂಸ್ಥೆಯು ಅಕ್ಟೋಬರ್‌ 14ರಂದು ನೀಡಿದ್ದ ವೈದ್ಯಕೀಯ ಅರ್ಹತಾ ಪ್ರಮಾಣಪತ್ರದಲ್ಲಿ ಮೂತ್ರಪಿಂಡದ ಗಾತ್ರ 8.0 × 4.1 ಸೆಂ.ಮೀ. ಎಂದು ಉಲ್ಲೇಖಿಸಲಾಗಿತ್ತು. ಈ ವರದಿಗಳ ಆಧಾರದ ಮೇಲೆ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಅವಕಾಶ ನೀಡಬೇಕು ಮತ್ತು ಮರುಪರಿಶೀಲನಾ ವೈದ್ಯಕೀಯ ಮಂಡಳಿಯ ನಿರ್ಧಾರವನ್ನು ಅಂತಿಮವೆಂದು ಒಪ್ಪಿಕೊಳ್ಳಲು ಅಭ್ಯರ್ಥಿ ಸಿದ್ಧರಿದ್ದಾರೆ ಎಂದು ವಕೀಲರು ವಾದಿಸಿದ್ದರು.

ಆದರೆ, ಮೇಲ್ಮನವಿ ವೈದ್ಯಕೀಯ ಮಂಡಳಿ ನಡೆಸಿದ್ದ ಟ್ರಿಪಲ್‌ ಫೇಸ್‌ ಸಿಇಸಿಟಿ  ಸ್ಕ್ಯಾನ್‌ನಲ್ಲಿ ಎಡ ಮೂತ್ರಪಿಂಡದ ಗಾತ್ರ 7 ಸೆಂ.ಮೀ. ಎಂದು ಕಂಡುಬಂದಿತ್ತು. ಅಲ್ಟ್ರಾಸೌಂಡ್‌ ಪರೀಕ್ಷೆಗಿಂತ ಈ ಪರೀಕ್ಷೆ ಹೆಚ್ಚು ನಿಖರವಾಗಿದೆ ಎಂಬ ಅಂಶವನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

“ಅಭ್ಯರ್ಥಿ ಉಲ್ಲೇಖಿಸಿರುವ ದೆಹಲಿ ಹೈಕೋರ್ಟ್‌ನ ಚಂದನ್‌ ಜೋಶಿ ಪ್ರಕರಣದ ತೀರ್ಪು ಆ ಪ್ರಕರಣದ ನಿರ್ದಿಷ್ಟ ಸಂಗತಿಗಳಿಗೆ ಸೀಮಿತವಾಗಿದೆ. ಪ್ರಾಧಿಕಾರದ ನಿರ್ಧಾರ ಸ್ವೇಚ್ಛಾಚಾರದಿಂದ ಕೂಡಿದೆ ಎನ್ನಲಾಗದು. ದುರುದ್ದೇಶದ ಆರೋಪವೂ ಇಲ್ಲದಿರುವ ಹಿನ್ನೆಲೆಯಲ್ಲಿ ಸಂವಿಧಾನದ 226ನೇ ವಿಧಿಯಡಿ ನಿರ್ಧಾರದ ಗುಣಾವಗುಣಗಳನ್ನು ಮರುಪರಿಶೀಲಿಸಲಾಗದು” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಸೇನಾ ನೇಮಕಾತಿಯ ಮೆರಿಟ್‌ ಪಟ್ಟಿಯಲ್ಲಿ ಮೋನಿಶ್‌ ಎನ್‌. ಆರಾಧ್ಯ 51ನೇ ಸ್ಥಾನ ಪಡೆದಿದ್ದರು. ಆದರೆ, ವಿಶೇಷ ವೈದ್ಯಕೀಯ ಮಂಡಳಿಯು ಎಡ ಮೂತ್ರಪಿಂಡದ ಗಾತ್ರ ಚಿಕ್ಕದಿರುವುದು, ಪ್ಲೇಟ್‌ಲೆಟ್‌ಗಳ ಕೊರತೆ ಮತ್ತು ಎಡಭಾಗದ ಕುತ್ತಿಗೆಯಲ್ಲಿ ಹೆಚ್ಚುವರಿ ಪಕ್ಕೆಲುಬು ಇರುವಿಕೆ ಎಂಬ ಮೂರು ಕಾರಣಗಳಿಂದ ಅವರನ್ನು ಅನರ್ಹಗೊಳಿಸಿತ್ತು.

ನಂತರ ಮೇಲ್ಮನವಿ ವೈದ್ಯಕೀಯ ಮಂಡಳಿಯ ಮರುಪರೀಕ್ಷೆಯಲ್ಲಿ ಪ್ಲೇಟ್‌ಲೆಟ್‌ಗಳ ಕೊರತೆ ಮತ್ತು ಹೆಚ್ಚುವರಿ ಪಕ್ಕೆಲುಬಿನ ಸಮಸ್ಯೆಗಳು ಕಂಡುಬಂದಿರಲಿಲ್ಲ. ಆದರೆ, ಎಡ ಮೂತ್ರಪಿಂಡದ ಗಾತ್ರ ಚಿಕ್ಕದಿರುವುದನ್ನು ಮಂಡಳಿ ದೃಢಪಡಿಸಿತ್ತು. ಇದರಿಂದ ಅಸಮಾಧಾನಗೊಂಡ ಆರಾಧ್ಯ, ಮರುಪರಿಶೀಲನಾ ವೈದ್ಯಕೀಯ ಮಂಡಳಿಗೆ ತಮ್ಮ ಪ್ರಕರಣವನ್ನು ಒಪ್ಪಿಸುವಂತೆ ಕೋರಿದ್ದರು. ಆ ಮನವಿಯನ್ನು ಸಕ್ಷಮ ಪ್ರಾಧಿಕಾರ ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನ ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ಸೆಪ್ಟೆಂಬರ್‌ 17ರಂದು ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠ, ಮರುಪರಿಶೀಲನಾ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆ ನಡೆಸುವಂತೆ ಕೋರುವುದು ಅಭ್ಯರ್ಥಿಯ ಹಕ್ಕಲ್ಲ ಎಂದು ಹೇಳಿತ್ತು. ಸೇನಾ ಸಿಬ್ಬಂದಿಯ ಕರ್ತವ್ಯಗಳ ಸ್ವರೂಪ ಹಾಗೂ ಕಟ್ಟುನಿಟ್ಟಿನ ವೈದ್ಯಕೀಯ ಷರತ್ತುಗಳನ್ನು ಪರಿಗಣಿಸಿ, ನ್ಯಾಯಾಲಯದ ಅಸಾಧಾರಣ ವಿವೇಚನಾಧಿಕಾರ ಬಳಸಿ ಪರಿಹಾರ ನೀಡಲು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ವಿಭಾಗೀಯ ಪೀಠವೂ ವಜಾಗೊಳಿಸಿದೆ.