Karnataka High Court, Transgender community flag 
ಸುದ್ದಿಗಳು

ಹಾರ್ಮೋನ್‌ ಥೆರಪಿ ಮುಂದುವರಿಸುವ ತೃತೀಯ ಲಿಂಗಿ ಮಹಿಳೆಯರ ಹಕ್ಕು ಎತ್ತಿ ಹಿಡಿದ ಹೈಕೋರ್ಟ್‌

ತೃತೀಯ ಲಿಂಗಿಗಳ ತಿದ್ದುಪಡಿ ಕಾಯಿದೆಯ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗೆ ತನ್ನ ನಿರ್ದೇಶನವು ಒಳ್ಳಪಟ್ಟಿರುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

Bar & Bench

ತೃತೀಯ ಲಿಂಗಿಗಳ ತಿದ್ದುಪಡಿ ಕಾಯಿದೆ ಜಾರಿಯ ನಡುವೆ ತೃತೀಯ ಲಿಂಗಿ ಮಹಿಳೆಯರಿಬ್ಬರಿಗೆ ಹಾರ್ಮೋನ್‌ ಬದಲಾವಣೆ ಥೆರಪಿ (ಎಚ್‌ಆರ್‌ಟಿ) ಮುಂದುವರಿಸುವಂತೆ ವೈದ್ಯಕೀಯ ವೃತ್ತಿಪರರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಅರ್ಜಿದಾರರ ಹಾರ್ಮೋನ್‌ ಥೆರಪಿ ಕೋರ್ಸ್‌ಗೆ ಅಡ್ಡಿಪಡಿಸುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಮಸ್ಯೆ ಉಂಟಾಗಲಿದೆ ಎಂದು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ಆದೇಶಿಸಿದೆ.

“ಅರ್ಜಿದಾರರು ಪ್ರಸ್ತುತಪಡಿಸಿರುವ ವೈದ್ಯಕೀಯ ದಾಖಲೆಗಳನ್ನು ನೋಡಿದರೆ ಮೇಲ್ನೋಟಕ್ಕೆ ಅವರು 11.11.2023ರಿಂದ ಹಾರ್ಮೋನ್‌ ಬದಲಾವಣೆ ಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನಿಲ್ಲಿಸುವುದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಪರಿಣಾಮ ಉಂಟು ಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಚಿಕಿತ್ಸೆ ಮುಂದುವರಿಕೆಯು ಹಾಲಿ ಅರ್ಜಿಯ ನಿರ್ಧಾರ ಮತ್ತು ಸುಪ್ರೀಂ ಕೋರ್ಟ್‌ ಹೊರಡಿಸುವ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಯಾವುದೇ ಮಾತ್ರೆ ತೆಗೆದುಕೊಳ್ಳದಂತೆ ಅರ್ಜಿದಾರರನ್ನು ಯಾರೂ ನಿರ್ಬಂಧಿಸಿಲ್ಲ ಮತ್ತು ಅವರ ವಿರುದ್ಧ ಬಲವಂತದ ಕ್ರಮಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ” ಎಂದರು.

ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ “ತಿದ್ದುಪಡಿ ಕಾಯಿದೆ ಜಾರಿಗೆ ಬಂದ ಬಳಿಕ ವೈದ್ಯರು ಹಾರ್ಮೋನ್‌ ಥೆರಪಿಗೆ ಚಿಕಿತ್ಸೆ ಮುಂದುವರಿಸಲು ಹೆದರುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಬಂಧಿಸುವುದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಲಿದೆ” ಎಂದಿದ್ದರು.

ತಿದ್ದುಪಡಿ ಕಾಯಿದೆಯಲ್ಲಿ ತೃತೀಯ ಲಿಂಗಿ ವ್ಯಾಖ್ಯಾನ ಬದಲಿಸಲಾಗಿದ್ದು, ಅದರಿಂದ ತಮ್ಮನ್ನು ಕೈಬಿಟ್ಟಿರುವುದನ್ನು ಅರ್ಜಿದಾರ ತೃತೀಯ ಲಿಂಗಿ ಮಹಿಳೆಯರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈಚೆಗೆ ತಿದ್ದುಪಡಿ ಕಾಯಿದೆಗೆ ತಡೆ ನೀಡುವುದಕ್ಕೆ ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತ್ತು.