ಹೈಕೋರ್ಟ್ ವಕೀಲರಿಗಿಂತ ಸುಪ್ರೀಂ ಕೋರ್ಟ್ ವಕೀಲರು ವೃತ್ತಿಪರವಾಗಿ ಹೆಚ್ಚು ಅರ್ಹರು ಎಂಬ ಸುಪ್ರೀಂ ಕೋರ್ಟ್ ವಕೀಲರ ಪರಿಷತ್ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ಅವರ ಹೇಳಿಕೆಗೆ ಕರ್ನಾಟಕದ ವಕೀಲರೊಬ್ಬರು ತೀವ್ರ ಆಕ್ಷೇಪ ಎತ್ತಿದ್ದಾರೆ. ವಿಕಾಸ್ ಸಿಂಗ್ ಅವರ ಹೇಳಿಕೆ "ಅತಿರೇಕ"ದಿಂದ ಕೂಡಿದ್ದು, ತಕ್ಷಣ ಆ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್ ಬಸವರಾಜ್ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಪ್ರಸ್ತಾವ ಪರಿಗಣಿಸುವ ಸಂಬಂಧ ಜೂನ್ 8ರಂದು ಬರೆದಿರುವ ಪತ್ರದಲ್ಲಿ ಸಿಂಗ್ ಆ ಹೇಳಿಕೆ ನೀಡಿದ್ದರು. ಹೈಕೋರ್ಟ್ ವಕೀಲರಿಗಿಂತ ಸುಪ್ರೀಂ ಕೋರ್ಟ್ ವಕೀಲರು ವೃತ್ತಿಪರವಾಗಿ ಹೆಚ್ಚು ಅರ್ಹತೆ ಹೊಂದಿದ್ದಾರೆ. ಅದಾಗ್ಯೂ ಹೈಕೋರ್ಟ್ ಕೊಲಿಜಿಯಂ ಏಕೆ ಸುಪ್ರೀಂ ಕೋರ್ಟ್ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸುತ್ತಿಲ್ಲ ಎಂದು ಸಿಂಗ್ ಹೇಳಿದ್ದರು.
“ಸಿವಿಲ್, ಕ್ರಿಮಿನಲ್, ಸಾಂವಿಧಾನಿಕ, ವಾಣಿಜ್ಯ ಕಾನೂನು ಇತ್ಯಾದಿಗಳಲ್ಲಿ ಅಪಾರವಾದ ಅನುಭವ ಹೊಂದಿದ್ದರೂ ಹೈಕೋರ್ಟ್‌ನಲ್ಲಿ ಹೆಚ್ಚು ಪ್ರಾಕ್ಟೀಸ್ ಮಾಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ಹೈಕೋರ್ಟ್ ಕೊಲಿಜಿಯಂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುವವರನ್ನು ಎಂದೋ ಒಮ್ಮೆ ಹೈಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಕ್ಕೆ ಪರಿಗಣಿಸುತ್ತಾರೆ. ಇದೆಲ್ಲದರ ನಡುವೆ ಸುಪ್ರೀಂ ಕೋರ್ಟ್ ವಕೀಲರು ಹೈಕೋರ್ಟ್‌ನಲ್ಲಿ ತಮ್ಮ ಸಹೋದ್ಯೋಗಿಗಳಿಗಿಂತ ಹೆಚ್ಚು ವೃತ್ತಿಪರ ಅರ್ಹತೆ ಹೊಂದಿದ್ದರೂ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ” ಎಂದು ಸಿಂಗ್ ತಮ್ಮ ಪತ್ರದಲ್ಲಿ ಹೇಳಿದ್ದರು.
ಸುಪ್ರೀಂ ಕೋರ್ಟ್‌ಗೆ ಹೈಕೋರ್ಟ್‌ಗಳು ಅತ್ಯುತ್ತಮ ನ್ಯಾಯಮೂರ್ತಿಗಳನ್ನು ನೀಡಿದ್ದು, ಈ ಮೂಲಕ ಸರ್ವೋಚ್ಚ ನ್ಯಾಯಾಲಯವನ್ನು ಮತ್ತಷ್ಟು ಭದ್ರಪಡಿಸಿವೆ ಎಂದು ಬಸವರಾಜ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
“ಹಲವು ವಕೀಲರು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಾಕ್ಟೀಸ್ ಆರಂಭಿಸಿ ತಮ್ಮ ಅಪಾರ ಜ್ಞಾನ ಮತ್ತು ಅನುಭವದ ಮೂಲಕ ಹೈಕೋರ್ಟ್‌ಗಳನ್ನು ಶ್ರೀಮಂತಗೊಳಿಸಿದ್ದಾರೆ” ಎಂದು ಸಿಂಗ್‌ಗೆ ಬರೆದ ಪತ್ರದಲ್ಲಿ ಬಸವರಾಜ್ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ವಕೀಲರು ಹೈಕೋರ್ಟ್ ವಕೀಲರಿಗಿಂತ ವೃತ್ತಿಪರವಾಗಿ ಹೆಚ್ಚು ಅರ್ಹರಾಗಿದ್ದಾರೆ ಎಂದು ಸ್ವಯಂಪ್ರೇರಿತವಾಗಿ ಘೋಷಿಸಿಕೊಳ್ಳುವ ಮೂಲಕ ವಕೀಲರ ಸಮುದಾಯಕ್ಕೆ ಅಪಮಾನ ಎಸಗಲಾಗಿದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ, ಪತ್ರದಲ್ಲಿನ ಆಕ್ಷೇಪಾರ್ಹ ಸಾಲುಗಳನ್ನು ಹಿಂಪಡೆಯುವ ಮೂಲಕ ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ ಪ್ರಾಕ್ಟೀಸ್ ಮಾಡುವ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಮಾಡಬೇಕು ಎಂದು ಬಸವರಾಜ್ ಎಚ್ಚರಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಸಂಬಂಧದ ಪ್ರಸ್ತಾವಕ್ಕೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಒಪ್ಪಿದ್ದಾರೆ ಎಂದು ಎಸ್‌ಸಿಬಿಎ ತನ್ನ ಸದಸ್ಯರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿತ್ತು. ಇದನ್ನು ಸಿಜೆಐ ಕಚೇರಿಯು ನಿರಾಕರಿಸಿದ್ದು, ಪ್ರಸ್ತಾವನೆಯು ಪರಿಗಣನೆಯಲ್ಲಿದೆ ಎಂದಷ್ಟೇ ಹೇಳಿತ್ತು.