ಕಾಲೇಜು ಅಂಗಳದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅಧಿಕಾರ ನೀಡಿದ್ದ ಕರ್ನಾಟಕ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಭಿನ್ನ ತೀರ್ಪು ನೀಡಿದೆ [ಆಯಿಷತ್ ಶಿಫಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಸರ್ಕಾರದ ಆದೇಶ ಎತ್ತಿಹಿಡಿದರೆ, ನ್ಯಾ. ಸುಧಾಂಶು ಧುಲಿಯಾ ಅದನ್ನು ಬದಿಗೆ ಸರಿಸಿದರು.
“ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಮೇಲ್ಮನವಿದಾರರ ವಿರುದ್ಧ ತೀರ್ಪು ನೀಡುತ್ತಿದ್ದೇನೆ. ಅರ್ಜಿಯನ್ನು ವಜಾಗೊಳಿಸುತ್ತಿರುವೆ: ಎಂದು ನ್ಯಾ. ಹೇಮಂತ್ ಗುಪ್ತಾ ಅವರು ತಿಳಿಸಿದರು.
ಆದರೆ ನ್ಯಾಯಮೂರ್ತಿ ಧುಲಿಯಾ ಅವರು ಮೇಲ್ಮನವಿಯನ್ನು ಪುರಸ್ಕರಿಸಿ ಕರ್ನಾಟಕ ಸರ್ಕಾರದ ಆದೇಶ ರದ್ದುಗೊಳಿಸಿದರು. ಪರಿಣಾಮ ಈಗ ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.
"ವಿಭಿನ್ನ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ನಿರ್ದೇಶನಗಳಿಗಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಸಲ್ಲಿಸಿ" ಎಂದು ಪೀಠ ನಿರ್ದೇಶಿಸಿತು.
ನ್ಯಾಯಮೂರ್ತಿ ಗುಪ್ತಾ ತಮ್ಮ ತೀರ್ಪಿನಲ್ಲಿ ಹನ್ನೊಂದು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಡಿ ಅಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ಅಲ್ಲ. ರಾಜ್ಯ ಸರ್ಕಾರದ ಆದೇಶ (ವಿದ್ಯಾರ್ಥಿಗಳು) ಶಿಕ್ಷಣ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ ಎಂದು ಹೇಳಿದ ಅವರು ಮೇಲ್ಮನವಿಗಳನ್ನು ವಜಾಗೊಳಿಸಿದರು.
ಆದರೆ ನ್ಯಾಯಮೂರ್ತಿ ಧುಲಿಯಾ ಇಆರ್‌ಪಿ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. (ಕರ್ನಾಟಕ) ಹೈಕೋರ್ಟ್ ತಪ್ಪು ಹೆಜ್ಜೆ ಇರಿಸಿದೆ ಎಂದರು.
"ಇದು ಕೇವಲ ಆಯ್ಕೆಯ ಪ್ರಶ್ನೆಯಾಗಿತ್ತು. ಬಿಜೋಯ್ ಇಮ್ಯಾನುಯೆಲ್ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಅನುಪಾತವು ಪ್ರಕರಣದ ಕುರಿತು ಸಂಪೂರ್ಣವಾಗಿ ಹೇಳುತ್ತದೆ" ಎಂದು ನ್ಯಾಯಮೂರ್ತಿ ಧುಲಿಯಾ ತೀರ್ಪು ನೀಡಿದರು.
ಭಿನ್ನ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ಮುಂದುವರಿಯಲಿದೆ ಎಂದು ಕರ್ನಾಟಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. ಇದರಂತೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮುಂದುವರಿಯಲಿದೆ.