Karnataka High Court, Couple
Karnataka High Court, Couple 
ಸುದ್ದಿಗಳು

ಪತಿಯನ್ನು ಕಪ್ಪು ಬಣ್ಣದ ಚರ್ಮ ಹೊಂದಿದವ ಎಂದು ಕರೆಯುವುದು ಕ್ರೌರ್ಯ: ವಿಚ್ಛೇದನ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌

Bar & Bench

ಪತಿಯನ್ನು ಕಪ್ಪು ಚರ್ಮ ಹೊಂದಿದವನು ಎಂದು ಪತ್ನಿ ಅವಮಾನಿಸುವುದು ಕ್ರೌರ್ಯವಾಗುತ್ತದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ. ಅಲ್ಲದೇ, ಪತಿಯಿಂದ ದೂರ ಉಳಿಯುವ ಉದ್ದೇಶದಿಂದ ಆತ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸುವುದು ಕ್ರೌರ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 13(ಐ)(ಎ) ಅಡಿ ವಿಚ್ಛೇದನ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ  ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ಅನಂತ್‌ ರಾಮನಾಥ್‌ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ದಾಖಲೆಯಲ್ಲಿರುವ ಸಾಕ್ಷಿಗಳನ್ನು ಪರಿಶೀಲಿಸಿದರೆ ಪತ್ನಿಯು ಪತಿಯನ್ನು ಕಪ್ಪು ವರ್ಣದವನು ಎಂದು ಅವಮಾನಿಸುತ್ತಿದ್ದರು ಎಂಬ ತೀರ್ಮಾನಕ್ಕೆ ಬರಬಹುದಾಗಿದೆ. ಇದೊಂದೇ ಕಾರಣಕ್ಕೆ ಆಕೆಯು ಪತಿಯಿಂದ ದೂರು ಉಳಿದಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಈ ವಿಚಾರಗಳು ಕ್ರೌರ್ಯಕ್ಕೆ ಸಮವಾಗಿವೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ತನ್ನ ಚರ್ಮದ ಬಣ್ಣ ಕಪ್ಪಾಗಿದೆ ಎಂದು ಪತ್ನಿಯು ತನ್ನನ್ನು ಹೀಗಳೆದಿದ್ದಾಳೆ ಎಂದು ಆರೋಪಿಸಿ ಪತಿಯು 2012ರಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಕ್ರೌರ್ಯ ನಡೆಸಿದ್ದಾರೆ ಎಂದು ಆಕ್ಷೇಪಿಸಿ ತನ್ನ ಮತ್ತು ಕುಟುಂಬ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್‌ 498ಎ ಅಡಿ ಸುಳ್ಳು ಪ್ರಕರಣ ದಾಖಲಿಸಿದ್ದರು. ಇದಲ್ಲದೇ, ನನ್ನನ್ನು ತೊರೆದು ಪತ್ನಿಯು ತನ್ನ ಪೋಷಕರ ಜೊತೆ ನೆಲೆಸಿದ್ದಾರೆ ಎಂದು ಆಕ್ಷೇಪಿಸಿದ್ದರು.

ಈ ಆರೋಪ ನಿರಾಕರಿಸಿದ್ದ ಪತ್ನಿಯು ಪತಿಯು ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ದೈಹಿಕ ಹಲ್ಲೆ ನಡೆಸಿದ್ದು, ಪತಿಯ ಕುಟುಂಬದವರು ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ವಾದಿಸಿದ್ದರು.

ಪತಿಯು ಇನ್ನೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬುದನ್ನು ಒಪ್ಪಲು ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ, ಪತ್ನಿಯ ಆರೋಪಗಳು ನಿರಾಧಾರವಾಗಿವೆ ಎಂದು ನ್ಯಾಯಾಲಯ ಹೇಳಿದೆ.

ಪತಿಯ ನಡತೆಯ ಬಗ್ಗೆ ಇಂಥ ಆಧಾರರಹಿತ ಮತ್ತು ಕ್ಷುಲ್ಲಕ ಆರೋಪ ಮಾಡಿರುವುದರ ಪರಿಣಾಮವನ್ನು ಪರಿಗಣಿಸಲು ಕೌಟುಂಬಿಕ ನ್ಯಾಯಾಲಯ ವಿಫಲವಾಗಿದೆ. ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಹಲವು ದಾವೆಗಳನ್ನು ಪತ್ನಿ ಹೂಡಿರುವುದು ಮತ್ತು ಪತಿ-ಪತ್ನಿಯ ನಡುವೆ ಹಲವು ವರ್ಷಗಳಿಂದ ಮಾತುಕತೆ ನಡೆಯದಿರುವುದನ್ನು ನ್ಯಾಯಾಲಯವು ಪರಿಗಣಿಸಿದೆ.

“ಪಾಟೀ ಸವಾಲಿನ ಸಂದರ್ಭದಲ್ಲಿ ಪತಿಯ ಜೊತೆ ಜೀವನ ನಡೆಸಲು ಇಚ್ಛೆ ಇದೆಯೇ ಎಂದು ಪತ್ನಿಯನ್ನು ಕೇಳಲಾಗಿದೆ. ಈ ಸಂದರ್ಭದಲ್ಲಿ ಆಕೆ ಹೌದು ಎಂದು ಪ್ರತಿಕ್ರಿಯಿಸಿದ್ದರೂ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಹೂಡಿರುವ ಯಾವುದೇ ದಾವೆ ಹಿಂಪಡೆಯುವುದಿಲ್ಲ ಎಂದಿದ್ದಾರೆ. ಇದರರ್ಥ ಆಕೆಯು ಪತಿಯ ಜೊತೆ ಜೀವಿಸುವ ಉದ್ದೇಶ ಹೊಂದಿಲ್ಲ. ಇಬ್ಬರ ನಡವೆ ಬಹುದೊಡ್ಡ ಕಂದರವಿದೆ” ಎಂದು ನ್ಯಾಯಾಲಯ ಹೇಳಿದೆ. ಈ ನೆಲೆಯಲ್ಲಿ ತನ್ನ ಮೇಲೆ ಕ್ರೌರ್ಯ ಎಸಗಲಾಗುತ್ತಿದೆ ಎಂಬ ಪತಿಯ ವಾದದಲ್ಲಿ ನೈಜತೆ ಇದೆ ಎಂದಿರುವ ನ್ಯಾಯಾಲಯವು ವಿಚ್ಛೇದನಕ್ಕೆ ಅನುಮತಿಸಿದೆ.

ಪತಿಯನ್ನು ವಕೀಲ ಜಿ ಜನಾರ್ಧನ ಮತ್ತು ಪತ್ನಿಯನ್ನು ವಕೀಲೆ ಭುವನೇಶ್ವರಿ ಪ್ರತಿನಿಧಿಸಿದ್ದರು.